ಹೊಸದಿಲ್ಲಿ : ಭಾರತೀಯ ಷೇರುಪೇಟೆಯಲ್ಲಿ ಗಮನಾರ್ಹ ಅಪಾಯವಿದೆ ಎಂದು ನಿಮ್ಮ ಗಮನಕ್ಕೆ ತರುವುದು ವಿರೋಧ ಪಕ್ಷದ ನಾಯಕನಾಗಿ ನನ್ನ ಕರ್ತವ್ಯ ಏಕೆಂದರೆ ಷೇರು ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಸ್ಥೆಗಳು ರಾಜಿ ಮಾಡಿಕೊಳ್ಳುತ್ತಿವೆ’ ಎಂದು ಕಾಂಗ್ರೆಸ್ ನಾಯಕ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾನುವಾರ (ಆಗಸ್ಟ್ 11 ) ಹೇಳಿಕೆ ನೀಡಿದ್ದಾರೆ.
ಎಕ್ಸ್ ನಲ್ಲಿ ವಿಡಿಯೋ ಹೇಳಿಕೆ ನೀಡಿರುವ ರಾಹುಲ್ ‘ಅದಾನಿ ಸಮೂಹದ ವಿರುದ್ಧದ ಅತ್ಯಂತ ಗಂಭೀರವಾದ ಆರೋಪವೆಂದರೆ ಅಕ್ರಮ ಷೇರು ಮಾಲಕತ್ವ ಮತ್ತು ಕಡಲಾಚೆಯ ನಿಧಿಯನ್ನು ಬಳಸಿಕೊಂಡು ಪಾಲು ಹೊಂದಿರುವುದು. SEBI ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಆ ನಿಧಿಗಳಲ್ಲಿಪಾಲು ಹೊಂದಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ. ಇದು ಸ್ಫೋಟಕ ಆರೋಪವಾಗಿದೆ. ಏಕೆಂದರೆ ಅಂಪೈರ್ ಸ್ವತಃ ರಾಜಿ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
‘ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಇನ್ನೂ ಏಕೆ ರಾಜೀನಾಮೆ ನೀಡಿಲ್ಲ ಎಂದು ದೇಶಾದ್ಯಂತ ಇರುವ ಪ್ರಾಮಾಣಿಕ ಹೂಡಿಕೆದಾರರು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ’ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
‘ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡರೆ, ಯಾರು ಜವಾಬ್ದಾರರಾಗುತ್ತಾರೆ? ಪ್ರಧಾನಿ ಮೋದಿ, ಸೆಬಿ ಅಧ್ಯಕ್ಷೆ ಅಥವಾ ಗೌತಮ್ ಅದಾನಿಯೇ” ಎಂದು ಪ್ರಶ್ನಿಸಿದ್ದಾರೆ.
”ಹೊಸ ಮತ್ತು ಅತ್ಯಂತ ಗಂಭೀರ ಆರೋಪಗಳು ಕಾಣಿಸಿಕೊಂಡಿದ್ದು ಸುಪ್ರೀಂ ಕೋರ್ಟ್ ಈ ವಿಷಯವನ್ನು ಮತ್ತೊಮ್ಮೆ ಸ್ವಯಂಪ್ರೇರಿತವಾಗಿ ಪರಿಶೀಲಿಸುತ್ತದೆಯೇ? ಈ ವಿಷಯವನ್ನು ಪರಿಶೀಲಿಸುತ್ತಿರುವ ಜೆಪಿಸಿ ವಿರುದ್ಧ ಪ್ರಧಾನಿ ಮೋದಿ ಏಕೆ ಇದ್ದಾರೆ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ರಾಹುಲ್ ಹೇಳಿದ್ದಾರೆ.