Advertisement

ಭಾರತದಿಂದ ಕಲಿವ ಅಂಶಗಳಿವೆ; ಯು.ಕೆ. ನಿಯೋಜಿತ ಪ್ರಧಾನಿ ರಿಷಿ ಸುನಕ್‌ರ ಆರು ಅಭಿಮತಗಳು

12:21 AM Oct 25, 2022 | Team Udayavani |

1858ರಿಂದ 1947ರ ವರೆಗೆ ಬ್ರಿಟಿಷರು ನಮ್ಮ ದೇಶವನ್ನು ಆಳಿದ ಬಳಿಕ ನಮಗೆ ಸ್ವಾತಂತ್ರ್ಯ ದೊರೆಯಿತು. ಅಂಥ ದೇಶಕ್ಕೇ ಭಾರತದ ಮೂಲದ ವ್ಯಕ್ತಿ, ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ಸಂಸ್ಥಾಪಕ ಡಾ| ಎನ್‌.ಆರ್‌. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್‌ ಪ್ರಧಾನಮಂತ್ರಿಯಾಗುತ್ತಿದ್ದಾರೆ. ಲಿಜ್‌ ಟ್ರಸ್‌ ಆಯ್ಕೆಯಾಗುವ ಸಂದರ್ಭದಲ್ಲಿ ರಿಷಿ ಸುನಕ್‌ ಅವರಿಗೆ ನಿರೀಕ್ಷಿತ ಬೆಂಬಲ ವ್ಯಕ್ತವಾಗಿರಲಿಲ್ಲ. ಇದೀಗ ಪರಿಸ್ಥಿತಿ ಬದಲಾಗಿದ್ದು, ಕನ್ಸರ್ವೇಟಿವ್‌ ಪಕ್ಷದ ವತಿಯಿಂದ ಅವರೇ ನಾಯಕ ಮತ್ತು ಪ್ರಧಾನಮಂತ್ರಿ ಹುದ್ದೆಗೆ ಆಯ್ಕೆಯಾಗುತ್ತಿದ್ದಾರೆ. ಭಾರತದ ಜತೆಗೆ, ಯು.ಕೆ. ಅರ್ಥ ವ್ಯವಸ್ಥೆಯ ಬಗ್ಗೆ ಸೇರಿದಂತೆ ಹಲವು ಅಂಶಗಳ ಬಗ್ಗೆ ನಿಯೋಜಿತ ಪ್ರಧಾನಿ ಹೊಂದಿರುವ ಅಭಿಪ್ರಾಯಗಳು ಇಲ್ಲಿವೆ.

Advertisement

1.ಭಾರತದೊಡನೆ ದ್ವಿಮುಖ ಸಹಕಾರ ವೃದ್ಧಿಯಾಗಬೇಕು
ಭಾರತ ಮತ್ತು ಯು.ಕೆ.ಯ ವಿದ್ಯಾರ್ಥಿಗಳು ಮತ್ತು ಕಂಪನಿಗಳಿಗೆ ಅನುಕೂಲವಾಗುವ ರೀತಿಯಲ್ಲಿ 2 ದೇಶಗಳ ಬಾಂಧವ್ಯಗಳು ಮತ್ತಷ್ಟು ಸನಿಹಗೊಳ್ಳಬೇಕಾಗಿವೆ ಎಂದು ಅವರ ಅಭಿಪ್ರಾಯ. ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ಹುದ್ದೆಗೆ ಸ್ಪರ್ಧೆ ಮಾಡಿದ್ದಾಗ ಕನ್ಸರ್ವೇಟಿವ್‌ ಫ್ರೆಂಡ್ಸ್‌ (ಸಿಎಫ್ಐಎನ್‌) ಆಯೋಜನೆ ಮಾಡಿದ್ದ ಸಭೆಯಲ್ಲಿ ಅವರು ಮಾತನಾಡಿದ್ದರು. “ಯುನೈಟೆಡ್‌ ಕಿಂಗ್‌ಡಮ್‌ ಮತ್ತು ಭಾರತ ಹೊಂದಿರುವ ಉತ್ತಮ ಬಾಂಧವ್ಯಗಳ ಬಗ್ಗೆ ಹಾಗೂ ಅದರಲ್ಲಿನ ಅವಕಾಶಗಳ ಬಗ್ಗೆ ನಮಗೆಲ್ಲರಿಗೂ ಅರಿವು ಇದೆ. ಆದರೆ ಅದರ ಬಗ್ಗೆ ಕೊಂಚ ಭಿನ್ನವಾಗಿ ಯೋಚಿಸಬೇಕಾದ ಅಗತ್ಯ ಇದೆ. ಭಾರತದಿಂದ ಯು.ಕೆ. ಕಲಿಯಬೇಕಾದ ಅಂಶಗಳು ಬಹಳಷ್ಟು ಇವೆ. ಎರಡೂ ದೇಶಗಳ ನಡುವೆ ಬಾಂಧವ್ಯ ರೂಪಿಸಲು ನಾವೆಲ್ಲರೂ ಸಂಪರ್ಕ ಸೇತುವಾಗಿದ್ದೇವೆ’ ಎಂದಿದ್ದರು. ಭಾರತಕ್ಕೆ ತೆರಳಿ ಯು.ಕೆ.ಯ ವಿದ್ಯಾರ್ಥಿಗಳಿಗೆ ಅಧ್ಯಯನ ನಡೆಸಲು ಸುಲಭದ ವಾತಾವರಣ ಸೃಷ್ಟಿಸಲು ಬಯಸುವುದಾಗಿ ತಿಳಿಸಿದ್ದರು. ಇದರ ಜತೆಗೆ ಭಾರತ ಮತ್ತು ಯು.ಕೆ. ಕಂಪೆನಿಗಳು ಉಭಯ ದೇಶಗಳಲ್ಲಿ ವ್ಯಾಪಾರ, ಬಂಡವಾಳ ಹೂಡಿಕೆ ಮಾಡುವ ನಿಟ್ಟಿನಲ್ಲಿ ಇನ್ನಷ್ಟು ಉತ್ತಮ ವಾತಾವರಣ ಹೊಂದುವ ಅಗತ್ಯ ಇದೆ. ಈ ಮೂಲಕ ಎರಡೂ ದೇಶಗಳೂ ಪರಸ್ಪರ ದ್ವಿಮುಖ ಸಹಕಾರದ ಮಾರ್ಗ ವೃದ್ಧಿಯಾಗಬೇಕು ಎಂದು ಹೇಳಿದ್ದರು.

2.ಚೀನ ವಿರುದ್ಧ ಕಠಿನ ನಿಲುವು
ಜಗತ್ತಿನ ಭದ್ರತೆಗೆ ಚೀನ ನಂ.1 ಬೆದರಿಕೆ ಎಂದು ಜುಲೈನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದರು. ಒಂದು ವೇಳೆ ಪ್ರಧಾನಿಯಾದರೆ ಆ ದೇಶದ ವಿರುದ್ಧ ಕಠಿನ ನಿಲುವು ಕೈಗೊಳ್ಳುವುದಾಗಿಯೂ ಹೇಳಿಕೊಂಡಿದ್ದರು. ಯು.ಕೆ.ಯ ವಿವಿಗಳಿಂದ ಕಮ್ಯೂನಿಸ್ಟ್‌ ಪಾರ್ಟಿ ಆಫ್ ಚೀನದ ತತ್ವವನ್ನು ಹೊರಗಟ್ಟಬೇಕು. ದೇಶದಲ್ಲಿ ಇರುವ 31 ಕನೂ#ಷಿಯಸ್‌ ಇನ್ಸ್ಟಿಟ್ಯೂಟ್‌ (Confucius Institutes)ಗಳನ್ನು ನಿಷೇಧಿಸುವ ಉದ್ದೇಶ ಇದೆ. ಇಂಥ ಕ್ರಮದ ಮೂಲಕ ನಿಧಾನವಾಗಿ ಯು.ಕೆ.ಯ ಜನಜೀವನ, ಭಾಷೆ, ಸಂಸ್ಕೃತಿಯ ಮೇಲೆ ಚೀನ ಬೀರುವ ಪ್ರಭಾವ ತಗ್ಗಿಸಬೇಕಾಗಿದೆ. ಏಷ್ಯಾದ ನಂ.1 ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೇಶದಿಂದಲೇ ಯು.ಕೆ. ಮತ್ತು ಜಗತ್ತಿನ ಭದ್ರತೆಗೇ ಅಪಾಯ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಪ್ರಧಾನಿಯಾದ ಬಳಿಕ ಯಾವ ರೀತಿಯ ಕಠಿನ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇನೆ ಎಂದಿದ್ದರು.

3.ದೇಶದ ಅರ್ಥ ವ್ಯವಸ್ಥೆ ಸುಧಾರಿಸುವ ಪಣ
ಜಗತ್ತಿನ ಐದನೇ ಬೃಹತ್‌ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಯುನೈಟೆಡ್‌ ಕಿಂಗ್‌ಡಮ್‌ಗೆ, ಈಗ ಆ ಹೆಗ್ಗಳಿಕೆ ಇಲ್ಲ. ಅಮೆರಿಕದ ಡಾಲರ್‌ ಎದುರು ಪೌಂಡ್‌ ಸ್ಟರ್ಲಿಂಗ್‌ ಕುಸಿದಿದೆ. ಪ್ರಸಕ್ತ ವರ್ಷದ ಸೆಪ್ಟೆಂಬರ್‌ಗೆ ಸಂಬಂಧಿಸಿ ದಂತೆ ಹಣದುಬ್ಬರ ಪ್ರಮಾಣ ಶೇ.10.1. ಹೀಗಾಗಿ, ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ಪ್ರಥಮಾದ್ಯತೆ ಅವರ ಮುಂದೆ ಇದೆ. ರವಿವಾರ ಪ್ರಧಾನಿ ಹುದ್ದೆಗೆ ಅಧಿಕೃತವಾಗಿ ಸ್ಪರ್ಧೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದ ವೇಳೆ “ದೇಶದ ಅರ್ಥ ವ್ಯವಸ್ಥೆಯನ್ನು ಸುಧಾರಿಸುತ್ತೇನೆ. ನಮ್ಮ ಪಕ್ಷವನ್ನು ಒಗ್ಗೂಡಿಸಿ ದೇಶಕ್ಕೆ ಉತ್ತಮ ಸೇವೆ ನೀಡುತ್ತೇನೆ’ ಎಂದಿದ್ದರು. “ಯುನೈಟೆಡ್‌ ಕಿಂಗ್‌ಡಮ್‌ ಅತ್ಯುತ್ತಮ ದೇಶ. ಸದ್ಯ ಅದರ ಅರ್ಥ ವ್ಯವಸ್ಥೆ ಭಾರೀ ಸಂಕಷ್ಟ ಎದುರಿಸುತ್ತಿದೆ’ ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದರು. ಸದ್ಯ ನಾವು ಎದುರಿಸುತ್ತಿರುವ ಸವಾಲುಗಳು ಅತ್ಯಂತ ಹೆಚ್ಚಿನದ್ದಾಗಿವೆ. 2019ರ ಪ್ರಣಾಳಿಕೆಯಲ್ಲಿ ವಾಗ್ಧಾನ ಮಾಡಿದ್ದಂತೆ ನಾನು ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದೇನೆ. ಅದಕ್ಕೆ ಪೂರಕವಾಗಿ ನಾನೇನು ಮಾಡಿದ್ದೆ ಎಂಬುದಕ್ಕೆ ದಾಖಲೆಯೂ ಇದೆ. ಜತೆಗೆ ನಮಗೆ ಅವಕಾಶಗಳೂ ಇವೆ’ ಎಂದು ಹೇಳಿಕೊಂಡಿದ್ದಾರೆ.

4. ಅಂತಾರಾಷ್ಟ್ರೀಯ ರಕ್ಷಣ ವ್ಯವಸ್ಥೆ ಮತ್ತು ಉಕ್ರೇನ್‌
ಪ್ರಧಾನಿಗಳಾಗಿದ್ದ ಬೋರಿಸ್‌ ಜಾನ್ಸನ್‌ ಮತ್ತು ಲಿಜ್‌ ಟ್ರಸ್‌ ಅವರಂತೆ ಉಕ್ರೇನ್‌ ಬಗ್ಗೆ ಬೆಂಬಲದ ನಿಲುವು ಮುಂದುವರಿಸುವ ಸಾಧ್ಯತೆಗಳೇ ಅಧಿಕ. 2020ರಲ್ಲಿ ಅಮೆರಿಕದಲ್ಲಿ ಕಪ್ಪು ವರ್ಣೀಯ ಜಾರ್ಜ್‌ ಫ್ಲಾಯ್ಡ ಅಸುನೀಗಿದ ಬಳಿಕ ರಿಷಿ ಸುನಕ್‌ ತಮ್ಮ ಕುಟುಂಬ ಯು.ಕೆ.ಗೆ ಬಂದಿದ್ದ ಆರಂಭದ ದಿನಗಳಲ್ಲಿ ಎದುರಿಸಿದ್ದ ಸವಾಲುಗಳ ಬಗ್ಗೆ ಪ್ರಸ್ತಾವಿಸಿದ್ದರು. ಅಮೆಜಾನ್‌ ಮತ್ತು ಗೂಗಲ್‌ನಂಥ ಬಹುರಾಷ್ಟ್ರೀಯ ಕಂಪೆ‌ನಿಗಳಿಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪ್ರಸ್ತಾಪಿಸಿದ್ದ ಕರಡು ಯೋಜನೆಯನ್ನು ಅವರು ತಿರಸ್ಕರಿಸಿದ್ದರು.

Advertisement

5. ಹವಾಮಾನ ಬದಲಾವಣೆ
ಹವಾಮಾನ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ರಿಷಿ ಸುನಕ್‌ ಸದೃಢ ಅಭಿಪ್ರಾಯವನ್ನು ಹೊಂದಿಲ್ಲ ಎಂಬ ಅಂಬೋಣ ಯು.ಕೆ.ಯ ರಾಜಕೀಯ ಪಂಡಿತರದು. ಆದರೆ 2050ರ ಒಳಗಾಗಿ ಶೂನ್ಯ ಪ್ರಮಾಣದಲ್ಲಿ ಇಂಗಾಲ ಹೊರಸೂಸುವಿಕೆ ಹೊಂದುವ ಬಗ್ಗೆ ವಾಗ್ಧಾನ ಮಾಡಿದ್ದರು. ಜತೆಗೆ 2045ರ ಒಳಗಾಗಿ ಇಂಧನ ವಿಚಾರದಲ್ಲಿ ಬ್ರಿಟನ್‌ ಪೂರ್ಣ ಪ್ರಮಾಣದಲ್ಲಿ ಸ್ವತಂತ್ರವಾಗಲಿದೆ. ಜತೆಗೆ ತಮ್ಮ ದೇಶದ ಮನೆಗಳು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಪ್ರಮಾಣದಲ್ಲಿ ಇಂಧನ ಬಳಕೆ ಮಾಡುವ ವ್ಯವಸ್ಥೆ ಹೊಂದಬೇಕು. ಅಂಥ ವ್ಯವಸ್ಥೆ ಹೊಂದುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದರು.

6. ಎಲ್‌ಜಿಬಿಟಿ ಮತ್ತು ತೃತೀಯ ಲಿಂಗಿಗಳ ಬಗ್ಗೆ
ಯುನೈಟೆಡ್‌ ಕಿಂಗ್‌ಡಮ್‌ನ ನಿಯೋಜಿತ ಪ್ರಧಾನಿ ರಿಷಿ ಸುನಕ್‌ ಎಲ್‌ಜಿಬಿಟಿ ಮತ್ತು ತೃತೀಯ ಲಿಂಗಿಗಳ ಬಗ್ಗೆ ಸಂಸತ್‌ನಲ್ಲಿ ಚರ್ಚೆಗಳು ನಡೆದಿದ್ದಾಗ ಅವರು ಉಪಸ್ಥಿತರಿರಲಿಲ್ಲ. ವಿಶೇಷವಾಗಿ 2019ರಲ್ಲಿ ಉತ್ತರ ಐರ್ಲೆಂಡ್‌ನ‌ಲ್ಲಿ ಸಲಿಂಗಿಗಳ ವಿವಾಹವನ್ನು ಕಾನೂನುಬದ್ಧಗೊಳಿಸುವ ಸಂದರ್ಭದಲ್ಲಿ ಅವರು ಸಂಸತ್‌ನಲ್ಲಿ ಇರಲಿಲ್ಲ. ಮೊದಲ ಅವಧಿಯಲ್ಲಿ ಪ್ರಧಾನಿ ಹುದ್ದೆಗಾಗಿ ಕಣಕ್ಕೆ ಇಳಿದಿದ್ದ ಸಂದರ್ಭದಲ್ಲಿ ಮಾತನಾಡಿದ್ದ ಸುನಕ್‌ “ಅವರನ್ನು ಗೌರವಿಸಬೇಕು. ವಿವಿಧ ರೀತಿಯ ಕ್ರೀಡಾಕೂಟಗಳಲ್ಲಿ ಅವರಿಗೆ ಸ್ಪರ್ಧೆ ಮಾಡಲು ಅವಕಾಶ ಸಿಗುವಂತಾ ಗಬೇಕು. ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅವರಿಗಾಗಿ ಪ್ರತ್ಯೇಕ ಶೌಚಾಲಯಗಳೂ ನಿರ್ಮಾಣ ಗೊಳ್ಳಬೇಕು’ ಎಂದು ಪ್ರತಿಪಾದಿಸಿದ್ದರು. ಒಂದು ಸಂದರ್ಭದಲ್ಲಿ “ಡೈಲಿ ಮೈಲ್‌’ ಪತ್ರಿಕೆಗೆ ರಿಷಿ ಸುನಕ್‌ ಅವರ ಅತ್ಯಂತ ಆಪ್ತರೊಬ್ಬರು ನೀಡಿದ್ದ ಹೇಳಿಕೆ ಪ್ರಕಾರ ನಿಯೋಜಿತ ಪ್ರಧಾನಿ “ಸಾರ್ವಜನಿಕ ಜೀವನದಲ್ಲಿ ಲಿಂಗ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ. ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವ ಇರಾದೆಯಲ್ಲಿ ಇದ್ದೇನೆ’ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next