ತಿ.ನರಸೀಪುರ: ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಹ್ಯಾಟ್ರಿಕ್ ಗೆಲುವನ್ನು ಜನರು ನೀಡುವ ಸಂಪೂರ್ಣ ವಿಶ್ವಾಸದೆ ಸಂಸದ ಆರ್.ಧ್ರುವನಾರಾಯಣ ಹೇಳಿದರು.
ಪಟ್ಟಣದಲ್ಲಿ ಅವರು ಮಾತನಾಡಿ, ಕಳೆದೆರಡು ಚುನಾವಣೆಗಳಲ್ಲಿ ವರುಣಾ ಮತ್ತು ತಿ.ನರಸೀಪುರ ಸೇರಿದಂತೆ ಲೋಕಸಭಾ ಕ್ಷೇತ್ರದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತದಾರರು ಹೆಚ್ಚಿನ ಮತಗಳ ಅಂತರದಲ್ಲಿ ನೀಡಿ ಸಂಸತ್ತಿಗೆ ಆಯ್ಕೆ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಟರಲ್ಲಿ ನಾಲ್ಕು ಕ್ಷೇತ್ರಗಳನ್ನು ಗೆದ್ದಿದ್ದರೆ, ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮುನ್ನಡೆಯಾಗಿದೆ.
ಮತದಾನ ಹಾಗೂ ಪಕ್ಷಕ್ಕೆ ಚಲಾವಣೆಗೊಂಡಿರುವ ಮತಗಳ ಪ್ರಮಾಣವೂ ಹೆಚ್ಚಾಗಿದೆ. ಆದ್ದರಿಂದ ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈಗಾಗಲೇ ಚುನಾವಣೆ ಸಿದ್ಧತೆಗಳು ಆರಂಭಗೊಂಡಿದ್ದು, ಎಲ್ಲರೂ ಕಾರೊನ್ಮುಖರಾಗಬೇಕಿದೆ ಎಂದು ಹೇಳಿದರು.
ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವ ಹಾಗೂ ಸುಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಾಯಕತ್ವದಲ್ಲಿ ನಡೆಯಲಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಜನರು ಮತ್ತೂಮ್ಮೆ ನಮ್ಮನ್ನು ಕೈ ಹಿಡಿಯುವ ನಂಬಿಕೆಯಿದೆ ಎಂದು ಸಂಸದ ಧ್ರುವನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಸಿ.ಉಮೇಶ, ಜಿಪಂ ಸದಸ್ಯರಾದ ಮಂಜುನಾಥನ್, ಮಾಜಿ ಸದಸ್ಯ ಕೆ.ಮಹದೇವ, ತಾಪಂ ಅಧ್ಯಕ್ಷ ಚೆಲುವರಾಜು, ಕೆ.ಎಸ್.ಗಣೇಶ್, ರಾಮಲಿಂಗಯ್ಯ, ಹ್ಯಾಕನೂರು ಉಮೇಶ್, ಮಾಜಿ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ, ಬಸವರಾಜು ಗಗ್ಗರಿ, ಹೆಳವರಹುಂಡಿ ಸೋಮು, ಪ್ರಶಾಂತ್‌ಬಾಬು, ಮಹೇಶ್ ಇನ್ನಿತರರಿದ್ದರು.