Advertisement

ಸ್ತ್ರೀಯರಿಗೆ ಸಮಾನ ಅವಕಾಶಗಳು ಮರೀಚಿಕೆ

09:27 PM Mar 08, 2020 | Lakshmi GovindaRaj |

ಮೈಸೂರು: ಮಹಿಳೆಯರು ನಾಲ್ಕು ಗೋಡೆಯೊಳಗೆ ಸೀಮಿತವಾಗದೆ ಶಿಕ್ಷಣ ಪಡೆದು, ಔದ್ಯೋಗಿಕ ಕ್ಷೇತ್ರದಲ್ಲಿ ದುಡಿಯುವ ಮೂಲಕ ಆರ್ಥಿಕವಾಗಿ ಸ್ವಾಲಂಬಿ ಜೀವನ ನಡೆಸಬೇಕು ಎಂದು ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌ ಹೇಳಿದರು.

Advertisement

ನಗರದ ಮಾನಸಗಂಗೋತ್ರಿಯ ಸೆನೆಟ್‌ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ವತಿಯಿಂದ ಆಯೋಜೊಸಿದ್ದ ಜಿಲ್ಲಾ ಸ್ತ್ರೀ ಶಕ್ತಿ ಸಮಾವೇಶ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೌರ್ಜನ್ಯ ನಿಂತಿಲ್ಲ: ಸಮಾಜದಲ್ಲಿ ಇಂದಿಗೂ ಸಹ ಮಹಿಳೆಯರ ಮೇಲೆ ದೌರ್ಜನ್ಯ, ದಬ್ಟಾಳಿಕೆ, ಅತ್ಯಾಚಾರ ಹೆಚ್ಚುತ್ತಿವೆ. ಮಹಿಳೆಯರು ಎಲ್ಲವನ್ನು ಮೆಟ್ಟಿ ನಿಲ್ಲುವ ಧೈರ್ಯವನ್ನು ಬೆಳಸಿಕೊಳ್ಳಬೇಕು. ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಉದ್ಯೋಗ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಮುಂಚೂಣಿಯಲ್ಲಿದ್ದಾರೆ. ಇನ್ನೂ ಹೆಚ್ಚು ಪ್ರಮಾಣದಲ್ಲಿ ಮಹಿಳೆಯರು ಔದ್ಯೋಗಿಕ ಕ್ಷೇತ್ರಕ್ಕೆ ಬರಬೇಕು ಎಂದರು.

ನಿರಂತರವಾಗಿ ಶೋಷಣೆ: ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಗಳ ಸೋಮಶೇಖರ್‌ ಮಾತನಾಡಿ, ಮಹಿಳೆಯರು ವಿದ್ಯಾವಂತರಾಗುತ್ತಿದ್ದಾರೆ ಅದರೆ ಸಮಾನ ಅವಕಾಶಗಳು ಮರೀಚಿಕೆಯಾಗಿವೆ. ಸ್ತ್ರೀಯರು ಹಿಂಜರಿಕೆ, ಅಳುಕನ್ನು ಬಿಟ್ಟು ಎಲ್ಲಾ ರಂಗಗಳಲ್ಲೂ ಪಾಲ್ಗೊಳ್ಳುವುದು ಮತ್ತು ಭಾಗವಹಿಸುವುದನ್ನು ಮಾಡಬೇಕು. ಮಹಿಳೆಯ ಮೇಲೆ ನಿರಂತರವಾಗಿ ವ್ಯವಸ್ಥಿತವಾಗಿ ಶೋಷಣೆಗಳು ನಡೆಯುತ್ತಿವೆ ಹಾಗಾಗಿ ಅವುಗಳನ್ನು ತಡೆಗಟ್ಟಲು ಮಹಿಳೆಯರಲ್ಲಿ ಒಗ್ಗಟ್ಟು ಅತ್ಯವಶ್ಯ ಎಂದು ತಿಳಿಸಿದರು.

ಶೇ.50 ಮೀಸಲಾತಿ: ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಲಾಗಿದೆ. ಆದರೆ ವಿಧಾನಸಭೆ, ಲೋಕಸಭೆ ಗಳಲ್ಲಿ ಶೇ.35 ಮೀಸಲಾತಿ ಕೇಳುತ್ತಿದ್ದರು, ಈ ಪುರುಷ ಪ್ರಧಾನ ಸಮಾಜ ನೀಡುತ್ತಿಲ್ಲ. ಹೆಣ್ಣು ಮಕ್ಕಳಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.35ರಷ್ಟು ಮೀಸಲಾತಿ ನೀಡಿದರೆ ಮಹಿಳಾ ಪರ ಧ್ವನಿ ಎತ್ತಲು, ಮಹಿಳಾ ಪರ ಕಾಯ್ದೆಗಳನ್ನು ಜಾರಿಗೆ ತರುವಲ್ಲಿ ನೆರವಾಗುತ್ತ ದೆ ಎಂದರು.

Advertisement

ಅಸಮಾಧಾನ: ಸರ್ಕಾರದಿಂದ ಮಹಿಳೆಯರಿಗೆ ದೊರೆಯುವ ಎಲ್ಲಾ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮಹಿಳೆಯರಿಗೆ ಉನ್ನತವಾದ ಶಿಕ್ಷಣವನ್ನು ಪಡೆದು, ಬಾಲ್ಯವಿವಾಹದಿಂದ ದೂರ ಉಳಿಯಬೇಕು. ಪೋಷಕರು ಮೊದಲು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವವ‌ರಿಂದಲೇ ಮಹಿಳೆಯರ ಮೇಲೆ ಹೆಚ್ಚಿನ ದೌರ್ಜನ್ಯಗಳು, ಆತ್ಯಾಚಾರಗಳು, ಕೊಲೆಗಳು ಸಂಭವಿಸುತ್ತೀವೆ ಎಂದು ಅಸಮಾಧಾನ ಹೊರಹಾಕಿದರು.

ಅತ್ಯುತ್ತಮ ಕೃಷಿ ಮಹಿಳೆ ದಾಸಮ್ಮ: ಎಚ್‌.ಡಿ.ಕೋಟೆಯ ಸೊಳ್ಳೇಪುರ ಗ್ರಾಮದ ಪ್ರಗತಿಪರ ಕೃಷಿ ಮಹಿಳೆ ದಾಸಮ್ಮ ಅವರಿಗೆ ವರ್ಷದ ಅತ್ಯುತ್ತಮ ಕೃಷಿ ಮಹಿಳೆ ಎಂದು ಗುರುತಿಸಿ ಸನ್ಮಾನಿಸಲಾಯಿತು. ಅವರು ತರಕಾರಿ,ಅಣಬೆ, ಇತ್ಯಾದಿ ತರಕಾರಿ ಕೃಷಿ ಹಾಗೂ ಕುರಿ, ಮೇಕೆ ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಪರಿಮಳ ಶ್ಯಾಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಕೆ.ಪದ್ಮ, ಮೈಸೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ.ಎಸ್‌.ಎಂ. ಮಂಗಳ, ಆರ್‌.ಸಿ.ಎಚ್‌ ಆರೋಗ್ಯಧಿಕಾರಿ ಡಾ.ರವಿ, ಶಿಶುಯೋಜನಾಭಿವೃದ್ಧಿ ಅಧಿಕಾರಿ ಡಿ.ಸಿ.ಶಿವಲಿಂಗಪ್ಪ ಇತರರು ಉಪಸ್ಥಿತರಿದ್ದರು.

ಕಿರು ನಾಟಕ ಪ್ರದರ್ಶನ: ಮೈಸೂರು ವಿಶ್ವವಿದ್ಯಾನಿಲುದ ಮಹಿಳಾ ಮತ್ತು ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳಾ ಕಳ್ಳ ಸಾಗಾಣಿಕೆ, ರಾಜಕೀಯ ಅಸಮಾನತೆ ಮತ್ತು ಕುಟುಂಬದಲ್ಲಿನ ಅಸಮಾನತೆ, ಗಂಡು ಹೆಣ್ಣು ತಾರತಮ್ಯ, ಪ್ರೀತಿ ಪ್ರೇಮಕ್ಕೆ ಬಿದ್ದು ಜೀವನ ಕಳೆದುಕೊಳ್ಳುವುದನ್ನು ಬಿಂಬಿಸುವ ಕಿರು ನಾಟಕ ಪ್ರದರ್ಶಿಸಿದರು. ಪ್ರಾದೇಶಿಕ ಆಯುಕ್ತರ ಕಚೇರಿ ಶಾಂಕುತಲಾ ಅವರು ಕಿತ್ತೂರು ರಾಣಿ ಚೆನ್ನಮ್ಮ ಕುರಿತ ಏಕಪಾತ್ರ ಅಭಿನಯವನ್ನು ಮಾಡಿದರು.

ಉತ್ತಮ ಅಂಗನವಾಡಿ ಕಾರ್ಯಕರ್ತೆಯರು, ಅತ್ಯತ್ತಮ ಅಂಗನವಾಡಿ ಸಹಾಯಕಿಯರು, ಉತ್ತಮ ಸ್ತ್ರೀ ಶಕ್ತಿ ಸಂಘ, ಅತ್ಯತ್ತಮ ಸ್ತ್ರೀ ಶಕ್ತ ಒಕ್ಕೂಟಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ಅಸಾಧಾರಣ ಸಾಧನೆ ಮಾಡಿರುವ ಮಕ್ಕಳಿಗೆ ಜಿಲ್ಲಾ ಮಟ್ಟದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಜಿಲ್ಲಾ ಪಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next