Advertisement
2023ರ ಫೆಬ್ರವರಿಯವರೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಹತ್ತು ವರ್ಷಕ್ಕೂ ಅಧಿಕ ಸಮಯದಿಂದ ಕೇಳುವವರಿಲ್ಲದ ಖಾತೆಗಳಲ್ಲಿರುವ ಸುಮಾರು 35,012 ಕೋ. ರೂ. ಅನ್ ಕ್ಲೇಮ್‌ಡ್ ಹಣವನ್ನು ರಿಸರ್ವ್ ಬ್ಯಾಂಕ್‌ಗೆ ವರ್ಗಾ ಯಿಸಿವೆ. 2022ರಲ್ಲಿ ಬ್ಯಾಂಕ್‌ಗಳು ಹೀಗೆ ತಮ್ಮ ಬಳಿ ಇರುವ 48,262 ಕೋ.ರೂ. ಧನರಾಶಿಯನ್ನು ಆರ್‌ಬಿಐಗೆ ವರ್ಗಾಯಿಸಿದ್ದವು. ಎಲ್ಲ ಬ್ಯಾಂಕ್‌ಗಳಲ್ಲಿರುವ ಇಂತಹ ಅನ್ ಕ್ಲೇಮ್‌ಡ್ ಖಾತೆಗಳ ವಾರಸುದಾರರನ್ನು ಹುಡುಕಿ ಇತ್ಯರ್ಥಗೊಳಿಸಲು ಪ್ರಸ್ತುತ ವರ್ಷ ಜೂನ್ ಒಂದರಿಂದ ನೂರು ದಿನಗಳ ವಿಶೇಷ ಅಭಿಯಾನ ನಡೆಸುವಂತೆಆರ್ಬಿಐ ಸೂಚಿಸಿದೆ.
ವಿವಿಧ ಬ್ಯಾಂಕ್‌ಗಳ ಬಳಿ ಇರುವ ಅನ್ ಕ್ಲೇಮ್‌ಡ್ ಹಣವನ್ನು ಆರ್‌ಬಿಐಗೆ ವರ್ಗಾಯಿಸಲಾಗುವ ಸುದ್ದಿಯೊಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಕಾರಣಾಂತರದಿಂದ ಒಂದೆರಡು ವರ್ಷಗಳಿಂದ ಬ್ಯಾಂಕ್ ಶಾಖೆಗೆ ಬರಲಾಗದ, ಖಾತೆಯಲ್ಲಿ ವ್ಯವಹಾರ ನಡೆಸಲಾಗದ ಅನೇಕ ಗ್ರಾಹಕರು ಎಲ್ಲಿ ತಮ್ಮ ಹಣ ರಿಸರ್ವ್ ಬ್ಯಾಂಕ್‌ಗೆ ವರ್ಗಾಯಿಸಲ್ಪಡುತ್ತದೋ ಎಂದು ಗಾಬರಿಗೊಂಡು ಬ್ಯಾಂಕ್ ಶಾಖೆಗಳತ್ತ ಧಾವಿಸಿದರು. ಜನಸಾಮಾನ್ಯರು ಇಲ್ಲಿ ಗಮನಿಸ ಬೇಕಾದದ್ದೇನೆಂದರೆ ಆರ್‌ಬಿಐ ನಿಯಮಗಳ ಪ್ರಕಾರ ಕೇವಲ ಹತ್ತು ವರ್ಷಕ್ಕೂ ಅಧಿಕ ಸಮಯದಿಂದ ವ್ಯವಹಾರ ನಡೆಯದ ಉಳಿತಾಯ, ಚಾಲ್ತಿ ಖಾತೆ ಮತ್ತು ಸಾವಧಿ ಠೇವಣಿ ಖಾತೆಗಳ ಹಣವನ್ನು ಮಾತ್ರ ಅನ್ ಕ್ಲೇಮ್‌ಡ್ ಠೇವಣಿ ಎಂದು ವರ್ಗೀಕರಿಸಲಾಗುತ್ತದೆ. ಹೀಗೆ ವಿವಿಧ ಬ್ಯಾಂಕ್‌ಗಳ ಬಳಿ ಇರುವ ಹಣ ರಿಸರ್ವ್ ಬ್ಯಾಂಕ್ ಬಳಿ ಇರುವ ಡಿಪಾಸಿಟರ್ ಎಜುಕೇಶನ್ ಆ್ಯಂಡ್ ಅವಾರ್‌ನೆಸ್ ಫಂಡ್ (ಡಿಇಎ)ಗೆ ವರ್ಗಾಯಿಸಲಾಗುತ್ತದೆ. ಅನ್‌ಕ್ಲೇಮ್‌ಡ್ ಆಗಲು ಕಾರಣವೇನು?
ಅನ್‌ಕ್ಲೇಮ್‌ಡ್ ಠೇವಣಿ ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣ ಖಾತೆಗೆ ನಾಮಿನೇಶನ್ ಮಾಡದೇ ಇರುವುದು. ಖಾತೆದಾರನ ಮರಣಾನಂತರ ಯಾರೂ ಅದನ್ನು ಪಡೆಯಲು ಬಾರದೇ ಇರುವುದು. ನಾಮಿನೇಶನ್ ಇಲ್ಲದೇ ಮರಣಿಸಿದ ಗ್ರಾಹಕರ ಖಾತೆಯಲ್ಲಿರುವ ಹಣವನ್ನು ನಿಜವಾದ ಉತ್ತರಾಧಿಕಾರಿಗೆ ನೀಡಲು ಬ್ಯಾಂಕ್‌ಗಳು ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಕೆಲವೊಮ್ಮೆ ದಾವೆದಾರರ ಸಂಖ್ಯೆ ಅಧಿಕವಾಗಿದ್ದರೆ ಮತ್ತು ಅವರೊಳಗೆ ಏಕಾಭಿಪ್ರಾಯ ಇಲ್ಲದಿದ್ದರೆ ಅದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇರುತ್ತದೆ. ಖಾತೆ ತೆರೆಯುವಾಗ ಗ್ರಾಹಕರು ತಪ್ಪದೇ ನಾಮಿನಿಯ ಹೆಸರನ್ನು ನಮೂದಿ ಸಬೇಕು. ನಾಮಿನಿಯ ನೇಮಕ ಅಥವಾ ಬದಲಾ ವಣೆಯನ್ನು ಅನಂತರದಲ್ಲೂ ಮಾಡಬಹುದಾಗಿರುತ್ತದೆ. ಉದಾಹರಣೆಗೆ ಮದುವೆಗೆ ಮೊದಲು ತಂದೆ-ತಾಯಿಯನ್ನು ನಾಮಿನಿಯಾಗಿಸಿದ್ದರೆ ಮದುವೆ ಅನಂತರ ಅದರಲ್ಲಿ ಬದಲಾವಣೆ ಮಾಡಿ ಪತ್ನಿಯನ್ನು ನಾಮಿನಿಯಾಗಿ ಮಾಡಬಹುದು. ನಾಮಿನಿ ನೇಮಕವಾಗಿದ್ದರೆ ಖಾತೆದಾರನ ಮರಣಾನಂತರ ನಾಮಿನಿಯ ಕ್ಲೇಮ್ ಸುಲಭದಲ್ಲಿ ಅಂಗೀಕಾರವಾಗುತ್ತದೆ.
Related Articles
ಜನಸಾಮಾನ್ಯರಲ್ಲಿ ಬ್ಯಾಂಕ್ ಖಾತೆಗಳಿಗೆ ನಾಮಿನೇಶನ್ ಮಾಡಬೇಕಾದ ಅಗತ್ಯದ ಸ್ಪಷ್ಟ ಅರಿವು ಇಲ್ಲ. ಎಷ್ಟೋ ಬಾರಿ ಬ್ಯಾಂಕ್ ಸಿಬಂದಿ ನಿಮ್ಮ ಅನಂತರ ಯಾರಿಗೆ ಸಿಗಬೇಕು ಎಂದು ಕೇಳಿದಾಗ ತಾನು ಸತ್ತ ಅನಂತರ ಏನಾದರೇನು ಎಂದೋ ಅಥವಾ ನೀವು ಬ್ಯಾಂಕ್‌ನವರು ಯಾವಾಗಲೂ ಸಾವಿನ ವಿಷಯವೇ ಮಾತನಾಡ್ತೀರಿ ಎಂದೋ ನಕಾ ರಾತ್ಮಕವಾಗಿ ಮಾತನಾಡುವುದನ್ನು ಕಾಣುತ್ತೇವೆ. ತಮ್ಮ ಅನಂತರ ತಮ್ಮ ಪ್ರೀತಿಪಾತ್ರರ ಬದುಕಿಗೆ ಅಗತ್ಯದ ಹಣ ಸುಲಭವಾಗಿ ದೊರೆಯಬೇಕಾದರೆ ಖಾತೆಗೆ ನಾಮಿನಿ ಸೇರಿಸಬೇಕು ಎನ್ನುವ ಅರಿವು ಮೂಡಿಸುವ ಅಗತ್ಯವಿದೆ.
Advertisement
ಅನ್‌ಕ್ಲೇಮ್‌ಡ್ ಠೇವಣಿ ಕ್ಲೇಮ್ ಹೇಗೆ?ಎಲ್ಲ ಬ್ಯಾಂಕ್‌ಗಳು ತಮ್ಮ ತಮ್ಮ ವೆಬ್‌ಸೈಟ್‌ನಲ್ಲಿ ತಮ್ಮಲ್ಲಿರುವ ಅನ್ ಕ್ಲೇಮ್‌ಡ್ ಖಾತೆಗಳ ವಿವರ ನೀಡುತ್ತವೆ. ಅವುಗಳನ್ನು ಆಧರಿಸಿ ಗ್ರಾಹಕರು ಶಾಖೆಗಳನ್ನು ಸಂಪರ್ಕಿಸಿ ನಿಗದಿತ ಕ್ಲೇಮ್ ಫಾರ್ಮ್ ತುಂಬಿಸಿ ಕೆವೈಸಿ (know your customer’s) ಕೊಟ್ಟು ತಮ್ಮವರ ಹಣವನ್ನು ಪಡೆಯಬಹುದು. ಖಾತೆದಾರರು ಮರಣಿ ಸಿದ್ದಲ್ಲಿ, ಸಂಬಂಧಿತ ನಾಮಿನಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಅವರ ಮರಣ ಪ್ರಮಾಣ ಪತ್ರದ ಜತೆಯಲ್ಲಿ ತಮ್ಮ ಗುರುತು ಪತ್ರ ನೀಡಿ ತಮಗೆ ಸೇರಬೇಕಾದ ಹಣವನ್ನು ಪಡೆಯಬಹುದು. ನಿಮ್ಮ ಖಾತೆ ಅನ್‌ಕ್ಲೇಮ್‌ಡ್ ವರ್ಗೀಕೃತಗೊಳ್ಳದಿರಲು ಏನು ಮಾಡಬೇಕು?
ಎಲ್ಲ ಉಳಿತಾಯ, ಚಾಲ್ತಿ ಖಾತೆ ಹಾಗೂ ಸಾವಧಿ ಠೇವಣಿಗಳಿಗೆ ನಾಮಿನಿ ಇಲ್ಲದಿದ್ದರೆ ಸೇರಿಸಿ. ಹಣಕಾಸು ವಹಿವಾಟಿನ ವಿವರ ಕುಟುಂಬಸ್ಥರೊಂದಿಗೆ ಹಂಚಿ ಕೊಳ್ಳುವುದು ಉತ್ತಮ. ಇದರಿಂದ ಸರಿಯಾದ ಸಂದರ್ಭದಲ್ಲಿ ಅವರಿಗೆ ಬ್ಯಾಂಕ್ ಸಂಪರ್ಕಿಸುವುದು ಸುಲಭವಾಗುತ್ತದೆ. ಬ್ಯಾಂಕ್‌ನಿಂದ ಬರುವ ಮೆಸೇಜ್‌ಗಳ ಮೇಲೆ ನಿಗಾ ಇರಲಿ. ನಿಯಮಿತವಾಗಿ ಬ್ಯಾಂಕ್ ಖಾತೆಗೆ ಕೆವೈಸಿ ಸಲ್ಲಿಸಿ. ಅಗತ್ಯ ಇಲ್ಲದ ಖಾತೆಗಳನ್ನು ರದ್ದುಗೊಳಿಸಿ ಒಂದೆರಡು ಅಗತ್ಯದ ಖಾತೆಗಳನ್ನಷ್ಟೇ ಇಟ್ಟುಕೊಳ್ಳುವುದು ಉತ್ತಮ. ಬ್ಯಾಂಕ್‌ನಿಂದ ನೀಡಲ್ಪಟ್ಟ ಫಿಕ್ಸೆಡ್ ಡಿಪಾಸಿಟ್ ಸರ್ಟಿಫಿಕೆಟ್‌ಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ. -ಬೈಂದೂರು ಚಂದ್ರಶೇಖರ ನಾವಡ