Advertisement

ಬದುಕಿನ ಯಜ್ಞದಲ್ಲಿ ನೂರೆಂಟು ವಿಘ್ನ

11:07 AM Nov 04, 2018 | |

“ಅಪ್ಪ, ಆ ಭಗವದ್ಗೀತೆ ಕೊಡು ಓದ್ತೀನಿ..’ “ಭಗವದ್ಗೀತೆ ಓದುವುದರಿಂದ ಹೊಟ್ಟೆ ತುಂಬೋದಿಲ್ಲ ಕಣೋ, ಶಾಲೆ ಓದಬೇಕು…’ ಹೀಗೆ ಅರ್ಚಕನಾದ ಆ ಅಪ್ಪ, ತನ್ನ ಮಗನಿಗೆ ವಾಸ್ತವ ಸತ್ಯವನ್ನು ಹೇಳುತ್ತಾನೆ. ಅಷ್ಟೊತ್ತಿಗಾಗಲೇ ಜನ್ಮ ಗೊತ್ತಿಲ್ಲದ, ಧರ್ಮ ಗೊತ್ತಿಲ್ಲದ ನಾಲ್ವರು ಅನಾಥ ಹುಡುಗರನ್ನು ಒಂದೊಂದು ಧರ್ಮದವರು ಕರೆದುಕೊಂಡು ಹೋಗಿ ಸಾಕಿ ಸಲಹಿರುತ್ತಾರೆ. ಮುಂದೆ ಆ ನಾಲ್ವರು ಹುಡುಗರ ಬದುಕಲ್ಲಿ ಏನೆಲ್ಲಾ ನಡೆದು ಹೋಗುತ್ತೆ ಎಂಬುದೇ ಕಥೆ ಮತ್ತು ವ್ಯಥೆ.

Advertisement

ಈ ಚಿತ್ರ ಅಷ್ಟು ಸುಲಭವಾಗಿ ಒಂದೇ ಸಲ ಅರ್ಥವಾಗುವುದಿಲ್ಲ. ಹಾಗಂತ, ಎರಡು ಬಾರಿ ನೋಡುವಂತಹ ಸಿನಿಮಾನೂ ಅಲ್ಲ. ಕಥೆಯ “ಆಳ’ ಅಂಥದ್ದು! ನಿರ್ದೇಶಕರು “ಅರ್ಥ’ ಆಗದೇ ಇರುವಂತಹ ಕಥೆಯನ್ನು ಅರ್ಥ ಮಾಡಿಸಲು “ವ್ಯರ್ಥ’ ಪ್ರಯತ್ನ ಮಾಡಿರುವುದೇ ಹೆಚ್ಚುಗಾರಿಕೆ!! ಇಲ್ಲಿ ಮನುಷ್ಯನೊಳಗಿನ ನಾಲ್ಕು ಗುಣಗಳ ಕಥೆ ಇದೆ. ಪಂಚಭೂತಗಳ ಕಥೆಯ ಹೂರಣವೂ ಇದೆ. ಎಲ್ಲವೂ ಒಂದೇ ಸಮ ಮಿಶ್ರಣಗೊಂಡಿರುವುದರಿಂದ ಅರ್ಥ ಮಾಡಿಕೊಳ್ಳಲು ತುಂಬಾ ತಾಳ್ಮೆ ಬೇಕು. ಅಂತಹ ತಾಳ್ಮೆ ಇಟ್ಟುಕೊಂಡು ಸಿನಿಮಾ ನೋಡುವುದಾದರೆ, ಅಭ್ಯಂತರವೇನಿಲ್ಲ.

ಇಲ್ಲಿ ಸರಳ ಕಥೆ ಇದೆ. ಆದರೆ, ತಕ್ಕುದಾದ ಚಿತ್ರಕಥೆಯ ಕೊರತೆಯದ್ದೇ ಸಮಸ್ಯೆ. ಮೊದಲರ್ಧದ ನಿರೂಪಣೆಯೇ ತೀರಾ ನಿಧಾನ ಮತ್ತು ಗೊಂದಲ. ದ್ವಿತಿಯಾರ್ಧದಲ್ಲಿ ಎಲ್ಲದ್ದಕ್ಕೂ ಉತ್ತರ ಸಿಕ್ಕಿದೆಯಾದರೂ, ಅಲ್ಲಲ್ಲಿ ಒಂದಷ್ಟು ಪ್ರಶ್ನೆಗಳಿಗೆ ಉತ್ತರವಿಲ್ಲ. ಮನುಷ್ಯನ ಬದುಕು ನಾಲ್ಕು ದಿನ ಮಾತ್ರ, ಇರುವಷ್ಟು ದಿನ ಚೆನ್ನಾಗಿ ಬಾಳಬೇಕು, ಎಲ್ಲವನ್ನೂ ಅರ್ಥ ಮಾಡಿಕೊಂಡು ಸುಂದರ ಬದುಕು ಕಳೆಯಬೇಕೆಂಬುದೇ ಕಥೆಯ ಒಟ್ಟಾರೆ ಆಶಯ. ಕಥೆ ಎಲ್ಲೆಡೆ ಸಲ್ಲುವಂಥದ್ದೇ. ಆದರೆ, ಇಲ್ಲಿ ಮಂಗಳೂರಿಗೆ ಸೀಮಿತವಾದಂತಿದೆ.

ಮಂಗಳೂರು ಪರಿಸರದಲ್ಲೇ ಕಥೆಯ ಚಿತ್ರಣ ಕಟ್ಟಿಕೊಡಲಾಗಿದೆ. ಪ್ರತಿ ಪಾತ್ರಗಳ ಮಾತುಗಳಲ್ಲೂ ಕಡಲ ತೀರದ ತೀವ್ರತೆಯನ್ನು ಹೆಚ್ಚಿಸಿದೆ. ಹಾಗಾಗಿ, ಮಂಗಳೂರಿನ ಸೊಗಡು ಮತ್ತು ಸೊಬಗನ್ನು ಹಾಗೊಮ್ಮೆ ನೋಡುವ ಹಾಗು ಕೇಳುವ ಅವಕಾಶವೊಂದೇ ಇಲ್ಲಿರುವ ಪ್ಲಸ್ಸು. ಸಿನಿಮಾದಲ್ಲಿ ಹಾಸ್ಯ ಇಡಲೇಬೇಕು ಎಂಬ ಉದ್ದೇಶ ನಿರ್ದೇಶಕರಲ್ಲಿ ಗಾಢವಾಗಿರುವುದರಿಂದಲೋ ಏನೋ, ತುಂಬಾ ಅಪಹಾಸ್ಯ ಎನಿಸುವಂತಹ ಹಾಸ್ಯ ದೃಶ್ಯಗಳು ಆಗಾಗ ಕಾಣಿಸಿಕೊಂಡು ನೋಡುಗರ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸುತ್ತವೆ.

ಚಿತ್ರದ ಅವಧಿಯನ್ನು ಕೊಂಚ ಕಡಿತಗೊಳಿಸಬಹುದಿತ್ತು. ವಿನಾಕಾರಣ ಎದುರಾಗುವ ಕೆಲ ಸನ್ನಿವೇಶಗಳಿಗೆ ಕತ್ತರಿ ಬಿದ್ದಿದ್ದರೆ, “ಜೀವನ ಯಜ್ಞ’ ಅರ್ಥಪೂರ್ಣ ಎನಿಸುತ್ತಿತ್ತು. ಆದರೂ, ಬದುಕಿನುದ್ದಕ್ಕೂ ಬರುವ ನೋವು, ನಲಿವು, ದುಃಖ, ದುಮ್ಮಾನ, ನಿರೀಕ್ಷಿಸದ ಘಟನೆಗಳು, ಅರ್ಥವಾಗದ ಮನುಷ್ಯನ ಮನಸ್ಥಿತಿಗಳು ಬದುಕಿನ ಸಣ್ಣ ಬದಲಾವಣೆಗೆ ಸಾಕ್ಷಿಯಂತಿವೆ. ಲಾಜಿಕ್‌ ಮತ್ತು ಮ್ಯಾಜಿಕ್‌ ವಿಷಯವನ್ನು ಬದಿಗೊತ್ತಿ, ಮೂರು ದಿನದ ಬಾಳಿನಲ್ಲಿ ನೂರೆಂಟು ತಿರುವುಗಳು ಬಂದಾಗ, ಹೇಗೆಲ್ಲಾ ಮನಸ್ಥಿತಿಗಳು ಬದಲಾಗುತ್ತವೆ ಎಂಬುದನ್ನಿಲ್ಲಿ ತೋರಿಸಿರುವುದೇ ಅರ್ಥಪೂರ್ಣ.

Advertisement

ಗೌರವ್‌, ಸೂರ್ಯ, ಹಿಟ್ಲರ್‌ ಮತ್ತು ಆಜಾದ್‌ ಈ ನಾಲ್ವರು ಚಿಕ್ಕಂದಿನಲ್ಲೇ ಅನಾಥರು. ಈ ನಾಲ್ವರನ್ನೂ ನಾಲ್ಕು ಧರ್ಮದವರು ಸಾಕಿ ಸಲಹುತ್ತಾರೆ. ಮುಂದೊಂದು ದಿನ ದೊಡ್ಡವರಾದ ಬಳಿಕ ಅವರದೇ ಸಮಸ್ಯೆಗಳಿಗೆ ಸಿಲುಕುತ್ತಾ ಹೋಗುತ್ತಾರೆ. ಶಾಲೆ ದಿನಗಳಲ್ಲಿ ಕಳೆದ ಬಾಲ್ಯ ಮತ್ತು ಬದುಕಿನ ಮೌಲ್ಯ ಮರೆಯಲಾಗದಂಥದ್ದು. ಆದರೆ, ಅವರ ಯೌವ್ವನ ಬದುಕಿನಲ್ಲಾಗುವ ಬದಲಾವಣೆಗಳಿಗೆ ಅನೇಕ ಘಟನೆಗಳು ಕಾರಣವಾಗುತ್ತವೆ.

ಆ ಘಟನೆ ಏನೆಂಬ ಕುತೂಹಲವೇ “ಜೀವನ ಯಜ್ಞ’ ಚಿತ್ರದ ಸಾರಾಂಶ. ಶೈನ್‌ಶೆಟ್ಟಿ ಪಟ ಪಟ ಮಾತಾಡುವ ಒಬ್ಬ ಆರ್‌ಜೆಯಾಗಿ, ಗೆಳೆಯನ ತಾಯಿಯನ್ನು ತನ್ನ ಹೆತ್ತಮ್ಮನಂತೆ ಸಾಕುವ ಹುಡುಗನಾಗಿ ಇಷ್ಟವಾಗುತ್ತಾರೆ. ಅದ್ವೈತ ಹೆಂಡತಿಯ ಆಸೆ, ಆಕಾಂಕ್ಷೆಗಳನ್ನು ಪೂರೈಸುವ ಗಂಡನಾಗಿ, ಅಮ್ಮನ ಆಸರೆಗೆ ದೂರವಾಗಿ ಒದ್ದಾಡುವ ಮಗನ ಪಾತ್ರವನ್ನು ನೀಟ್‌ ಆಗಿ ನಿರ್ವಹಿಸಿದ್ದಾರೆ.

ಉಳಿದಂತೆ ರಮೇಶ್‌ ಭಟ್‌ ಒಂದೇ ದೃಶ್ಯದಲ್ಲಿ ಕಾಣಿಸಿಕೊಂಡರೂ ಇಷ್ಟವಾಗುತ್ತಾರೆ. ಆದ್ಯ ಆರಾಧನಾ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಉಳಿದಂತೆ ಕಾಣುವ ಪಾತ್ರಗಳು ಅಷ್ಟಾಗಿ ಗಮನಸೆಳೆಯುವುದಿಲ್ಲ. ಆಶ್ಲೆ ಮೈಕೆಲ್‌ ಸಂಗೀತದಲ್ಲಿ ಎರಡು ಹಾಡುಗಳು ಚೆನ್ನಾಗಿವೆ. ಸಂದೇಶ್‌ ಬಾಬು ಹಿನ್ನೆಲೆ ಸಂಗೀತಕ್ಕಿನ್ನೂ ಧಮ್‌ ಇರಬೆಕಿತ್ತು. ಸುರೇಂದ್ರ ಪಡೆಯೂರು ಕ್ಯಾಮೆರಾದಲ್ಲಿ ಕುಡ್ಲದ ಸೊಬಗಿದೆ.

ಚಿತ್ರ: ಜೀವನ ಯಜ್ಞ
ನಿರ್ಮಾಣ: ಕಿರಣ್‌ ರೈ, ರಂಜನ್‌ ಶೆಟ್ಟಿ
ನಿರ್ದೇಶನ: ಶಿವು ಸರಳೇಬೆಟ್ಟು
ತಾರಾಗಣ: ಶೈನ್‌ ಶೆಟ್ಟಿ, ಅದ್ವೈತ, ಆದ್ಯ ಆರಾಧನಾ, ರಮೇಶ್‌ ಭಟ್‌, ಜಯಶ್ರೀ, ಅನ್ವಿತಾ ಸಾಗರ್‌ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next