Advertisement
ಮಂಗಳೂರಿನ ಕೇಂದ್ರ ಮೈದಾನದಲ್ಲಿ ಶನಿವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಮೀನುಗಾರರ ಹಿತರಕ್ಷಣೆಗೆ ಪ್ರತ್ಯೇಕ ಸಚಿವಾಲಯವನ್ನೇ ರಚಿಸಿದ್ದೇವೆ. ಆಳ ಸಮುದ್ರ ಮೀನುಗಾರಿಕೆಗೆ ಆಧುನಿಕ ತಂತ್ರಜ್ಞಾನ ಸಹಿತ ಹಲವು ನೆರವು ಕೊಡುತ್ತಿದ್ದೇವೆ.
Related Articles
Advertisement
ನಾನು ನಿನ್ನೆ ಕೇರಳಕ್ಕೆ ಹೋಗಿದ್ದೆ, ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ಯಾರಾದರೂ ಶಬರಿಮಲೆ ಸ್ವಾಮಿ ಅಯ್ಯಪ್ಪ ಎಂದರೆ ಕೇಸು ಜಡಿಯುತ್ತದೆ. ಬಿಜೆಪಿ ಅಭ್ಯರ್ಥಿಗಳ ಮೇಲೂ ಕೇಸು ಜಡಿದು ಜೈಲಿಗೆ ಹಾಕಲಾಯಿತು. ಇದು ಪ್ರಜಾತಂತ್ರವೇ ? ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ಸಹಿಸೆವು: ಉಗ್ರಗಾಮಿಗಳ ಮನೆಗೇ ನುಗ್ಗಿ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಮಿಶೆಲ್, ಸಕ್ಸೇನಾ, ತಲ್ವಾರ್ ಎಂಬ ಮೂವರ ಬಂಧನವಾಗಿದೆ. ಇಂತಹ ಇನ್ನೂ ಅನೇಕರ ಬಂಧನ ನಡೆಸುತ್ತೇವೆ. ಅವರು ಎಲ್ಲಿಗೂ ಓಡಲು ಸಾಧ್ಯವಿಲ್ಲ ಎಂದರು.
ದೇಶ ಪ್ರಗತಿಯ ಲಾಭ ಪ್ರತಿಪ್ರಜೆಗೂ ದೊರೆಯಬೇಕು.ಇದು ಸಂವಿಧಾನ ಆಶಯವೂ ಹೌದು. ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಜನ್ಮದಿನ ಎ. 14 ಆಗಿದ್ದು, ಅವರಿಗೆ ಈ ವೇಳೆ ನಮನಗಳನ್ನು ಅರ್ಪಿಸುವುದಾಗಿ ಹೇಳಿದರು.
ಕನ್ನಡದಲ್ಲಿ ಕರೆ: ಈ ಬಾರಿಯ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಕನ್ನಡದಲ್ಲಿ ಹೇಳಿದ ಪ್ರಧಾನಿ ಮೋದಿ ಅವರು “ಈ ಚುನಾವಣೆಯಲ್ಲಿ ತರುಣರು, ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರು, ಹಿರಿಯರು, ಡಾಕ್ಟರ್ ಎಂಜಿನಿಯರ್‌ಗಳು, ವಕೀಲರು, ರೈತ ಕಾರ್ಮಿಕರು, ಕೃಷಿಕರು ಸಹಿತ ಎಲ್ಲರೂ ಬಿಜೆಪಿಗೆ ಮತ ನೀಡುವ ಸಂಕಲ್ಪ ಕೈಗೊಳ್ಳಿರಿ’ ಎಂದು ಕೋರಿದರು.
ಇದು ದೇಶದ ಪ್ರತಿಜ್ಞೆಯೇ ಆಗಲಿ ಎಂದು ಆಶಿಸಿದರು. ಹರಿದ ಚಪ್ಪಲಿ ಧರಿಸಿ ರಾಷ್ಟ್ರಪತಿ ಭವನದಲ್ಲಿ ಜನಸಾಮಾನ್ಯರೂ ಸಮಾಜಸೇವೆ ಸಲ್ಲಿಸಿರುವುದಕ್ಕೆ ಪದ್ಮಶ್ರೀ ಸ್ವೀಕರಿಸಿದ ಕ್ಷಣ ಕಂಡಾಗ ನಾನು ಭಾವುಕನಾಗಿದ್ದೆ. ಹೀಗೆ ದೇಶವು ಸರ್ವ ಪ್ರತಿಭಾವಂತರನ್ನು ಗುರುತಿಸುತ್ತಿರಬೇಕು. ಅದಕ್ಕೆ ಜನಬೆಂಬಲ ಬೇಕು ಎಂದರು.
ಮಗದೊಮ್ಮೆ ಆಶೀರ್ವಾದ ಮಾಡಿ – ನಳಿನ್: ಸಂಸದನಾಗಿ ಕಳೆದ 10 ವರ್ಷಗಳಲ್ಲಿ ಜನತೆ ನೀಡಿದ ಆಶೀರ್ವಾದಕ್ಕೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಿದ್ದೇನೆ. ಸಂಸದನಾಗಿ ನನ್ನ ನಿರ್ವಹಣೆಯನ್ನು ಸಮೀಕ್ಷೆಗಳು ಶ್ಲಾಘಿಸಿವೆ. ಎತ್ತಿನಹೊಳೆ ಸೇರಿ ಜಿಲ್ಲೆಯ ಹಲವಾರು ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ನಡೆಸಿದ್ದೇನೆ.
ಹಿಂದೂ ಕಾರ್ಯಕರ್ತರ ಹತ್ಯೆಗಳಾದಾಗ ಪ್ರತಿಭಟನೆ ನಡೆಸಿದ್ದೇನೆ. ಸಜ್ಜನಿಕೆ, ಪ್ರಾಮಾಣಿಕ ರಾಜಕಾರಣ ಮಾಡಿಕೊಂಡು ಬಂದವ ನಾನು. ನೆಲಜಲಕ್ಕಾಗಿ ಮಾಡಿದ ಹೋರಾಟಕ್ಕಾಗಿ ನನ್ನ ಮೇಲೆ ಪ್ರಕರಣ ದಾಖಲಾಗಿದೆ. ಕ್ಲಬ್, ಪಬ್, ಗೂಂಡಾಗಿರಿಗಾಗಿ ನನ್ನ ಮೇಲೆ ಪ್ರಕರಣ ದಾಖಲಾದುದಲ್ಲ ಎಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದರು. ಚುನಾವಣೆಯಲ್ಲಿ ಮತ್ತೂಮ್ಮೆ ಜನತೆ ನನಗೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಮೋದಿ ಆಡಳಿತದ ಬಗ್ಗೆ ಹೆಮ್ಮೆಯಿದೆ – ಕರಂದ್ಲಾಜೆ: ಭ್ರಷ್ಟಾಚಾರ ರಹಿತ ಆಡಳಿತ, ಸ್ವತ್ಛ ಭಾರತ, ಉಜ್ವಲ, ಆಯುಷ್ಮಾನ್ ಭಾರತ್ ಸೇರಿ ಹಲವು ಯೋಜನೆಗಳನ್ನು ನೀಡಿದ, ವಿಶ್ವದಲ್ಲಿ ಭಾರತದ ಗೌರವನ್ನು ಉನ್ನತ ಸ್ಥಾನಕ್ಕೇರಿಸಿದ, ಭಯೋತ್ಪಾದನೆ ವಿರುದ್ಧ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ಮೋದಿ ಅವರ ಆಡಳಿತ ಬಗ್ಗೆ ಹೆಮ್ಮೆ ಇದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಎಲ್ಲೆಲ್ಲೂ ಜನಸ್ತೋಮ…* ಹರ್ ಹರ್ ಮೋದಿ ಘರ್ ಘರ್ ಮೋದಿ ಎಂಬ ಘೋಷಣೆ ಸಮಾವೇಶದಾದ್ಯಂತ ಮೊಳಗಿತು. * ಬಜಪೆ ವಿಮಾನ ನಿಲ್ದಾಣದಿಂದ ಕೇಂದ್ರ ಮೈದಾನದವರೆಗೆ ನಾನು ಬಂದ ಹಾದಿಯುದ್ದಕ್ಕೂ ಮಾನವ ಸರಪಳಿಯಲ್ಲ; ಮಾನವ ಗೋಡೆಯನ್ನೇ ಕಂಡೆ. ಇಂತಹ ಜನಸ್ತೋಮ ಕಂಡು ಬೆರಗಾದೆ. ಮಾತ್ರವಲ್ಲ, ಮೈದಾನದಲ್ಲಿ ಜನ ಇದ್ದಾರೆಯೇ ಎಂಬ ಸಂಶಯವೂ ಕಾಡಿತು. ಈಗ ಮೈದಾನಕ್ಕೆ ಬಂದು ನೋಡುತ್ತೇನೆ. ಅಲ್ಲಿಗಿಂತಲೂ ಹೆಚ್ಚು ಜನ ಇಲ್ಲಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞ ಎಂದರು. * ಮೋದಿಯವರು ನಿರೀಕ್ಷೆಯಂತೆ ಕನ್ನಡದಲ್ಲೇ ಮಾತು ಆರಂಭಿಸುತ್ತ “ಮಂಗಳೂರು ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಆತ್ಮೀಯ ನಾಗರಿಕ ಬಂಧುಗಳೇ ನಿಮಗೆಲ್ಲರಿಗೂ ಚೌಕೀದಾರ್ ನರೇಂದ್ರ ಮೋದಿಯ ನಮಸ್ಕಾರಗಳು’ ಎಂದರು. * ಭಾಷಣ ಆರಂಭಕ್ಕೆ ಮುನ್ನ ಮೋದಿ ಅವರ ಗಮನ ಹರಿದದ್ದು ಕೇಂದ್ರ ಮೈದಾನದ ಸುತ್ತಲಿದ್ದ ಮರಗಳ ಮೇಲೆ. ಆ ಮರಗಳ ಮೇಲೆ ಕುಳಿತು, ನಿಂತು ಅನೇಕ ಮಂದಿ ಮೋದಿಯವರನ್ನು ಕಾಣುವ ತವಕದಲ್ಲಿದ್ದರು. ಮೋದಿ ಎಲ್ಲರನ್ನೂ ವಿನಂತಿಸಿ ಮರದಿಂದ ಇಳಿದು ಸಭಾಂಗಣಕ್ಕೆ ಬರುವಂತೆ ವಿನಂತಿಸಿದರು. ಮರದಿಂದ ಇಳಿದಿದ್ದಕ್ಕೆ ಧನ್ಯವಾದ. ನಾನು ಅತೀ ಶೀಘ್ರದಲ್ಲೇ ಇನ್ನೊಮ್ಮೆ ಬರುತ್ತೇನೆ ಎಂದರು.