Advertisement

ಕೃಷಿ ಕಾಯ್ದೆಗಳ ಅನುಕೂಲ ತಿಳಿಸುವಲ್ಲಿ ಕೊರತೆಯಾಗಿದೆ

02:12 AM Nov 20, 2021 | Team Udayavani |

ಉಡುಪಿ: ಸಿಎಎಯಂತೆ ಕೃಷಿ ಕಾಯ್ದೆಯಲ್ಲೂ ಉದ್ದೇಶ ಪೂರ್ವಕ ಹೋರಾಟ ನಡೆದಿದೆ. ಬಿಜೆಪಿ ಸರಕಾರ, ನಾಯಕತ್ವ ಎಲ್ಲವನ್ನು ಮುಕ್ತವಾಗಿ ಸ್ವೀಕರಿಸುತ್ತದೆ. ಜನರ ಭಾವನೆ ಅರ್ಥಮಾಡಿಕೊಂಡು ನಿರ್ಧಾರ ಬದಲಾವಣೆ ಮಾಡಿದ್ದೇವೆ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಕೇಂದ್ರ ಸರಕಾರ ಕೃಷಿ ಕಾಯ್ದೆ ಹಿಂದಕ್ಕೆ ಪಡೆದಿರುವ ವಿಷಯವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಕಳೆದ 7 ವರ್ಷದಲ್ಲಿ ಚುನಾವಣೆ ಗಮನದಲ್ಲಿಟ್ಟುಕೊಂಡು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕೃಷಿಗೆ ಸಂಬಂಧಿಸಿದಂತೆ ರೂಪಿಸಿರುವ ಮೂರು ಕಾಯ್ದೆಗಳು ರೈತಪರವಾಗಿವೆ. ಅದರ ಪ್ರಯೋಜನಗಳನ್ನು ರೈತರಿಗೆ ಪರಿಣಾಮ ಕಾರಿಯಾಗಿ ತಿಳಿಸುವುದರಲ್ಲಿ ಕೊರತೆಯಾಗಿದೆ. ಹೀಗಾಗಿ ಕಾಯ್ದೆ ವಾಪಸ್‌ ಪಡೆಯಲಾಗಿದೆ ಎಂದು ಸ್ವತಃ ಮೋದಿಯವರೇ ಹೇಳಿದ್ದಾರೆ. ರೈತ ಪರವಾಗಿರುವ ಕಾರಣಕ್ಕೆ ರೈತರ ಭಾವನೆ ಅರ್ಥಮಾಡಿಕೊಂಡಿದ್ದೇವೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಏನು ಮಾಡಬೇಕು ಎಂಬುದನ್ನು ಕೇಂದ್ರ ಸರಕಾರ ಯೋಚಿಸಲಿದೆ ಎಂದರು.

ಇದನ್ನೂ ಓದಿ:ಬೆಳೆ ಹಾನಿ ವರದಿಗೆ ಸೂಚನೆ: ಶೋಭಾ ಕರಂದ್ಲಾಜೆ

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೃಷಿಕರಿಗೆ ಆರ್ಥಿಕವಾಗಿ ಶಕ್ತಿ ನೀಡಲು ಕಾಯ್ದೆ ರೂಪಿಸಲಾಗಿತ್ತು. ಕೇಂದ್ರ ಸರಕಾರ ಪ್ರತಿಭಟನಕಾರರಿಗೆ ಮಣಿದಿದೆ ಎನ್ನುವುದು ಸರಿಯಲ್ಲ. ಕಾಯ್ದೆಗೆ ಮತ್ತಷ್ಟು ತಿದ್ದುಪಡಿ ತಂದು ಮರು ಮಂಡನೆ ಮಾಡಬಹುದು ಎಂದರು.

ರೈತರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ಸಾಕಷ್ಟು ವಿಮರ್ಶೆಗೆ ಒಳಪಡಿಸಿ, ರಾಷ್ಟ್ರ ಮಟ್ಟದಲ್ಲಿ ತಿಳುವಳಿಕೆ ಪಡೆದುಕೊಂಡು ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ.
– ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ

Advertisement

ಮೂರು ಕಾಯ್ದೆಗಳೂ ರೈತರ ಪರವಾಗಿವೆ. ರೈತರ ಆದಾಯ ದ್ವಿಗುಣ ಮಾಡಲು ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದ್ದೆವು. ರೈತರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟು, ರೈತರೊಂದಿಗೆ ಪ್ರಧಾನಿ ಮೋದಿ ಸರಕಾರ ಇರಲಿದೆ.
– ಡಿ.ವಿ. ಸದಾನಂದ ಗೌಡ,
ಕೇಂದ್ರದ ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next