ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಬಟನ್ ಒತ್ತಿ ನಾವು ಹಾಕಿದ ಓಟು ನಮ್ಮ ಆಯ್ಕೆಯ ಅಭ್ಯರ್ಥಿಗೆ ಹೋಗಿದೆಯೇ, ಇಲ್ಲವೇ? ಎಂದು ಖಾತರಿಪಡಿಸಿಕೊಳ್ಳಲು ವಿವಿಪ್ಯಾಟ್ ಬಂದಿದೆ ಎಂದು ನಾವು ತಿಳಿದುಕೊಂಡಿದ್ದೇವೆ.
ಒಂದು ವೇಳೆ ವಿವಿಪ್ಯಾಟ್ ಬಗ್ಗೆ ಅನುಮಾನ ಮೂಡಿದರೆ ಅದನ್ನು ಪ್ರಶ್ನಿಸುವ ಅವಕಾಶವೂ ಇದೆ. ಅಂದರೆ, ಒಂದು ವೇಳೆ
ನಾನು “ಎ’ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಆದರೆ, ವಿವಿ ಪ್ಯಾಟ್‌ನಲ್ಲಿ “ಬಿ’ಅಭ್ಯರ್ಥಿಯ ಚೀಟಿ ಬಂದಿದೆ ಎಂದು ಯಾರಾದರೂ ಅನುಮಾನ ವ್ಯಕ್ತಪಡಿಸಿದರೆ ಚುನಾವಣಾ ಕಾಯ್ದೆ 1961ರ ಸೆಕ್ಷನ್ 49 (ಎಂ) ಪ್ರಕಾರ ಎರಡನೇ ಬಾರಿಗೆ ಮತ ಹಾಕಲು ಅವಕಾಶ ನೀಡಲಾಗುತ್ತದೆ. ಆದರೆ, ಅದಕ್ಕಾಗಿ ಮತದಾರ ತನ್ನ ಆರೋಪ ಮತ್ತು ಅನುಮಾನದ ಬಗ್ಗೆ ಲಿಖೀತ ಘೋಷಣಾ ಪತ್ರ (ಅμಡವಿಟ್) ನೀಡಬೇಕು.
ಚುನಾವಣಾಧಿಕಾರಿ ಅದನ್ನು ಪರಿಶೀಲಿಸಿ, ಒಂದು ವೇಳೆ ಆರೋಪ ಸುಳ್ಳಾದರೆ ಐಪಿಸಿ ಸೆಕ್ಷನ್ 170 ಪ್ರಕಾರ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇರುವುದನ್ನು ಸಂಬಂಧಪಟ್ಟ ಮತದಾರನಿಗೆ ವಿವರಿಸಲಾಗುತ್ತದೆ. ಆತ ಅದಕ್ಕೆ ಒಪ್ಪಿದಾಗ ಅರ್ಜಿ ನಮೂನೆ 17ರಲ್ಲಿ ಮತದಾರನ ವಿವರಗಳನ್ನು ದಾಖಲಿಸಿಕೊಂಡು ಪಕ್ಷದ ಅಭ್ಯರ್ಥಿಗಳು ಅಥವಾ ಏಜೆಂಟರು ಮತ್ತು ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಎರಡನೇ ಬಾರಿಗೆ ಮತ ಹಾಕಲು ಅವಕಾಶ ನೀಡಲಾಗುತ್ತದೆ. ಅದು ಸುಳ್ಳು ಎಂದು ಸಾಬೀತಾದರೆ ಶಿಕ್ಷೆಗೊಳಪಡಿಸಲಾಗುತ್ತದೆ.