Advertisement

ಪ್ರತಿ ಅಗುಳಿಗೂ ಲೆಕ್ಕ ಇರುತ್ತದೆ!

09:59 AM Jan 31, 2020 | mahesh |

ಆಗರ್ಭ ಶ್ರೀಮಂತನ ಮಗ ಮುರಳಿ ಮತ್ತು ಕಡು ಬಡತನದಿಂದ ಇರುವ ರಾಜು ಇವರಿಬ್ಬರೂ ಒಂದೇ ಶಾಲೆಯ ಆರನೇ ಕ್ಲಾಸಿನಲ್ಲಿ ಓದು ಬರಹ ಕಲಿಯುತ್ತಿದ್ದರು. ಒಂದು ದಿನ ಮಧ್ಯಾಹ್ನ ಶಾಲೆಯಲ್ಲಿ ಊಟಕ್ಕೆ ಬಿಟ್ಟಾಗ ರಾಜು ಮತ್ತು ಮುರಳಿ ಒಂದೇ ಕಡೆ ಕೂತು ತಿನ್ನಲು ಡಬ್ಬಿಯನ್ನು ತೆರೆದರು. ಮುರಳಿ ವಿಧವಿಧ ಭಕ್ಷ್ಯಗಳಿಂದ ಕೂಡಿದ ಅಹಾರವನ್ನು ಡಬ್ಬಿಯಿಂದ ತೆರೆದಿಟ್ಟ. ರಾಜು ತೀರಾ ಮುಜುಗರದಿಂದ ಬುತ್ತಿ ತೆರೆದ. ಅವನ ಡಬ್ಬಿಯಲ್ಲಿ ಅನ್ನದ ಜೊತೆ ಒಂದಿಷ್ಟು ಈರುಳ್ಳಿ ಚಟ್ನಿ ಇತ್ತು. ಅದನ್ನು ನೋಡಿದ ಶ್ರೀಮಂತ ಹುಡುಗ ಮುರಳಿ “ಇದೇನು ರಾಜು ನಿನ್ನೆ ಮಾಡಿದ ಅನ್ನದ ಜೊತೆಗೆ ತಿನ್ನಲಿಕ್ಕೇ ಆಗದೇ ಇರುವಂಥ ಗೊಡ್ಡು ಖಾರದ ಚಟ್ನಿಯನ್ನು ತಂದಿರುವೆ? ಇದನ್ನು ಹೇಗೆ ತಿನ್ನುತ್ತೀಯಾ?’ ಎಂದು ರಾಜುವನ್ನು ಕೇಳಿದ. “ನಮ್ಮ ಮನೆಯಲ್ಲಿ ಒಂದು ಹೊತ್ತು ಮಾತ್ರ ಅಡುಗೆ ಮಾಡುತ್ತಾರೆ’ ಎಂದು ರಾಜು ಉತ್ತರಿಸಿದ. ಈ ಮಾತು ಕೇಳಿದ ಮುರಳಿಯ ಮನಸ್ಸು ಕರಗಿ ನೀರಾಯಿತು.

Advertisement

ಮುರಳಿಗೆ ಬಡತನ ಎಂದರೆ ಏನೆಂದೇ ತಿಳಿದಿರಲಿಲ್ಲ. ಅವನು ರಾಜುವಿಗೆ, ಆ ತಂಗಳಅನ್ನ ಬಿಸಾಕುವಂತೆ ಹೇಳಿ ತನ್ನ ಮನೆಯ ಆಹಾರವನ್ನು ನೀಡಿದ. ರಾಜು ಅದನ್ನು ನಿರಾಕರಿಸಿ “ಇಲ್ಲ ಮುರಳಿ ಈ ಅನ್ನದ ಹಿಂದೆ ನನ್ನ ತಂದೆ ತಾಯಿಯ ಶ್ರಮವಿದೆ. ಅವರು ಸುರಿಸಿದ ಬೆವರಿನ ಒಂದೊಂದು ಹನಿಗೂ ಲೆಕ್ಕ ಇದೆ. ಕಷ್ಟಪಟ್ಟು ಸಂಪಾದಿಸಿರುವ ಈ ಅನ್ನದ ಹಿಂದೆ ಕೇವಲ ನನ್ನ ಹೆತ್ತವವರದಷ್ಟೇ ಅಲ್ಲ ನೂರಾರು ಜನರ ಪರಿಶ್ರಮವಿದೆ. ಇದನ್ನು ಬಿಸಾಡ‌ಬಾರದು’ ಎಂದು ಬುದ್ಧಿ ಹೇಳಿದನು. ರಾಜುವಿನ ಮಾತುಗಳು ಮುರಳಿಯನ್ನು ಯೋಚನೆಗೆ ಈಡುಮಾಡಿತು. ರಾಜುವಿನ ಪ್ರಜ್ಞಾವಂತಿಕೆ ಕಂಡು ಮುರಳಿಗೆ ಅವನ ಮೇಲೆ ಅಭಿಮಾನ ಮತ್ತು ಸ್ನೇಹ ಹೆಚ್ಚಾಯಿತು. ಬಳಿಕ ಇಬ್ಬರೂ ತಮ್ಮ ಬುತ್ತಿಯನ್ನು ಹಂಚಿಕೊಂಡು ತಿಂದರು.

-ಸಿ. ರವೀಂದ್ರಸಿಂಗ್‌

Advertisement

Udayavani is now on Telegram. Click here to join our channel and stay updated with the latest news.

Next