Advertisement

ವರುಣನ ಆರ್ಭಟಕ್ಕೆ ಜನ ತತ್ತರ

12:34 PM May 26, 2018 | |

ಹೊಳಲ್ಕೆರೆ: ತಾಲೂಕಿನಾದ್ಯಂತ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ರಾಮಗಿರಿ-ತಾಳಿಕಟ್ಟೆ ಸಮಿಪದ ಸಿದ್ದರಾಮಯ್ಯ ಬಡಾವಣೆಯ ಅಲೆಮಾರಿ ಹಾಗೂ ಸುಡುಗಾಡು ಸಿದ್ದರ ಕಾಲೋನಿಯಲ್ಲಿನ ಗುಡಿಸಲುಗಳು
ಸಂಪೂರ್ಣ ಜಲಾವೃತವಾಗಿವೆ.

Advertisement

ಬಡಾವಣೆಯ ನಾಗರಕಟ್ಟೆಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ ಅಲೆಮಾರಿಗಳು, ಸುಡುಗಾಡು ಸಿದ್ದರು, ಬಡ ಕುಟುಂಬಗಳು ಮಳೆಯ ಅರ್ಭಟಕ್ಕೆ ತತ್ತರಿಸಿವೆ. ಗುರುವಾರ ಮಧ್ಯರಾತ್ರಿ ಗುಡುಗು, ಸಿಡಿಲು, ಮಿಂಚು ಗಾಳಿ ಸಹಿತ ಮಳೆ ಆರಂಭವಾಯಿತು. ತೋಟ ಹಾಗೂ ಹೊಲಗಳಿಂದ ಹರಿದು ಬಂದ ನೀರು ಗುಡಿಸಲುಗಳಿಗೆ ನುಗ್ಗಿತು. ಇದರಿಂದ ಗುಡಿಸಲುಗಳಲ್ಲಿದ್ದ ದವಸ ಧಾನ್ಯ, ಬಟ್ಟೆ ಸೇರಿಂತೆ ಜೀವನಾವಶ್ಯಕ ಸಾಮಗ್ರಿಗಳಿಗೆ ಹಾನಿಯಾಗಿದೆ. ರಾಮಗಿರಿ ಸುತ್ತ ಸುರಿದ ಭಾರೀ ಮಳೆಗೆ ಗುಡಿಸಲುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 

ಗಾಳಿಯ ಹೊಡೆತಕ್ಕೆ ಗುಡಿಸಲುಗಳ ಗರಿಗಳು ಹಾರಿ ಹೋಗಿದ್ದರಿಂದ ಅಲ್ಲಿನ ನಿವಾಸಿಗಳು ಆತಂಕದಲ್ಲೇ ಕಾಲ ಕಳೆದರು. ಭಾರೀ ಮಳೆಯಿಂದ ನೀರುಪಾಲಾಗಿರುವ ಗುಡಿಸಲುಗಳನ್ನು ಬಡಾವಣೆಯ ಎತ್ತರ ಪ್ರದೇಶಗಳಿಗೆ ಸ್ಥಳಾಂತರ ಮಾಡಲು ಸ್ಥಳೀಯ ಗ್ರಾಮ ಪಂಚಾಯತ್‌ ಮುಂದಾಗಿದೆ. ಘಟನಾ ಸ್ಥಳಕ್ಕೆ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭಾರಿ ಮಳೆಯಿಂದ ಗುಡಿಸಲುಗಳು ನೀರಿನಲ್ಲಿ ಮುಳುಗಿದ್ದರೂ ತಾಲೂಕು ಆಡಳಿತ ಸುಡುಗಾಡು ಸಿದ್ಧರ ನೆರವಿಗೆ ಧಾವಿಸಿಲ್ಲ. ತಕ್ಷಣ ಅಲೆಮಾರಿ ಹಾಗೂ ಸುಡುಗಾಡು ಸಿದ್ಧರಿಗೆ ಬೇಕಾದ ಸೌಲಭ್ಯ ಕಲ್ಪಿಸಬೇಕು. ಗುಡಿಸಲು ಕಳೆದುಕೊಂಡು ಸಂಕಷ್ಟದಲ್ಲಿರುವವರಿಗೆ ಅರ್ಥಿಕ ನೆರವು ನೀಡಿ ಗಂಜಿ ಕೇಂದ್ರ ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೊಳಲ್ಕೆರೆ ಪಟ್ಟಣ ಸೇರಿದಂತೆ ಬಸವಾಪುರ, ರಂಗಾಪುರ, ನುಲೇನೂರು, ರಾಮಗಿರಿ, ವಡೇರಹಳ್ಳಿ ಅಡನೂರು, ಚಿಕ್ಕಜಾಜೂರು ಪಾಡಿಗಟ್ಟೆ, ಗಂಗಸಮುದ್ರ, ತಾಳಿಕಟ್ಟೆ, ಎನ್‌.ಜಿ. ಹಳ್ಳಿ, ಗುಂಡೇರಿ, ಇಡೆಹಳ್ಳಿ, ಅವಿನಹಟ್ಟಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಪಟ್ಟಣ ಹಾಗೂ ಹಳ್ಳಿಗಳಲ್ಲಿದ್ದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿತ್ತು. 

Advertisement

ತಾಲೂಕಿನ ತಾಳಿಕಟ್ಟೆ, ಗಂಗಸಮುದ್ರ ಸುತ್ತಲಿನ ತೋಟಗಳಲ್ಲಿದ್ದ ನೂರಾರು ಅಡಿಕೆ ಹಾಗೂ ತೆಂಗಿನ ಮರಗಳು ಬಿರುಗಾಳಿಗೆ ನೆಲಕ್ಕುರುಳಿವೆ. ಗಂಗಸಮುದ್ರದಲ್ಲಿ ಐದಾರು ಮನೆಗಳ ಮೇಲೆ ತೆಂಗಿನ ಮರ, ಜಾಲಿ ಮರ ಉರುಳಿವೆ. ಯಾವುದೇ ಪ್ರಾಣಹಾನಿಯಾಗಿಲ್ಲ. ತಾಳಿಕಟ್ಟೆ ಬಳಿಯ ವಡೇರಹಳ್ಳಿ ಕೆರೆ ತುಂಬಿ ಹರಿಯುತ್ತಿದ್ದು, ಗಂಗಸಮುದ್ರ ಕೆರೆ
ಕೋಡಿ ಬೀಳುವ ಹಂತದಲ್ಲಿದೆ. ಹಳ್ಳ ಕೊಳ್ಳಗಳಲ್ಲಿ ನೀರು ಹರಿಯುತ್ತಿದೆ. 

ಒಂದೇ ದಿನ 67.4 ಮಿಮೀ ಮಳೆ 
ಚಿತ್ರದುರ್ಗ: ಜಿಲ್ಲೆಯಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಅತಿ ಹೆಚ್ಚು ಅಂದರೆ ಹೊಳಲ್ಕೆರೆಯಲ್ಲಿ 67.4 ಮಿಮೀ ಮಳೆ ಸುರಿದಿದೆ. ಚಳ್ಳಕೆರೆ 31, ಪರಶುರಾಂಪುರ 3, ಡಿ. ಮರಿಕುಂಟೆ 5.2, ತಳಕು 4.8, ಚಿತ್ರದುರ್ಗ 1 ರಲ್ಲಿ 20, ಚಿತ್ರದುರ್ಗ 2 ರಲ್ಲಿ 4.4, ಹಿರೇಗುಂಟನೂರು 2, ಭರಮಸಾಗರ 4.4, ಹಿರಿಯೂರು 5.4, ಬಬ್ಬೂರು 6.4, ಈಶ್ವರಗೆರೆ 9.4, ಇಕ್ಕನೂರು 5.4, ಹೊಳಲ್ಕೆರೆ 67.4, ರಾಮಗಿರಿ 22.2 ಚಿಕ್ಕಜಾಜೂರು 5.2, ಎಚ್‌.ಡಿ. ಪುರ 23.6, ತಾಳ್ಯ 24, ಹೊಸದುರ್ಗ 12.2, ಬಾಗೂರು 15.1, ಮತ್ತೋಡು 8.2, ಮಾಡದಕೆರೆ 26.2, ಮೊಳಕಾಲ್ಮೂರು 7.2, ಬಿ.ಜಿ. ಕೆರೆ 5.6, ರಾಯಾಪುರ 4.8 ಮಿಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next