Advertisement

Katapadi ;ಕೃಷಿ ಭೂಮಿಯತ್ತ ಹೊಳೆ ನೀರು ನುಗ್ಗುವ ಭೀತಿ

03:47 PM Jun 04, 2023 | Team Udayavani |

ಕಟಪಾಡಿ: ಕೋಟೆ ಗ್ರಾಮದ ಮಟ್ಟು ಪಿನಾಕಿನಿ ಹೊಳೆಯ ನಡುವೆ ಪರೆಂಕುದ್ರು ಬಳಿ ಹೊಳೆಯಲ್ಲಿ ಕಾಂಡ್ಲ ಗಿಡಗಳನ್ನು ಹೇರಳ ಪ್ರಮಾಣದಲ್ಲಿ ನಾಟಿ ಮಾಡುತ್ತಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.

Advertisement

ಈಗಾಗಲೇ ಮಟ್ಟು ಪಿನಾಕಿನಿ ಹೊಳೆಯ ನಡುವೆ ಕಳೆ ಗಿಡಗಳು ಬೆಳೆದು ಹೊಳೆಯ ನೀರು ಸರಾಗವಾಗಿ ಹರಿಯುವಿಕೆಗೆ ಸಮಸ್ಯೆ ತಂದೊಡ್ಡುತ್ತಿದೆ. ಹೊಳೆಯ ನೀರು ತಿರುವು ಪಡೆದುಕೊಂಡು ವಿಭಜನೆಗೊಂಡು ಜನವಸತಿ ಭೂಪ್ರದೇಶ ಮತ್ತು ಕೃಷಿ ಕ್ಷೇತ್ರಕ್ಕೆ ನೀರು ನುಗ್ಗುತ್ತಿರುವ ಸಮಸ್ಯೆಯ ನಡುವೆಯೇ ಮತ್ತೆ ಪರೆಂಕುದ್ರು ಬಳಿ ಹೊಳೆಯಲ್ಲಿ ಸ್ಥಳೀಯರನ್ನು ಬಳಸಿಕೊಂಡು ನೀರಿನ ಇಳಿಕೆಯ ಸಂದರ್ಭ ಮತ್ತೆ ಕಾಂಡ್ಲ ಗಿಡಗಳನ್ನು ಹೇರಳ ಪ್ರಮಾಣದಲ್ಲಿ ನಾಟಿ ಮಾಡುತ್ತಿರುವುದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಈಗಾಗಲೇ ಕೋಟೆ ಗ್ರಾ.ಪಂ. ಆಡಳಿತದ ಗಮನಕ್ಕೆ ತರಲಾಗಿದ್ದು, ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದೀಗ ನಾಟಿ ನಡೆಸಿದ ಹೊಳೆಯ ಪ್ರದೇಶದ ಬಳಿ ನಿರ್ಮಿಸಲಾಗಿರುವ ರಸ್ತೆಗೆ ಅಳವಡಿಸಲಾದ ಸಿಮೆಂಟ್‌ ಪೈಪ್‌ ಈ ಗಿಡಗಳು ಬೆಳೆದು ನಿಂತಲ್ಲಿ ಮುಂದಿನ ಮಳೆಗಾಲದಲ್ಲಿ ಮುಚ್ಚುವ ಸಾಧ್ಯತೆ ಇದ್ದು, ಮತ್ತೆ ನೀರು ಉಕ್ಕೇರಿ ಹರಿದು ಸಮಸ್ಯೆಯನ್ನು ಉಂಟು ಮಾಡಲಿದೆ. ನೆರೆ ನೀರು ಉಕ್ಕಿ ಹರಿಯುವ ವೇಳೆಯಲ್ಲಿ ಹೊಳೆಯ ನೀರಿನ ಜತೆಗೆ ವಿಷದ ಹಾವುಗಳು, ಅಪಾಯಕಾರಿ ತ್ಯಾಜ್ಯವೂ ಸಮೀಪದ ಕೃಷಿ ಗದ್ದೆ, ವಸತಿ ಪ್ರದೇಶದತ್ತ ಬರುವುದರಿಂದ ಮತ್ತಷ್ಟು ಅಪಾಯವು ಕಟ್ಟಿಟ್ಟ ಬುತ್ತಿಯಾಗಿದೆ.

ಈ ಬಗ್ಗೆ ಈಗಾಗಲೇ ಗ್ರಾಮಸಭೆ ಯಲ್ಲಿಯೂ ವಿರೋಧವನ್ನು ವ್ಯಕ್ತಪಡಿಸ ಲಾಗಿದ್ದು, ಕಳೆ ಗಿಡಗಳನ್ನು ನಿರ್ವಹಣೆ ಮಾಡುವಂತೆ ವಿನಂತಿಸಿಕೊಂಡಿದ್ದರೂ ಯಾವುದೇ ಪ್ರತಿಫಲ ಇಲ್ಲವಾಗಿದ್ದು, ಇದೀಗ ಮತ್ತೆ ಕಾಂಡ್ಲ ಗಿಡಗಳನ್ನು ನಾಟಿ ಮಾಡುತ್ತಿರುವುದು ರೈತರು, ಹೊಳೆಯ ತೀರದ ನಿವಾಸಿಗಳಿಗೆ ಮತ್ತಷ್ಟು ಅಪಾಯಕಾರಿ ಪರಿಣಮಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಿನಲ್ಲಿ ಆಮ್ಲಜನಕ ಮಟ್ಟದ ವೃದ್ಧಿ, ಮೀನುಗಾರಿಕೆ ಸಹಕಾರಿ, ಸುನಾಮಿ ಸಂದರ್ಭ ಸಹಕಾರಿಯಾಗಿ ಕಾಂಡ್ಲ ನಾಟಿಯ ಬಗ್ಗೆ ಕೇಂದ್ರ ಸರಕಾರದ ಇಕೋ ಬಜೆಟ್‌ ಯೋಜನೆಯಾಗಿದೆ. ಸ್ಥಳೀಯ ಮೀನುಗಾರರ ದೋಣಿ ಸುಗಮ ಸಂಚಾರಕ್ಕೆ ಅವಕಾಶ ಇದೆ. ಮಣ್ಣಿನ ಸವಕಳಿ ತಡೆಯುತ್ತದೆ. ಹೊಳೆ ಕೊರೆತವನ್ನು ತಡೆಯುತ್ತದೆ. ತಡೆ ಬೇಲಿ ಆಗದೆ, ಬೇರು ಮಾತ್ರ ಬೆಳೆಯುವುದರಿಂದ ಗದ್ದೆಯತ್ತ ನೀರು ನುಗ್ಗುವುದು ಅಸಾಧ್ಯ. ಕಾಡಿನ ರೀತಿಯಲ್ಲಿ ಬೆಳೆದು ನಿಂತ ಕಾಂಡ್ಲ ವನದಿಂದ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯ. ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ.
ಸುಬ್ರಹ್ಮಣ್ಯ ಆಚಾರ್‌,
ರೇಂಜ್‌ ಫಾರೆಸ್ಟ್‌ ಆಫೀಸರ್‌, ಉಡುಪಿ

Advertisement

ಈ ಸಮಸ್ಯೆಯ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಪರಿಹಾರ ಶೂನ್ಯವಾಗಿದೆ. ಸ್ಥಳೀಯರನ್ನು ಬಳಸಿಕೊಂಡು ಹೊಳೆಯ ನಡುವೆ ಮತ್ತಷ್ಟು ಗಿಡಗಳ ನಾಟಿಯನ್ನು ಮಾಡುತ್ತಿದ್ದಾರೆ. ಸ್ಥಳೀಯ ಕೃಷಿಕರು, ಮಟ್ಟು ಪ್ರದೇಶದ ಗ್ರಾಮಸ್ಥರು ಸಮಸ್ಯೆಯನ್ನು ಬಗೆಹರಿಸುವಂತೆ ವಿನಂತಿಸಿದ್ದು, ಅರಣ್ಯ ಇಲಾಖೆಯ ಗಮನಕ್ಕೆ ಮತ್ತೆ ತರಲಾಗುತ್ತದೆ.
– ಕಿಶೋರ್‌ ಕುಮಾರ್‌ ಅಂಬಾಡಿ, ಅಧ್ಯಕ್ಷರು, ಕೋಟೆ ಗ್ರಾ.ಪಂ.

ಸಮಸ್ಯೆಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಗ್ರಾಮಸ್ಥರು, ಕೃಷಿಕರಿಗೆ ತೊಂದರೆ ಉಂಟು ಮಾಡುವ ಕಳೆ ಗಿಡಗಳ ಸಮಸ್ಯೆಯ ಬಗ್ಗೆ ಗಮನ ಹರಿಸುವಂತೆ ಕೈಗೊಂಡ ನಿರ್ಣಯವನ್ನು ಅರಣ್ಯ ಇಲಾಖಾಧಿಕಾರಿಗೆ ಕಳುಹಿಸಲಾಗುತ್ತದೆ.
– ಶ್ರುತಿ ಕಾಂಚನ್‌, ಪಿಡಿ, ಕೋಟೆ ಗ್ರಾ.ಪಂ.


 -ವಿಜಯ ಆಚಾರ್ಯ, ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next