Advertisement

ಮಣ್ಣಿನ ಲಂಬೋದರನಿಗೆ ಬಲು ಬೇಡಿಕೆ

03:03 PM Aug 30, 2022 | Team Udayavani |

ಸೇಡಂ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮಣ್ಣಿನ ಗಣಪನ ಮೂರ್ತಿಗಳ ಖರೀದಿ ಜೋರಾಗಿ ನಡೆದಿದೆ. ಆ.31ರಂದು ಮೂರ್ತಿ ಪ್ರತಿಷ್ಠಾಪನೆ ಮಾಡುವುದಕ್ಕೆ ತಾಲೂಕಾದ್ಯಂತ ಯುವಕರು ಭರ್ಜರಿ ತಯಾರಿ ನಡೆಸಿದ್ದಾರೆ.

Advertisement

ಹಿಂದೂಗಳ ಆರಾಧ್ಯ ದೈವ ವಿಘ್ನೇಶ್ವರನ ಉತ್ಸವವನ್ನು ಭಕ್ತಿ, ಶ್ರದ್ಧೆಯಿಂದ ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ. ಕೆಲವರು 3 ದಿನ, ಕೆಲವರು 5 ದಿನ, ಕೆಲವರು 9 ದಿನ ಹೀಗೆ ಮೋದಕಪ್ರಿಯನ ಮೂರ್ತಿಯನ್ನು ಮನೆ ಮತ್ತು ಹಲವು ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾರೆ. ಈ ಬಾರಿಯ ಗಣೇಶ ಉತ್ಸವಕ್ಕೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ನಿಂದ ತಯ್ನಾರಿಸಿದ ಮೂರ್ತಿಗಳಿಗೆ ಖಡಿವಾಣ ಹಾಕಲಾಗಿದೆ. “ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ ವಿಷಪೂರಿತ ರಾಸಾಯನಿಕ ಬಳಸಲಾಗುತ್ತದೆ ಎನ್ನುವ ಜಾಗೃತಿ ಜನರಲ್ಲಿ ಮೂಡಿದ ಕಾರಣ ಹೆಚ್ಚು ಜನರು ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿಯತ್ತ ಮುಖ ಮಾಡಿದ್ದಾರೆ.

ನೋಡಲು ಆಕರ್ಷಿಣೀಯವಾಗಿ ಕಾಣುವ ಬಣ್ಣದ ಗಣಪನ ಬದಲು ಪರಿಸರಕ್ಕೆ ಯಾವುದೇ ಹಾನಿ ಉಂಟು ಮಾಡದ ಗಣಪನನ್ನು ಈ ಬಾರಿ ಸ್ಥಾಪಿಸಲು ತಂಡೋಪ ತಂಡವಾಗಿ ಜನರು ಮಣ್ಣಿನ ಮೂರ್ತಿ ಖರೀದಿ ಮಾಡುತ್ತಿದ್ದಾರೆ.

 ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಗೂ ಪ್ಲಾಸ್ಟಿಕ್‌ ಯುಕ್ತ ಗಣೇಶ ಮೂರ್ತಿಗಳನ್ನು ತಯ್ನಾರಿಸುವುದನ್ನು ಸರ್ಕಾರ ನಿಷೇಧಿಸಿದೆ. ಆದರೂ ಕೆಲವರು ವಿಷಕಾರಿ ರಾಸಾಯನಿಕ ಉಳ್ಳ ಬಣ್ಣಗಳನ್ನು ಲೇಪಿಸಿದ ಮೂರ್ತಿಗಳನ್ನು ತಂದು ವಿನಾಯಕನ ಉತ್ಸವ ಮಾಡುತ್ತಾರೆ. ಅಪಾಯಕಾರಿ ಪಿಒಪಿ ಮೂತಿಗಳನ್ನು ತ್ಯಜಿಸಿ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸುವ ಪರಿಪಾಠ ಎಲ್ಲರೂ ಹಾಕಿಕೊಳ್ಳಬೇಕು. ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ ಎನ್ನುತ್ತಾರೆ ಪುರಸಭೆ ಅಧ್ಯಕ್ಷೆ ಶೋಭಾ ಹೂಗಾರ.

ಪ್ಲಾಸ್ಟರ್ಆಫ್ಪ್ಯಾರಿಸ್ನಿಂದ ಏನೆಲ್ಲ ತೊಂದರೆ: ಹಲವು ಜನರು ಪರಿಸರದ ಬಗ್ಗೆ ಕಾಳಜಿ ಇಟ್ಟು ಮಣ್ಣಿನ ಗಣಪನ್ನು ಪ್ರತಿಷ್ಠಾಪಿಸುತ್ತಿದ್ದರೆ ಕೆಲವರು ಬಣ್ಣದ ವಿಷಪೂರಿತ ಮೂರ್ತಿಗಳತ್ತ ಆಕರ್ಷಣೆಯಲ್ಲಿದ್ದಾರೆ. ವಿಷಪೂರಿತ ರಸಾಯನಿಕ ಬಳಸಿ ಮಾಡಲಾದ ಮೂರ್ತಿಗಳನ್ನು ನದಿ, ಕೆರೆ, ಬಾವಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ನೀರು ಕಲುಷಿತವಾಗುತ್ತದೆ. ಇದನ್ನು ಸೇವಿಸುವುದರಿಂದ ಜಾನುವಾರು, ಪಕ್ಷಿಗಳು ಸೇರಿದಂತೆ ನೀರಿನಲ್ಲಿರುವ ಜೀವಿಗಳಿಗೆ ತೊಂದರೆ ಉಂಟಾಗುತ್ತದೆ. ಅಲ್ಲದೇ ಈ ರೀತಿಯ ಮೂರ್ತಿ ವಿಸರ್ಜನೆಯಿಂದ ನೀರಿನ ಮೂಲಕ್ಕೂ ಕಂಟಕವಾಗಲಿದೆ ಎನ್ನುತ್ತಾರೆ ಧನಂಜಯ ಜೈನ್‌.

Advertisement

ಜನರಲ್ಲಿ ಮೂಡಿದ ಜಾಗೃತಿ: ಹಿಂದಿನ ವರ್ಷಗಳನ್ನು ಹೋಲಿಸಿದರೆ ಈ ಬಾರಿ ಜನರಲ್ಲಿ ಜಾಗೃತಿ ಮೂಡಿದೆ. ಅನೇಕರು ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸುವ ಕೆಲಸ ಮಾಡುತ್ತಿದ್ದಾರೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುವುದು ಜನರು ಅರಿತುಕೊಂಡಿದ್ದಾರೆ. ಇನ್ನೂ ಸ್ವಲ್ಪ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಅಲ್ಲಲ್ಲಿ ಕೆಲವು ಕಡೆಗಳಲ್ಲಿ ಪಿಒಪಿಯಿಂದ ತಯ್ನಾರಿಸಿದ ಮೂರ್ತಿಗಳನ್ನು ತರುತ್ತಿದ್ದಾರೆ. ಅವರಿಗೆ ಆ ಮೂರ್ತಿಗಳಿಂದಾಗುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎನ್ನುತ್ತಾರೆ ಕಂಪ್ಯೂಸಿಸ್‌ ಪಾಯಿಂಟ್‌ನ ನಿರ್ದೇಶಕ ದತ್ತಾತ್ರೇಯ ಐನಾಪೂರ.

ಸೇಡಂನಲ್ಲಿ ಪಿಒಪಿ ಗಣಪನ ವಿಗ್ರಹಗಳು ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಇದನ್ನು ಗಮನಿಸಿ ಹಲವು ವರ್ಷಗಳಿಂದ ನಾವು ಈ ಪರಿಸರ ಸ್ನೇಹಿ ಮಣ್ಣಿನ ಗಣಪನ ವಿಗ್ರಹಗಳನ್ನು ಮಾರಾಟ ಮಾಡಲು ಆರಂಭಿಸಿದ್ದೇವೆ. ಆರಂಭದ ದಿನಗಳಲ್ಲಿ ಖರೀದಿಗೆ ಜನರು ಆಸಕ್ತಿ ತೋರದಿದ್ದರೂ ನಂತರದಲ್ಲಿ ವರ್ಷದಿಂದ ವರ್ಷಕ್ಕೆ ಜನರಲ್ಲಿ ಬದಲಾವಣೆ ಕಾಣುತ್ತಿದೆ. ಪರಿಸರ ಸ್ನೇಹಿ ವಿಗ್ರಹಗಳನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಈ ವರ್ಷ 700 ಮೂರ್ತಿಗಳನ್ನು ಮಾರಾಟ ಮಾಡಲಾಗಿದೆ. ರಾಧಾಕೃಷ್ಣ ಕುಲಕರ್ಣಿ, ಮಳಿಗೆಯ ಮಾಲೀಕ

-ಸುಧೀರ ಎಸ್‌.ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next