Advertisement

ಮಾಳ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ

03:52 PM May 30, 2019 | Team Udayavani |

ಕಾರ್ಕಳ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮಾಳ ಗ್ರಾಮದಲ್ಲಿ 70 ವರ್ಷ ಹಳೆಯ ಶ್ರೀ ಗುರುಕುಲ ಅನುದಾನಿತ ಹಿ.ಪ್ರಾ. ಶಾಲೆ ಖಾಯಂ ಶಿಕ್ಷಕರಿಲ್ಲದೆ ಸೊರಗಿದೆ.

Advertisement

ಇಲ್ಲಿ 125 ಮಂದಿ ವಿದ್ಯಾರ್ಥಿಗಳಿದ್ದರೂ ಓರ್ವ ಖಾಯಂ ಶಿಕ್ಷಕರಿಲ್ಲ. ಕಳೆದ ಮೂರು ವರ್ಷಗಳಿಂದ ಶಾಲೆ ಗೌರವ ಶಿಕ್ಷಕರ ಮೂಲಕವೇ ನಡೆಯುತ್ತಿದೆ.

1951ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಸಮಾಜದ ನಾನಾ ಕ್ಷೇತ್ರಗಳ ಮುಂಚೂಣಿಗೆ ಬಂದು ಗುರುತಿಸಿಕೊಂಡಿದ್ದಾರೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಈ ಶಾಲೆ ತನ್ನದೇ ಆದ ಕೊಡುಗೆ ನೀಡಿದೆ. ಮಾಳ ಗ್ರಾಮದಲ್ಲಿ ತೆರೆದ ಪ್ರಥಮ ಶಾಲೆ ಎಂಬ ಹೆಗ್ಗಳಿಕೆ ಈ ಶಾಲೆಗಿದೆ. ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಹಿರಿಮೆಯೂ ಮಾಳ ಶಾಲೆಯದ್ದು.

ಶಾಲೆ ಉಳಿಸಲು ಯತ್ನ

ಸುಮಾರು 400ರಷ್ಟು ವಿದ್ಯಾರ್ಥಿಗಳಿದ್ದ ಈ ಶಾಲೆ ಯಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿದೆ. ಆಂಗ್ಲ ಮಾಧ್ಯಮ ಶಿಕ್ಷಣದ ಪ್ರಭಾವ ಹಾಗೂ ಇನ್ನಿತರ ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದನ್ನು ಮನಗಂಡ ಈ ಶಾಲೆಯ ಆಡಳಿತವನ್ನು ನೋಡಿಕೊಳ್ಳುವ ಶ್ರೀ ಗುರುಕುಲ ವಿದ್ಯಾವರ್ಧಕ ಸಂಘದವರು ಆಂಗ್ಲ ಶಿಕ್ಷಣ ಸೇರಿದಂತೆ ಅನೇಕ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಗಳಿಗೆ ಸಾಕಷ್ಟು ಅವಕಾಶ ನೀಡುತ್ತಿದ್ದಾರೆೆ. ಯೋಗಾಭ್ಯಾಸ, ಶ್ಲೋಕ ಪಠಣ, ಇಂಗ್ಲಿಷ್‌ ಶಿಕ್ಷಣ, ಸ್ಮಾರ್ಟ್‌ಕ್ಲಾಸ್‌ ಸೌಲಭ್ಯ, ಕಂಪ್ಯೂಟರ್‌ ಶಿಕ್ಷಣವೂ ಮಕ್ಕಳಿಗೆ ದೊರೆಯುತ್ತಿದೆ. ಯಕ್ಷಗಾನ, ಚಿತ್ರಕಲೆ, ನೃತ್ಯ, ಸಂಗೀತ ವಿಶೇಷ ಮೊದಲಾದ ವಿಶೇಷ ತರಬೇತಿಗಳೂ ಇಲ್ಲಿವೆ.

Advertisement

ಶಿಕ್ಷಕರ ಕೊರತೆ ಬಗೆಹರಿಯಲಿ

ಅನುದಾನಿತ ಶಾಲೆಯಾಗಿರುವ ಈ ಶಾಲೆಯಲ್ಲಿ ಸಕಲ ಸೌಲಭ್ಯಗಳಿದ್ದರೂ ಖಾಯಂ ಶಿಕ್ಷಕರು ಇಲ್ಲದ ಕೊರತೆ ಕಾಡುತ್ತಿದೆ. ಶಿಕ್ಷಕರ ನೇಮಕಗೊಳಿಸುವಂತೆ ಗುರುಕುಲ ವಿದ್ಯಾವರ್ಧಕ ಸಂಘ ಹಾಗೂ ಪೋಷಕರು ಶಿಕ್ಷಣ ಇಲಾಖೆಗೆ ನಿರಂತರವಾಗಿ ಮನವಿ ಮಾಡುತ್ತ ಬಂದಿದ್ದಾರೆ. ಆದರೆ ಇಲಾಖೆಯಿಂದ ಯಾವುದೇ ಪೂರಕ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಶಾಲೆಯ ವೈಭವದ ದಿನಗಳ ಮರುಸ್ಥಾಪನೆಗೆ ಹಳೆ ವಿದ್ಯಾರ್ಥಿಗಳು ‘ಶಾಲೆಗಾಗಿ ಒಂದು ದಿನ’ ಯೋಜನೆಯಡಿ ನೆರವಾಗುತ್ತಿದ್ದಾರೆ. ಶಾಲೆಯ ಒಂದು ದಿನದ ಪೂರ್ತಿ ಖರ್ಚನ್ನು ಓರ್ವ ಹಳೆ ವಿದ್ಯಾರ್ಥಿ ಭರಿಸುತ್ತಿದ್ದಾರೆ. ಈ ಮೂಲಕ ಶಾಲಾ ಬೆಳವಣಿಗೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಮಹತ್ತರ ಕೊಡುಗೆ ನೀಡುತ್ತಿದ್ದಾರೆ.

ಮನವಿಗೆ ಸ್ಪಂದಿಸಿಲ್ಲ

8 ಮಂದಿ ಗೌರವ ಶಿಕ್ಷಕರ ಮೂಲಕ ಶಾಲೆ ಮುಂದುವರಿಯುತ್ತಿದೆ. ವಾರ್ಷಿಕ ಸುಮಾರು 10 ಲಕ್ಷ ರೂ. ಶಿಕ್ಷಕರ ವೇತನಕ್ಕಾಗಿ ಭರಿಸಬೇಕಾಗಿದೆ. ಶಿಕ್ಷಕರನ್ನು ನೇಮಕಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
-ಗಜಾನನ ಮರಾಠೆ, ಅಧ್ಯಕ್ಷರು, ವಿದ್ಯಾವರ್ಧಕ ಸಂಘ
ಹಳೆ ವಿದ್ಯಾರ್ಥಿಗಳ ಕಾಳಜಿ

ಶಾಲೆಯ ವೈಭವದ ದಿನಗಳ ಮರುಸ್ಥಾಪನೆಗೆ ಹಳೆ ವಿದ್ಯಾರ್ಥಿಗಳು ‘ಶಾಲೆಗಾಗಿ ಒಂದು ದಿನ’ ಯೋಜನೆಯಡಿ ನೆರವಾಗುತ್ತಿದ್ದಾರೆ. ಶಾಲೆಯ ಒಂದು ದಿನದ ಪೂರ್ತಿ ಖರ್ಚನ್ನು ಓರ್ವ ಹಳೆ ವಿದ್ಯಾರ್ಥಿ ಭರಿಸುತ್ತಿದ್ದಾರೆ. ಈ ಮೂಲಕ ಶಾಲಾ ಬೆಳವಣಿಗೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಮಹತ್ತರ ಕೊಡುಗೆ ನೀಡುತ್ತಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next