Advertisement
ಪ್ಲಾಸ್ಟಿಕ್ ನಿಷೇಧದ ಕುರಿತ ಮಾತುಗಳು ದಶಕಗಳಿಂದ ಕೇಳಿಬರುತ್ತಿದ್ದರೂ, ಪ್ಲಾಸ್ಟಿಕ್ ಸಮಸ್ಯೆ ನಿಯಂತ್ರಣದ ಬದಲಿಗೆ ದುಪ್ಪಟ್ಟಾಗುತ್ತಿದೆ. ಪ್ಲಾಸ್ಟಿಕ್ ಎಂಬುದು ಸಮಸ್ಯೆಯೇ ಅಲ್ಲ. ಅದನ್ನು ಮರುಬಳಕೆ ಮಾಡಿದರೆ ನಗರಕ್ಕೆ ವರ ಎಂಬುದನ್ನು ಇಲ್ಲಿನ ಉದ್ದಿಮೆದಾರರೇ ತೋರಿಸಿಕೊಟ್ಟರೂ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪ್ಲಾಸ್ಟಿಕ್ ಎಂಬುದು ಸಮಸ್ಯೆಯಾಗಿಯೇ ಉಳಿಯುವಂತಾಗಿದೆ.
Related Articles
Advertisement
ಬಿಬಿಎಂಪಿ ವ್ಯಾಪ್ತಿಯಲ್ಲಿ 2003 ರಿಂದ 2013ರ ಅವಧಿಯಲ್ಲಿ ಸುಮಾರು 3200 ಕಿ.ಮೀ. ರಸ್ತೆಗೆ ಪ್ಲಾಸ್ಟಿಕ್ ಮಿಶ್ರಿತ ಡಾಂಬರೀಕರಣ ಮಾಡಲಾಗಿದ್ದು, ಬಹುತೇಕ ಕಡೆಗಳಲ್ಲಿ ಇಂದಿಗೂ ರಸ್ತೆಗಳು ಗುಣಮಟ್ಟದಿಂದ ಕೂಡಿವೆ. ಆದರೆ, 2013ರ ಬಳಿಕ ಪಾಲಿಕೆ ಪ್ಲಾಸ್ಟಿಕ್ ಮಿಶ್ರಣ ಬಳಕೆ ಸ್ಥಗಿತಗೊಳಿಸಿದ್ದು, ಕೇವಲ ಬಿಟುಮಿನ್ ಮಾತ್ರ ಬಳಸಲು ಮುಂದಾಗಿದೆ. ಪರಿಣಾಮ ರಸ್ತೆ ನಿರ್ಮಿಸಿ ಕೆಲವೇ ವರ್ಷಗಳಲ್ಲಿ ರಸ್ತೆಗಳು ಕಿತ್ತುಬರುತ್ತಿವೆ. ಪ್ಲಾಸ್ಟಿಕ್‌ನ್ನು ಟಾರಿನೊಂದಿಗೆ ಮಿಶ್ರಣ ಮಾಡುವುದರಿಂದ ರಸ್ತೆಗಳ ಗುಣಮಟ್ಟದಿಂದ ಕೂಡಿರುತ್ತವೆ ಎಂಬುದು ತಜ್ಞರ ಅಭಿಪ್ರಾಯ.
ಬೆಂಗಳೂರು ಮೂಲದ ಕೆ.ಕೆ.ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಪ್ಲಾಸ್ಟಿಕ್ ರಸವನ್ನು ಟಾರಿನೊಂದಿಗೆ ಮಿಶ್ರಣ ಮಾಡಿದರೆ ಹೆಚ್ಚು ಬಾಳಿಕೆ ಬರುತ್ತದೆ 2002ರಲ್ಲಿಯೇ ತೋರಿಸಿಕೊಟ್ಟಿವೆ. ಆದರೆ, ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಬೆಂಬಲ ಸಂಸ್ಥೆಗೆ ಲಭ್ಯವಾಗಿಲ್ಲ. ಆದರೆ, ದೂರದ ದೆಹಲಿ ಹಾಗೂ ಹರ್ಯಾಣ ರಾಜ್ಯಗಳು ಈ ಸಂಸ್ಥೆಯನ್ನು ಸಂಪರ್ಕಿಸಿದ್ದು, ಪ್ಲಾಸ್ಟಿಕ್ ರಸ್ತೆಗಳ ನಿರ್ಮಿಸಲು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿವೆ.
ಪ್ಲಾಸ್ಟಿಕ್ ರಸ್ತೆ ವೆಚ್ಚ ಕಡಿಮೆ: ಸಾಮಾನ್ಯವಾಗಿ ಒಂದು ರಸ್ತೆ ನಿರ್ಮಿಸಲು 4 ಟನ್ ಬಿಟುಮಿನ್ ಬೇಕಾಗುತ್ತದೆ. ಆದರೆ, ಪ್ಲಾಸ್ಟಿಕ್ ರಸ್ತೆ ನಿರ್ಮಿಸುವ ಸಂದರ್ಭದಲ್ಲಿ 2 ಟನ್ ಬಿಟುಮಿನ್ ಹಾಗೂ 2 ಟನ್ ಪ್ಲಾಸ್ಟಿಕ್ ಮಿಶ್ರಣ ಮಾಡುವುದರಿಂದ ಲಕ್ಷಾಂತರ ರೂ. ಪಾಲಿಕೆಗೆ ಉಳಿತಾಯವಾಗುತ್ತದೆ. ಟಾರು ರಸ್ತೆಗಳು 1-3 ವರ್ಷಗಳು ಬಾಳಿಕೆ ಬಂದರೆ, ಪ್ಲಾಸ್ಟಿಕ್ ರಸ ಮಿಶ್ರಿತ ರಸ್ತೆಗಳು 8-9 ವರ್ಷಗಳು ಬಾಳಿಕೆ ಬರುತ್ತವೆ ಎನ್ನುತ್ತಾರೆ ಪ್ಲಾಸ್ಟಿಕ್ ರಸ್ತೆ ಪೇಟೆಂಟ್ (ಹಕ್ಕುಸ್ವಾಮ್ಯ) ಪಡೆದಿರುವ ಅಹಮದ್ ಖಾನ್ ಹೇಳುತ್ತಾರೆ.
ಪ್ಲಾಸ್ಟಿಕ್ ವಿಧಗಳು: ಪ್ಲಾಸ್ಟಿಕ್‌ನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಒಂದು ಎಂಜಿನಿಯರಿಂಗ್ ಮತ್ತು ಕಮಾಡಿಟಿ (ಪದಾರ್ಥ) ಪ್ಲಾಸ್ಟಿಕ್. ಎಂಜಿನಿಯರಿಂಗ್ ಪ್ಲಾಸ್ಟಿಕ್ ಉತ್ತಮ ಗುಣಮಟ್ಟದದಿಂದ ಕೂಡಿರುತ್ತದೆ. ಇನ್ನು ಪದಾರ್ಥ ಪ್ಲಾಸ್ಟಿಕ್‌ನಲ್ಲಿ ಸಿಕ್ಕಾಪಟ್ಟೆ ವಿಧಗಳಿದ್ದು, ಕಡಿಮೆ ಮೈಕ್ರಾನ್‌ನ ಕಳಪೆ ಬ್ಯಾಗ್‌ನಿಂದ ಹಿಡಿದು, ಗುಣಮಟ್ಟದ ಪಾಲಿಮರ್ ಸರಕಿನವರೆಗೆ ಎಲ್ಲವನ್ನೂ ಒಳಗೊಂಡಿದೆ.
ಪ್ಲಾಸ್ಟಿಕ್‌ನ್ನು ಕರಗಿಸಲು ಕನಿಷ್ಠ 200 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಅಗತ್ಯವಿದ್ದು, 400 ಡಿಗ್ರಿ ಸೆಲ್ಸಿಯಸ್ ಶಾಖ ಕೊಟ್ಟಾಗ ಅದು ನೀರಾಗಿ ಹರಿಯುತ್ತದೆ. ಇನ್ನು 800 ಡಿಗ್ರಿ ಸೆಲ್ಸಿಯಸ್ ಶಾಖ ನೀಡಿದಾಗ ಅನಿಲವಾಗಿ ಮಾರ್ಪಡುತ್ತದೆ. ಪ್ಲಾಸ್ಟಿಕ್ ಕರಗಿಸಿ ಉಂಡೆ ಮಾಡುವ, ನೀರಾಗಿಸಿ ಹೊಸ ಸಾಮಗ್ರಿ ಅಥವಾ ಉತ್ಪನ್ನ ತಯಾರಿಸುವ ಕೈಗಾರಿಕಗಳು ನಗರದಲ್ಲಿದ್ದರೂ, ಸ್ಥಳೀಯ ಸಂಸ್ಥೆಗಳಿಂದ ಉತ್ತಮ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ಸೊರಗುತ್ತಿವೆ.
ಮರು ಬಳಕೆ ಹೇಗೆ?: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸುಮಾರು 7,500 ಚಿಂದಿ ಆಯುವವರು ತಾವು ಸಂಗ್ರಹಿಸಿದ ಒಣತ್ಯಾಜ್ಯವನ್ನು ಒಣತ್ಯಾಜ್ಯ ಘಟಕಗಳಿಗೆ ನೀಡುತ್ತಾರೆ. ಗುಣಮಟ್ಟದ ಶ್ರೇಣಿಗೆ ತಕ್ಕಂತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕ ಮಾಡಲಾಗುತ್ತದೆ. ಅದಕ್ಕಾಗಿ ನಾಯಂಡಹಳ್ಳಿ ಬಳಿ ನೂರಾರು ಘಟಕಗಳನ್ನು ನಿರ್ಮಿಸಲಾಗಿದ್ದು, ನಿತ್ಯ 150 ಟನ್ ಪ್ಲಾಸ್ಟಿಕ್‌ನ್ನು ಇಲ್ಲಿನ ಮರು ಬಳಕೆ ಮಾಡಲಾಗುತ್ತದೆ.
ಪ್ರತ್ಯೇಕಿಸಿದ ಪ್ಲಾಸ್ಟಿಕ್‌ನ್ನು ಮೊದಲಿಗೆ ತೊಳೆದು ಒಣಗಿಸಲಾಗುತ್ತದೆ. ಬಳಿಕ ಅವುಗಳ ಶ್ರೇಣಿಗೆ ತಕ್ಕಂತೆ ಯಂತ್ರದ ಗಿರಣಿಗೆ ಹಾಕಿ ಬಿಲ್ಲೆ ಮಾಡುವ ಅಥವಾ ಹೊಸ ಪದಾರ್ಥ ತಯಾರಿಸುವ ಕಾರ್ಯ ನಡೆಯುತ್ತದೆ. ಉತ್ಕೃಷ್ಟ ಗುಣಮಟ್ಟದ ಪ್ಲಾಸ್ಟಿಕ್ ತ್ಯಾಜ್ಯದಿಂದ ವಿಶೇಷವಾಗಿ ನೀರಿನ ಬಾಟಲಿಯಿಂದ ಪಾಲಿಮಾರ್ ನೂಲು ತೆಗೆಯಲಾಗುತ್ತದೆ. ಈ ವಿಧದ ಪ್ಲಾಸ್ಟಿಕ್ ಶೇಕಡಾ ನೂರರಷ್ಟು ಮರು ಬಳಕೆ ಆಗುತ್ತದೆ.
ಪ್ಲಾಸ್ಟಿಕ್ ಇಟ್ಟಿಗೆ ಬಂದಿವೆ: ಮರುಬಳಕೆ ತ್ಯಾಜ್ಯದಿಂದ ಇಟ್ಟಿಗೆ ತಯಾರಿಸುವಂತಹ ಕೈಗಾರಿಕೆಗಳು ಇತ್ತೀಚೆಗೆ ಸ್ಥಾಪನೆಯಾಗಿವೆ. ಇದರೊಂದಿಗೆ ರಸ್ತೆ ಡಿವೈಡರ್, ಚರಂಡಿ ಚಪ್ಪಡಿ ಕಲ್ಲುಗಳನ್ನು ತಯಾರಿಕೆ ಮಾಡಲಾಗುತ್ತಿದೆ. ಪ್ರಮುಖವಾಗಿ ಮರುಬಳಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಚ್ಚಾಗಿ ಕೃಷಿಯಲ್ಲಿ ಬಳಸುವ ಪೈಪ್‌ಗ್ಳು, ದ್ವಿಚಕ್ರ ವಾಹನಗಳ ಬಿಡಿ ಭಾಗಗಳ ಉತ್ಪಾದನೆಗೆ ಬಳಸಲಾಗುತ್ತದೆ.
ಪ್ಲಾಸ್ಟಿಕ್ ಕೊರತೆ: ಸಾಮಾನ್ಯವಾಗಿ ಒಂದು ಟನ್ ಪ್ಲಾಸ್ಟಿಕ್ ಬಾಟಲಿಗಳನ್ನು ಕರಗಿಸಿದರೆ 4 ಬ್ಯಾರಲ್‌ಗಳಷ್ಟು ತೈಲ ದೊರೆಯುತ್ತದೆ. ಅದನ್ನು ಬೇರೆ ಉದ್ದೇಶಗಳಿಗೆ ಬಳಸಬಹುದಾಗಿರುವುದರಿಂದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಹೆಚ್ಚಿನ ಬೇಡಿಕೆಯಿದೆ. ಆದರೆ, ನಗರದಲ್ಲಿ ಬೇಡಿಕೆಗೆ ತಕ್ಕಷ್ಟು ತ್ಯಾಜ್ಯ ಸಿಗದೆ ಹಲವು ಘಟಕಗಳು ಕಾರ್ಯಾಚರಣೆ ಬಂದ್ ಮಾಡಿರುವ ಉದಾಹರಣೆಗಳಿವೆ.
ಉದ್ಯಮಗಳಿಗೆ ಬೆಂಬಲ ಬೇಕಿದೆ: ಪ್ಲಾಸ್ಟಿಕ್‌ನ್ನು ಪುಡಿಯಾಗಿ ಮರುಬಳಕೆ ಮಾಡುವ ಹಲವಾರು ಉದ್ಯಮಗಳು ನಗರದಲ್ಲಿವೆ. ಆದರೆ, ಪ್ಲಾಸ್ಟಿಕ್ ಮರುಬಳಕೆ ಕೈಗಾರಿಕೆಗಳ ಸ್ಥಾಪನೆಗೆ ಮೂಲಸೌಕರ್ಯ ಕಲ್ಪಿಸಬೇಕಿದೆ. ಘಟಕ ನಿರ್ಮಿಸುವವರಿಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಹಾಗೂ ಸರ್ಕಾರದಿಂದ ಸಬ್ಸಿಡಿ ದೊರೆಯಬೇಕಿದೆ ಎಂಬುದು ರಾಜ್ಯ ಪ್ಲಾಸ್ಟಿಕ್ ಸಂಘದ ಸುರೇಶ್ ಸಾಗರ ಅವರ ಅಭಿಪ್ರಾಯವಾಗಿದೆ.
* ವೆಂ.ಸುನೀಲ್‌ಕುಮಾರ್