Advertisement

ರಾಜ್ಯ ಕಮಲ ಪಾಳಯದಲ್ಲಿ ಭಿನ್ನರಾಗಕ್ಕೆ ತಲ್ಲಣ

03:50 AM Apr 28, 2017 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಆಂತರಿಕ ಕಚ್ಚಾಟ ಇನ್ನಷ್ಟು ಬಿಗಡಾಯಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ಈಶ್ವರಪ್ಪ ಅವರ ಬಣಗಳು ಸವಾಲು-ಪ್ರತಿಸವಾಲು ಹಾಕಿಕೊಳ್ಳುವ ಮೂಲಕ ಮತ್ತೂಮ್ಮೆ ಹೈಕಮಾಂಡ್‌ಗೆ ಇಕ್ಕಟ್ಟಿನ ಪರಿಸ್ಥಿತಿ ಉಂಟುಮಾಡಿದ್ದಾರೆ.

Advertisement

ಶುಕ್ರವಾರ ಬಿಕ್ಕಟ್ಟು ಕುರಿತ ವರದಿ ವರಿಷ್ಠರ ಕೈಸೇರುವ ಸಾಧ್ಯತೆ ಇದ್ದು, ಇದಾದ ಬಳಿಕ ಎರಡೂ ಕಡೆಯಿಂದ ಮಾಹಿತಿ ಸಂಗ್ರಹಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಬಿಕ್ಕಟ್ಟು ಶಮನಕ್ಕೆ ಪ್ರಯತ್ನ ಆರಂಭಿಸಲಿದ್ದಾರೆ ಎಂದು ಹೇಳಲಾಗಿದೆ. ಯಡಿಯೂರಪ್ಪ ಅವರು ಗುರುವಾರವೇ ತಮ್ಮ ಆಪ್ತರೊಂದಿಗೆ ಕುಳಿತು ವರಿಷ್ಠರಿಗೆ ಸಲ್ಲಿಸಬೇಕಾದ ವರದಿ ಸಿದ್ಧಪಡಿಸಿದ್ದಾರೆ.

ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಕೆಲವು ಮುಖಂಡರು ಗುರುವಾರ ಈಶ್ವರಪ್ಪ ನೇತೃತ್ವದಲ್ಲಿ “ಸಂಘಟನೆ ಉಳಿಸಿ’ ಸಭೆ ನಡೆಸಿ ಯಡಿಯೂರಪ್ಪ ಮತ್ತು ಬೆಂಬಲಿಗರ ವಿರುದ್ಧ ಕಿಡಿ ಕಾರುತ್ತಿದ್ದಂತೆ ಅತ್ತ ಯಡಿಯೂರಪ್ಪ ಬಣ, ಈಶ್ವರಪ್ಪ ಮತ್ತಿತರರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ. ಇನ್ನೊಂದೆಡೆ ಸ್ವತಃ ಯಡಿಯೂರಪ್ಪ ಅವರೇ ಭಿನ್ನಮತದ ಬಗ್ಗೆ ಮೌನ ಮುರಿದಿದ್ದು, ಎಲ್ಲಾ ಅವಾಂತರಗಳಿಗೆ ಈಶ್ವರಪ್ಪ ಮತ್ತು ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ಅವರೇ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ.

ಇದೆಲ್ಲದರ ಮಧ್ಯೆ ಶನಿವಾರ ದೆಹಲಿಗೆ ತೆರಳಬೇಕಾಗಿದ್ದ ಯಡಿಯೂರಪ್ಪ ಅವರು ತಮ್ಮ ಪ್ರವಾಸವನ್ನು ಹಿಂದೂಡಿದ್ದು, ಗುರುವಾರವೇ ದೆಹಲಿಗೆ ತೆರಳಿ ರಾಜ್ಯದಲ್ಲಿ ನಡೆದಿರುವ ವಿದ್ಯಮಾನಗಳನ್ನು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರ ಮೂಲಕ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಗಮನಕ್ಕೆ ತರಲಿದ್ದಾರೆ ಎಂದು ತಿಳಿದುಬಂದಿದೆ.

ಬಿಕ್ಕಟ್ಟಿಗೆ ಸಂತೋಷ್‌ ಅವರೊಂದಿಗೆ ಈಶ್ವರಪ್ಪ ಅವರ ಈ ಕೆಲಸದ ಹಿಂದೆ ಇನ್ನಷ್ಟು ಮಂದಿ ಇದ್ದಾರೆ ಎಂದು ಯಡಿಯೂರಪ್ಪ ಹೇಳಿರುವುದರಿಂದ ರಾಷ್ಟ್ರೀಯ ನಾಯಕರಿಗೆ ಪಕ್ಷದಲ್ಲಿರುವ ಭಿನ್ನಮತ ಹೋಗಲಾಡಿಸುವುದು ಸವಾಲಿನ ಕೆಲಸವೇ ಆಗಲಿದೆ. ರಾಷ್ಟ್ರೀಯ ನಾಯಕರ ಹೆಸರು ಪ್ರಸ್ತಾಪವಾಗಿರುವುದರಿಂದ ಸ್ವತಃ ಅಮಿತ್‌ ಶಾ ಅವರೇ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.

Advertisement

ಶುಕ್ರವಾರ ಬಿಎಸ್‌ಬೈ ದೆಹಲಿಗೆ
ಶುಕ್ರವಾರ ದೆಹಲಿಗೆ ತೆರಳಲಿರುವ ಯಡಿಯೂರಪ್ಪ ಅವರು ಪಕ್ಷದಲ್ಲಿ ಪ್ರಸಕ್ತ ನಡೆಯುತ್ತಿರುವ ವಿದ್ಯಮಾನ, ಗುರುವಾರ ಅತೃಪ್ತರು ನಡೆಸಿದ ಸಭೆ, ಇದರ ಹಿಂದೆ ಇರುವ ನಾಯಕರ ಕುರಿತು ನೇರವಾಗಿ ವರದಿ ನೀಡಲಿದ್ದಾರೆ. ಇದನ್ನು ಪರಿಶೀಲಿಸಿದ ಬಳಿಕ ಮತ್ತೂಂದು ಗುಂಪಿನ ಅಭಿಪ್ರಾಯವನ್ನೂ ಪಡೆದು ಅಮಿತ್‌ ಶಾ ಅವರು ಅಖಾಡಾಕ್ಕೆ ಇಳಿಯಲಿದ್ದಾರೆ. ಭಿನ್ನಮತ ಶಮನಗೊಳಿಸಲು ಸಾಧ್ಯವೇ ಅಥವಾ ಶಿಸ್ತು ಕ್ರಮ ಕೈಗೊಳ್ಳಬೇಕೇ ಎಂಬುದನ್ನು ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಆರೋಪ-ಪ್ರತ್ಯಾರೋಪ:
ಅಸಮಾಧಾನಿತರ ಸಭೆ ಕುರಿತಂತೆ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ಆಂತರಿಕ ವಿಚಾರಗಳನ್ನು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುವುದನ್ನು ಬಿಟ್ಟು ಬಹಿರಂಗವಾಗಿ ಚರ್ಚಿಸುವುದು ಸರಿಯಲ್ಲ. ಅತೃಪ್ತರ ಹಿಂದೆ ಸಂತೋಷ್‌ ಅವರು ಇರುವುದರಿಂದಲೇ ಅವರು ಈ ಕೆಲಸ ಮಾಡುತ್ತಿದ್ದಾರೆ. ಬ್ರಿಗೇಡ್‌ ಬೇಡ ಎಂದು ವರಿಷ್ಠರು ಹೇಳಿದರೂ ಈಶ್ವರಪ್ಪ ಮುಂದುವರಿಯುತ್ತಿದ್ದು, ಪಕ್ಷ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅರಮನೆ ಮೈದಾನದಲ್ಲಿ ಅಸಮಾಧಾನಿತ ಗುಂಪು ಏರ್ಪಡಿಸಿದ್ದ ಸಂಘಟನೆ ಉಳಿಸಿ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ಬ್ರಿಗೇಡ್‌ ಮುಂದುವರಿಸುವಂತೆ ಅಮಿತ್‌ ಶಾ ಸೂಚನೆ ನೀಡಿದ್ದರಿಂದಲೇ ನಾನು ನಡೆದುಕೊಳ್ಳುತ್ತಿದ್ದೇನೆ. ಆದರೆ, ಯಡಿಯೂರಪ್ಪ ಅವರು ಅಮಿತ್‌ ಶಾ ನೀಡಿದ ಸೂಚನೆ ಪಾಲಿಸುತ್ತಿಲ್ಲ. ಹಿಂದೆ ಕೆಜೆಪಿ ಕಟ್ಟುವಂತೆ ಪ್ರೇರೇಪಿಸಿ ಮಣ್ಣುಮುಕ್ಕಿಸಿದಂತಹವರ ಮಾತು ಕೇಳಿಕೊಂಡು ನಮಗೆ ಎಚ್ಚರಿಕೆ ಕೊಡಿಸುತ್ತಿದ್ದಾರೆ. ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಹೇಳಿದರು.

ಅಲ್ಲದೆ, ಈಶ್ವರಪ್ಪ ಮತ್ತು ಸಭೆಯಲ್ಲಿ ಹಾಜರಿದ್ದ ಇತರೆ ಮುಖಂಡರು, ತಮ್ಮ ಹಿಂಬಾಲಕರ ಮಾತು ಕೇಳಿಕೊಂಡು ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರೆ, ಅದಕ್ಕೆ ತಿರುಗೇಟು ನೀಡಿದ ಯಡಿಯೂರಪ್ಪ ಬೆಂಬಲಿಗ ಕೆಲವು ಶಾಸಕರು, ಯಡಿಯೂರಪ್ಪ ಅವರನ್ನು ಪ್ರಶ್ನಿಸುವವರು ಪಕ್ಷಕ್ಕೆ ಬೇಡ. ಅವರನ್ನು ವಜಾಗೊಳಿಸಿ ಎಂದು ಒತ್ತಾಯಿಸಿದರು.

ಸಂಘಟನೆ ಉಳಿಸಿ ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು
ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, ಸದಸ್ಯರಾದ ಸೋಮಣ್ಣ ಬೇವಿನಮರದ, ಭಾನುಪ್ರಕಾಶ್‌ (ರಾಜ್ಯ ಬಿಜೆಪಿ ಉಪಾಧ್ಯಕ್ಷ), ಮಾಜಿ ಸಚಿವರಾದ ಸೊಗಡು ಶಿವಣ್ಣ, ಎಸ್‌.ಎ.ರವೀಂದ್ರನಾಥ್‌, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನಾ, ಮಾಜಿ ಶಾಸಕರಾದ ಕುಮಾರಸ್ವಾಮಿ, ಆರ್‌.ಕೆ.ಸಿದ್ದರಾಮಣ್ಣ, ಸಿದ್ದರಾಜು, ಡಾ.ಡಿ.ಬಿ.ಗಂಗಪ್ಪ, ಸಾರ್ವಭೌಮ ಬಗಲಿ, ಬಸವರಾಜ ನಾಯ್ಕ, ಡಾ.ಎಚ್‌.ಶಿವಯೋಗಿಸ್ವಾಮಿ, ರಾಜ್ಯ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಶ್ರೀಲತಾ ಪೂರ್ಣಚಂದ್ರ.

ಇಕ್ಕಟ್ಟಿನಲ್ಲಿ ವರಿಷ್ಠರು
ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಹಿಂದೆ ಪಕ್ಷದ ರಾಷ್ಟ್ರೀಯ ನಾಯಕರ ಹೆಸರು ಬಂದಿರುವುದರಿಂದ ಸಮಸ್ಯೆ ಬಗೆಹರಿಸುವ ವಿಚಾರದಲ್ಲಿ ಪಕ್ಷದ ವರಿಷ್ಠರು ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಯಡಿಯೂರಪ್ಪ ಅವರು ಸಂತೋಷ್‌ ಒಬ್ಬರ ಹೆಸರನ್ನು ಬಹಿರಂಗಪಡಿಸಿದರಾದರೂ ಇನ್ನೂ ಕೆಲವರಿದ್ದಾರೆ ಎಂದು ಯಾರ ಹೆಸರನ್ನೂ ಉಲ್ಲೇಖೀಸದೆ ಹೇಳಿದ್ದಾರೆ. ಹೀಗಾಗಿ ಆ ನಾಯಕರು ಯಾರು ಎಂಬುದನ್ನು ಗುರುತಿಸುವ ಕೆಲಸವನ್ನು ವರಿಷ್ಠರು ಮಾಡಬೇಕಾಗುತ್ತದೆ.

ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿರುವ ಈಶ್ವರಪ್ಪ ಸೇರಿದಂತೆ ಇತರೆ ಮುಖಂಡರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿಯಿಂದ ವರಿಷ್ಠರನ್ನು ಒತ್ತಾಯಿಸಲು ತೀರ್ಮಾನಿಸಲಾಗಿದೆ. ಆದರೆ, ಬಿಕ್ಕಟ್ಟಿಗೆ ಪ್ರಮುಖ ಕಾರಣಕರ್ತರು ಎಂದು ಹೇಳಲಾದ ಸಂತೋಷ್‌ ಅವರು ಆರ್‌ಎಸ್‌ಎಸ್‌ ಸಂಘನೆಯಿಂದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕಗೊಂಡವರು. ಹೀಗಾಗಿ ಅವರ ವಿರುದ್ಧ ಮತ್ತು ಅವರ ಮಾತಿನಂತೆ ನಡೆದುಕೊಳ್ಳುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಕಷ್ಟಸಾಧ್ಯ.

ಹೀಗಾಗಿ ಬಿಕ್ಕಟ್ಟು ಶಮನ ಮಾಡಲು ಸಂಧಾನವೊಂದೇ ಸದ್ಯಕ್ಕಿರುವ ಪ್ರಮುಖ ದಾರಿ. ಅಸಮಾದಾನಿತರ ಗುಂಪಿನ ಕೋರಿಕೆಯಂತೆ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಯಾಗದಿದ್ದರೆ ಸಂತೋಷ್‌, ಈಶ್ವರಪ್ಪ ಮತ್ತಿತತರರು ಸಂಧಾನಕ್ಕೆ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಇನ್ನೊಂದೆಡೆ ಅಸಮಾಧಾನಿತರು ಹೇಳಿದಂತೆ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಯಡಿಯೂರಪ್ಪ ಅವರು ಒಪ್ಪಿಕೊಳ್ಳುವುದು ಕಷ್ಟ. ಹೀಗಾಗಿ ಈ ಬಿಕ್ಕಟ್ಟನ್ನು ಅಮಿತ್‌ ಶಾ ಅವರು ಹೇಗೆ ಪರಿಹರಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಕೆ.ಎಸ್‌.ಈಶ್ವರಪ್ಪ ಮತ್ತು ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರೇ ಕಾರಣ. ಪಕ್ಷದಲ್ಲಿ ಗೊಂದಲ ಉಂಟುಮಾಡುವ ಮೂಲಕ ಈಶ್ವರಪ್ಪ ಮತ್ತು ಕಂಪೆನಿ ಕಾಂಗ್ರೆಸ್‌ಗೆ ಸಹಾಯವಾಗುವಂತೆ ನಡೆದುಕೊಳ್ಳುತ್ತಿದೆ. ಎಲ್ಲವನ್ನೂ ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದಾರೆ ಎಂದಿದ್ದಾರೆ. ನಾಳೆಯಿಂದ ನನ್ನ ಕೆಲಸ ಆರಂಭಿಸುತ್ತೇನೆ.
– ಬಿ.ಎಸ್‌.ಯಡಿಯೂರಪ್ಪ

ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಅಧ್ಯಕ್ಷರು, ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದಾಗ ಖುಷಿಯಿಂದ ಒಪ್ಪಿಕೊಂಡಿದ್ದೇವೆ. ಹಾಗೆಂದು ಅವರಿಗೆ  ಬೇಕಾದ್ದು ಮಾಡಿಕೊಂಡು ಹೋದರೆ ಸುಮ್ಮನಿರಲು ಸಾಧ್ಯವಿಲ್ಲ. ಸರ್ವಾಧಿಕಾರಿ ಧೋರಣೆ ಬಿಜೆಪಿಯಲ್ಲಿ ನಡೆಯುವುದಿಲ್ಲ. ಇದನ್ನು ಪ್ರಶ್ನಿಸಿ ಸಭೆ ನಡೆಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದರೆ ಇಲ್ಲಿ ಕೂತವರು ನಾಯಿ-ನರಿಗಳಲ್ಲ, ಹುಲಿಗಳು. ಹೆದರುವವರಲ್ಲ.
– ಕೆ.ಎಸ್‌.ಈಶ್ವರಪ್ಪ

ಬಿಕ್ಕಟ್ಟು ಶಮನಕ್ಕೆ ಸಭೆ ಕರೆಯುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಯಡಿಯೂರಪ್ಪ ಸಭೆ ಕರೆದರೆ ಹೋಗುವುದಿಲ್ಲ. ಏಕೆಂದರೆ, ಆ ಸಭೆಯಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗುವುದಿಲ್ಲ ಎಂಬುದು ನಮಗೆ ಸ್ಪಷ್ಟವಾಗಿ ಗೊತ್ತಿದೆ. ಹೀಗಾಗಿ ಅಮಿತ್‌ ಶಾ ಅವರು ನೇಮಿಸಿರುವ ನಾಲ್ಕು ಮಂದಿಯ ಸಭೆಗೆ ಮಾತ್ರ ಹಾಜರಾಗುತ್ತೇವೆ. ಈ ವಿಚಾರದಲ್ಲಿ ಬದಲಾವಣೆ ಇಲ್ಲ.
– ಸೊಗಡು ಶಿವಣ್ಣ

Advertisement

Udayavani is now on Telegram. Click here to join our channel and stay updated with the latest news.

Next