Advertisement

ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಸ್ಥಳೀಯ ಉಗ್ರರಿಲ್ಲ!

10:30 PM Nov 27, 2022 | Team Udayavani |

ಶ್ರೀನಗರ: ಒಂದು ಕಾಲದಲ್ಲಿ ಉಗ್ರರ ನೆಚ್ಚಿನ ತಾಣವಾಗಿದ್ದ ಕಾಶ್ಮೀರದಲ್ಲಿ ಈಗ ಉಗ್ರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ! ಈ ವರ್ಷವೇ 169 ಉಗ್ರರನ್ನು ಹೊಡೆದು ಹಾಕಲಾಗಿದೆ. ಇದರಲ್ಲಿ 127 ಸ್ಥಳೀಯ ಮತ್ತು 42 ವಿದೇಶಿ ಉಗ್ರರು ಸೇರಿದ್ದಾರೆ.

Advertisement

ಈ ಮಾಹಿತಿಯನ್ನು ಜಮ್ಮು – ಕಾಶ್ಮೀರದ ಪೊಲೀಸರೇ ಹಂಚಿಕೊಂಡಿದ್ದಾರೆ. ಅದರಲ್ಲೂ ಮೂರು ಜಿಲ್ಲೆಗಳಲ್ಲಿ ಯಾವುದೇ ಸಕ್ರಿಯ ಸ್ಥಳೀಯ ಉಗ್ರರಿಲ್ಲ ಎಂದಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಉಗ್ರ ಸಂಘಟನೆಗಳಾದ ಲಷ್ಕರ್‌ ಎ ತಯ್ಯಬಾ (ಎಲ್‌ಇಟಿ) ಮತ್ತು ಜೈಶ್‌ ಎ ಮೊಹಮ್ಮದ್‌ ಸಂಘಟನೆಗೆ ಮುಖ್ಯಸ್ಥರೇ ಇಲ್ಲ. ಹೆಚ್ಚು ಕಡಿಮೆ ಎಲ್ಲ ಪ್ರಮುಖ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದಿದ್ದಾರೆ. ಹೀಗಾಗಿ ಕಣಿವೆ ರಾಜ್ಯಕ್ಕೆ ಪ್ರವಾಸಕ್ಕೆಂದು ಬರುವಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಬಂಡಿಪೋರ, ಕುಪ್ವಾರ ಮತ್ತು ಗಂಡೇರ್ಬಾಲ್‌ ಜಿಲ್ಲೆಗಳಲ್ಲಿ ಸ್ಥಳೀಯ ಉಗ್ರರು ಇಲ್ಲ. ಆದರೆ ಬಂಡಿಪೋರ ಮತ್ತು ಕುಪ್ವಾರದಲ್ಲಿ ಪಾಕಿಸ್ಥಾನದಿಂದ ಬಂದಿರುವ ತಲಾ ಏಳು ಉಗ್ರರು ಸಕ್ರಿಯರಾಗಿದ್ದಾರೆ. ಕಾಶ್ಮೀರ ಪ್ರದೇಶದಲ್ಲಿ 13 ಪೊಲೀಸ್‌ ಜಿಲ್ಲೆಗಳಿವೆ. ಈ ಜಿಲ್ಲೆಗಳಲ್ಲಿ ಒಟ್ಟು 81 ಉಗ್ರರು ಸಕ್ರಿಯರಾಗಿದ್ದು, ಇವರಲ್ಲಿ 29 ಮಂದಿ ಸ್ಥಳೀಯ ಮತ್ತು 52 ಉಗ್ರರು ಪಾಕ್‌ ಮೂಲದವರು ಆಗಿದ್ದಾರೆ ಎಂದು ಕಾಶ್ಮೀರ ವಲಯದ ಎಡಿಜಿಪಿ ವಿಜಯ್‌ಕುಮಾರ್‌ ತಿಳಿಸಿದ್ದಾರೆ.

ಇದಷ್ಟೇ ಅಲ್ಲ, ಭಯೋತ್ಪಾದನ ಸಂಘಟನೆಗಳಿಗೆ ಸೇರುವ ಸ್ಥಳೀಯ ಯುವಕರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ಕಳೆದ ಏಳು ವರ್ಷಗಳಲ್ಲಿ ಅತೀ ಕಡಿಮೆ ಎಂದರೆ ಈ ವರ್ಷ 99 ಮಂದಿ ಮಾತ್ರ ಸೇರಿದ್ದಾರೆ. ಅಲ್ಲದೆ ಸೇರಿದ ಎರಡು ಮೂರು ತಿಂಗಳಲ್ಲೇ ಸ್ಥಳೀಯ ಉಗ್ರರನ್ನು ಗುರುತಿಸಿ ಮಟ್ಟ ಹಾಕಲಾಗುತ್ತಿದೆ ಎಂದಿದ್ದಾರೆ.

ಹಾಗೆಯೇ ಕಣಿವೆಯಲ್ಲಿ ಬಂದ್‌ಗಳು, ಇಂಟರ್ನೆಟ್‌ ಸ್ಥಾಗಿತ್ಯ, ಕಲ್ಲು ಎಸೆತ ಪ್ರಕರಣಗಳು ಮತ್ತು ನಾಗರಿಕರ ಹತ್ಯೆಯಂಥ ಪ್ರಕರಣಗಳು ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾಗಿವೆ.

Advertisement

ಎರಡು ವರ್ಷಗಳಲ್ಲಿ ಉಗ್ರ ಮುಕ್ತ ಕಾಶ್ಮೀರ
ಸದ್ಯದ ಮಟ್ಟಿಗೆ ಕಾಶ್ಮೀರದಲ್ಲಿ ಭದ್ರತ ಪಡೆಗಳ ಕೈ ಮೇಲಾಗಿದೆ. ಯಾವುದೇ ಉಗ್ರರನ್ನು ನಾವು ಬಿಡುತ್ತಿಲ್ಲ. ಪೊಲೀಸರು, ಸೇನೆ, ಅರೆಸೇನಾ ಪಡೆಗಳು ಸೇರಿ ಉಗ್ರರನ್ನು ಸಂಹಾರ ಮಾಡುತ್ತಿವೆ. 50ಕ್ಕೂ ಕಡಿಮೆ ಹೈಬ್ರಿಡ್‌ ಉಗ್ರರಿದ್ದು, ಇವರನ್ನೂ ಮಟ್ಟ ಹಾಕಲಾಗುತ್ತಿದೆ ಎಂದು ವಿಜಯ್‌ಕುಮಾರ್‌ ಹೇಳಿದರು. ಇತ್ತೀಚೆಗಷ್ಟೇ ಉಗ್ರರಿಂದ ಟರ್ಕಿ ನಿರ್ಮಿತ ಪಿಸ್ತೂಲ್‌ ವಶ ಮಾಡಿಕೊಳ್ಳಲಾಗಿದ್ದು, ಇದು ಭದ್ರತ ಪಡೆಗಳ ಆತಂಕಕ್ಕೆ ಕಾರಣವಾಗಿದೆ. ಇವುಗಳನ್ನು ಪಾಕಿಸ್ಥಾನ ಸರಬರಾಜು ಮಾಡುತ್ತಿದೆ.

ಎಲ್‌ಇಟಿ, ಜೆಇಎಂಗೆ ಮುಖ್ಯಸ್ಥರೇ ಇಲ್ಲ
ಎಲ್ಲದಕ್ಕಿಂತ ಮುಖ್ಯವೆಂದರೆ ಸದ್ಯ ಕಾಶ್ಮೀರದಲ್ಲಿ ಎಲ್‌ಇಟಿ ಮತ್ತು ಜೆಇಎಂ ಉಗ್ರ ಸಂಘಟನೆಗಳಿಗೆ ಮುಖ್ಯಸ್ಥರೇ ಇಲ್ಲ. ಎಲ್ಲ ಕಮಾಂಡರ್‌ಗಳನ್ನು ಹೊಡೆದು ಹಾಕಲಾಗಿದೆ ಎಂದು ವಿಜಯಕುಮಾರ್‌ ಹೇಳಿದ್ದಾರೆ. ಆದರೂ 2015ರಿಂದ ಫಾರೂಖ್‌ ಎಂಬ ಹಿಜ್ಬುಲ್ ಮುಜಾಹಿದ್ದೀನ್‌ ಕಮಾಂಡರ್‌ ಇದ್ದಾನೆ. ಈತನೊಬ್ಬನೇ ಸಕ್ರಿಯ ಉಗ್ರ. ಈತನ ಪತ್ತೆಗೂ ಜಾಲ ಬೀಸಲಾಗಿದೆ ಎಂದಿದ್ದಾರೆ. ಎರಡು ವರ್ಷಗಳ ಹಿಂದೆ 80 ಕಮಾಂಡರ್‌ಗಳಿದ್ದರು ಎಂದು ತಿಳಿಸಿದರು.

ಉಗ್ರರಾದ ಸ್ಥಳೀಯರ ಸಂಖ್ಯೆ
2017 – 147
2018 – 201
2019 – 140
2020 – 167
2021 – 136

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next