Advertisement

ವೈವಿಧ್ಯಗಳ ತವರಲ್ಲಿ ನೂರೆಂಟು ಸಮಸ್ಯೆ

04:38 PM Aug 19, 2018 | |

ಚಿತ್ರದುರ್ಗ: ಬರಿದಾದ ವಾಣಿವಿಲಾಸ ಜಲಾಶಯಕ್ಕೆ ಮಳೆಗಾಲದಲ್ಲಿ ನೀರು ಬಾರದಿದ್ದರೆ ಮತ್ತೆ ಯಾವಾಗ ನೀರು ಬರಬೇಕು, ಜಿಲ್ಲೆಯ ಜೀವನಾಡಿ ವೇದಾವತಿ ನದಿ ಯಾವಾಗ ಹರಿಯಬೇಕು, ಗಾಯತ್ರಿ ಜಲಾಶಯ, ಸುವರ್ಣಮುಖೀ ನದಿ ತುಂಬಿ ಹರಿಯುವುದು ಯಾವಾಗ?…

Advertisement

ಹಿರಿಯೂರು ತಾಲೂಕಿನಲ್ಲಿ ಏನಿಲ್ಲ ಎನ್ನುವುದಕ್ಕಿಂತ ಇರುವ ಸಂಪನ್ಮೂಲವನ್ನು ಬಳಸಿಕೊಂಡು ಸಮಗ್ರ ಅಭಿವೃದ್ಧಿ ಮಾಡುವ ಮನಸ್ಸುಗಳಿಲ್ಲ ಎಂದರೆ ತಪ್ಪಾಗಲಾರದು. ಬುಡಕಟ್ಟು ಸಮುದಾಯದ ತವರು, ಕಟ್ಟೆಮನೆಗಳ ಹೆಗ್ಗುರುತುಗಳನ್ನು ಹೊದ್ದಿರುವ ನದಿಗಳ ನಾಡು, ದೇವಸ್ಥಾನಗಳ ಬೀಡು, ಹಲವಾರು ವೈವಿಧ್ಯಗಳಿಂದ ಕೂಡಿದ್ದರೂ ಅಭಿವೃದ್ಧಿಯ ವಿಷಯ ಬಂದಾಗ ತೀರಾ ಹಿಂದುಳಿದಿದೆ. ಸ್ಥಳೀಯರಾದ ಮಾಜಿ ಸಚಿವ ವಿ. ಮಸಿಯಪ್ಪ, ಮಾಜಿ ಶಾಸಕ ಆರ್‌. ರಾಮಯ್ಯ ಅವರನ್ನು ಎರಡು ಅವಧಿಗೆ ಆಯ್ಕೆ ಮಾಡಿದ್ದು ಬಿಟ್ಟರೆ ಉಳಿದ ಸಂದರ್ಭದಲ್ಲಿ ಹೊರಗಿನ ವ್ಯಕ್ತಿಗಳಿಗೆ ಮಣೆ ಹಾಕಿದ್ದರಿಂದ ಅಭಿವೃದ್ಧಿಯಲ್ಲಿ ಇನ್ನೂ ಗಾವುದ ದೂರ ಉಳಿದಿದೆ ಎಂದರೆ ತಪ್ಪಾಗಲಾರದು.

ಹಿರಿಯೂರು ವೇದಾವತಿ ನದಿಯ ದಂಡೆಯ ಮೇಲಿದೆ. ಇಲ್ಲಿನ ತೇರುಮಲ್ಲೇಶ್ವರ ಸ್ವಾಮಿ ದೇವಾಲಯ “ದಕ್ಷಿಣ ಕಾಶಿ’ ಎಂದು ಖ್ಯಾತಿ ಪಡೆದಿದೆ. ತಾಲೂಕಿನ ಮತ್ತೂಂದು ಪ್ರಮುಖ ಆಕರ್ಷಣೆ ವಾಣಿವಿಲಾಸ ಸಾಗರವಾಗಿದ್ದು, ಆಂಧ್ರದ ಗಡಿಗೆ ಹೊಂದಿಕೊಂಡಿದೆ. 

ವೈವಿಧ್ಯಗಳ ತವರೂರು: ಗಾಯತ್ರಿ ಜಲಾಶಯ, ಭಾರತ ಭೂಪಟದಂತಿರುವ ವಾಣಿವಿಲಾಸ ಸಾಗರ ಜಲಾಶಯ, ವೇದಾವತಿ, ಸುವರ್ಣಮುಖೀ ನದಿ, ಮರಡಿಹಳ್ಳಿಯಲ್ಲಿರುವ ಪಿಲ್ಲೋ ಲಾವಾ ಶಿಲೆಗಳು, ಕಾಪಾಲಿಕ ಗುರು ವದ್ದೀಕೆರೆ ಸಿದ್ದೇಶ್ವರ, “ದಕ್ಷಿಣ ಕಾಶಿ’ ತೇರುಮಲ್ಲೇಶ್ವರ, ಮಳೆಯ ಕುರುಹು ನೀಡುವ ಅಂಬಲಗೆರೆ ಶ್ರೀರಂಗನಾಥ ಸ್ವಾಮಿ, ನೂರೊಂದು ದೇವಸ್ಥಾನಗಳಿರುವ ಹರ್ತಿಕೋಟೆ, ಕೂನಿಕೆರೆ ಆಂಜನೇಯಸ್ವಾಮಿ, ಮಾಯಸಂದ್ರ ಕರಿಯಮ್ಮ, ಕೋಡಿಹಳ್ಳಿ ರೇಣುಕಾದೇವಿ, ಟಿ.ಗೊಲ್ಲಹಳ್ಳಿಯ ಗೊಲ್ಲಾಳಮ್ಮ, ಹರಿಯಬ್ಬೆ ಕರಿಯಮ್ಮ, ಬುಡಕಟ್ಟು ಸಮುದಾಯಗಳ ಕಟ್ಟೆಮನೆ ನೆಲೆಗಳಾದ ಐಮಂಗಲ, ಹರಿಯಬ್ಬೆ, ಪಿ.ಡಿ. ಕೋಟೆ, ಆರನಕಣಿವೆ ರಂಗಪ್ಪ, ಧರ್ಮಪುರ ಸವಣಪ್ಪ ಇತರೆ ಹಲವು ಪ್ರದೇಶಗಳು, ವಿವಿ ಪುರದ ಸಮೀಪ ಇರುವ ಔಷ ಧೀಯ ವನ, ವಾಣಿವಿಲಾಸ ಸಾಗರದ ಹಿನ್ನೀರಿನ ಜಲ ಕ್ರೀಡೆ ಸೇರಿದಂತೆ ಹತ್ತು ಹಲವು ಪ್ರಮುಖ ಸ್ಥಳಗಳಿವೆ. ಅವೆಲ್ಲವನ್ನೂ ಅಭಿವೃದ್ಧಿಪಡಿಸಿದರೆ ಹಿರಿಯೂರು ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ. ಆ ಮೂಲಕ ತಾಲೂಕು ಅಭಿವೃದ್ಧಿ ಸಾಧಿಸಬಹುದು

ಹೆಸರುವಾಸಿ: ರಾಜ್ಯದಲ್ಲೇ ಕೃಷಿ ಮತ್ತು ತೋಟಗಾರಿಕೆ ಬೆಳೆ ಬೆಳೆಯುವುದರಲ್ಲಿ ಹಿರಿಯೂರು ಹೆಸರುವಾಸಿ. ಜಿಲ್ಲೆಗೆ ಹತ್ತಿ, ಕಬ್ಬು, ದಾಳಿಂಬೆ, ಅಂಜೂರ, ಮೋಸಂಬಿ, ಪಪ್ಪಾಯಿ ಮತ್ತಿತರ ಹಣ್ಣಿನ ಬೆಳೆಗಳನ್ನು ಪರಿಚಯಿಸಿದ್ದು ಹಿರಿಯೂರು ತಾಲೂಕಿನ ರೈತರು. ಆದರೆ ಇಂದು ಅನ್ನದಾತರು
ಸಂಕಷ್ಟದಲ್ಲಿದ್ದಾರೆ.

Advertisement

ಆದರೂ ಎದೆಗುಂದದೆ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಬಳಸಿಕೊಂಡು ಕೆಂಪು, ಮರಳು ಮಿಶ್ರಿತ ಬಳಪಿನ ಸೆಟ್‌ ಹಾಗೂ ಕಪ್ಪುಭೂಮಿಯಲ್ಲಿ ಉತ್ಕೃಷ್ಟ ಮಟ್ಟದ ದಾಳಿಂಬೆ, ಪಪ್ಪಾಯಿ, ಅಂಜೂರಿ ಹಣ್ಣುಗಳ ಉತ್ಪಾದನೆ ಮಾಡಿದ್ದಾರೆ. ಆದರೆ ನೀರಿನ ಸಮಸ್ಯೆಯಿಂದ ದಾಳಿಂಬೆ, ಅಂಜೂರ, ಅಡಿಕೆ, ತೆಂಗು ಒಣಗಿ ಹೋಗಿವೆ. ನೀರಿನ ಬವಣೆ ತಪ್ಪಿಸಲು ವಿವಿ ಸಾಗರ, ಗಾಯತ್ರಿ ಜಲಾಶಯ ಸೇರಿದಂತೆ ತಾಲೂಕಿನ ಎಲ್ಲ ಕೆರೆ, ಕಟ್ಟೆಗಳನ್ನು ಭರ್ತಿ ಮಾಡಿ ನೀರಾವರಿ ಸೌಲಭ್ಯ ಒದಗಿಸಬೇಕಿದೆ.

ಒಂದು ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿ ಹೊಂದಲು ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಜಿಲ್ಲೆಯಲ್ಲಿದ್ದ ಏಕೈಕ ವಾಣಿವಿಲಾಸ ಸಕ್ಕರೆ ಕಾರ್ಖಾನೆ ನೀರಿಲ್ಲದೆ ರೋಗಗ್ರಸ್ಥವಾಗಿ ಸ್ಥಗಿತಗೊಂಡಿದೆ. ಹಿರಿಯೂರು ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಹೇರಳವಾಗಿದೆ. ಆದರೆ ಉದ್ಯೋಗವಿಲ್ಲದೆ ಬೆಂಗಳೂರಿಗೆ ಗುಳೆ ಹೋಗಿ ಗಾರ್ಮೆಂಟ್ಸ್‌ ಫ್ಯಾಕ್ಟರಿಗಳಲ್ಲಿ ಸೇರಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಕೃಷಿ ಮತ್ತು ತೋಟಗಾರಿಕೆ ಹಾಗೂ ಜವಳಿ ಆಧಾರಿತ ಕೈಗಾರಿಕೆಗಳು ಆರಂಭಿಸಿ ಉದ್ಯೋಗ ಒದಗಿಸಿದಲ್ಲಿ ಹಿರಿಯೂರನ್ನು ಮಾದರಿ ಕ್ಷೇತ್ರವನ್ನಾಗಿಸುವ ಎಲ್ಲ ಅವಕಾಶಗಳೂ ಇವೆ 

Advertisement

Udayavani is now on Telegram. Click here to join our channel and stay updated with the latest news.

Next