Advertisement

ಆಗ ನಳಪುರಿ..ಈಗ ಹಾವೇರಿ…;18ನೇ ಶತಮಾನದಲ್ಲಿ ವ್ಯಾಪಾರಿ ಕೇಂದ್ರವಾಗಿ ಪರಿವರ್ತನೆ

12:29 PM Jan 06, 2023 | Team Udayavani |

ಯಾಲಕ್ಕಿ ಕಂಪಿನ ನಾಡು, ಮರಿ ಕಲ್ಯಾಣವೆಂದೇ ಪ್ರಸಿದ್ಧಗೊಂಡಿರುವ ಹಾವೇರಿ ಜಿಲ್ಲೆ ಸಾಕಷ್ಟು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹಾವೇರಿ ಜಿಲ್ಲೆ ತುಂಗಭದ್ರಾ ಮತ್ತು ವರದಾ ನದಿ ಪಾತ್ರದಲ್ಲಿ ಬರುತ್ತಿದ್ದು, ಇಲ್ಲಿನ ಜನರ ಇತಿಹಾಸ, ಪೂರ್ವ ನಾಗರಿಕತೆ ಬಗ್ಗೆ ಸಾಕಷ್ಟು ಐತಿಹ್ಯಗಳು ಕಂಡು ಬರುತ್ತಿವೆ.

Advertisement

ನಾಲ್ಕನೂರು ಮಹಾಜನರಿರುವ ಅಗ್ರಹಾರ, ಭೂಮಿಗೆ ಅದೊಂದು ಅಲಂಕಾರ, ಬ್ರಹ್ಮನ ನಿವಾಸ, ವೇದಗಳ ನೆಲೆ ಹಾಗೂ ವಿದ್ಯಾ ದೇವತೆ ಸರಸ್ವತಿಯ ನೆಲೆಬೀಡು ಎಂದೇ ಶಾಸನ ಕವಿ ವರ್ಣಿಸಿದ ಹಾಗೂ ಕರ್ನಾಟಕ ರಾಜ್ಯದ ಮಧ್ಯ ಭಾಗದಲ್ಲಿರುವ ಪ್ರದೇಶ ಹಾವೇರಿ. ಈ ಕ್ಷೇತ್ರವನ್ನು ನಳಪುರಿ ಎಂದು ಕರೆಯಲ್ಪಟ್ಟಿದ್ದು ಈ ಕ್ಷೇತ್ರಕ್ಕೂ ಮತ್ತು ನಳನಿಗೂ ಇರುವ ಸಂಬಂಧವನ್ನು ಕ್ರಿ.ಶ. 1157ರ ಕಾಲಮಾನದ ಕಲ್ಲುಮಂಟಪದ ಬಳಿ ದೊರೆತ ಶಾಸನದಲ್ಲಿ ಈ
ಕೆಳಗಿನ ಪ್ರಕಾರ ಉಲ್ಲೇಖೀಸಲಾಗಿದೆ.

ಹರಿವಹನೀರ್ಗೇಯಡಂಬರಲುರಗಂಕಂಡುನಳನದಂ
ಕಟ್ಟಸೆಹಾವೇರಿಯಂದು ಪರಮಾರ್ತ್ಧನಾಮ
ಮಾದುದಾ ಕೃತಯುಗದೊಳ್

ಹರಿಯುವ ನೀರಿಗೆ ಹಾವೊಂದು ಅಡ್ಡಲಾಗಿ ಬಂದಿದ್ದರಿಂದ ಈ ಪವಿತ್ರವಾದ ಕ್ಷೇತ್ರದಲ್ಲಿ ನಳಚಕ್ರವರ್ತಿ ಒಂದು ಕೆರೆ ಕಟ್ಟಿಸಿ ಕೃತಾಯುಗದಲ್ಲಿ ಹಾವೇರಿಯೆಂದು ನಾಮಾಂಕಿತ ಕೊಟ್ಟನು. ಕ್ರಿ.ಶ 1134ರ ಶಾಸನವು ಹೆಗ್ಗೆರಿಯನ್ನು ನಲ್ಲಹಳಕೆರೆ ಎಂದು ಕರೆಯಲಾಗಿದೆ. ಹಾವೇರಿ(ಹಾವು ಮತ್ತು ಕೆರೆ) ಈ ಹಿಂದೆ ಪುಲಿಗೆರೆ ಮುನ್ನೂರು(300) ಅಂದರೆ ಈಗಿನ ಲಕ್ಷ್ಮೇಶ್ವರಕ್ಕೆ ಸೇರುತ್ತಿತ್ತು. ಅದಕ್ಕಿಂತ ಮೊದಲು ಬಾಸವೂರು-140ಕ್ಕೆ ಸೇರಿತ್ತು.

ಹಾವೇರಿಯು ಶಾಸನೋಕ್ತವಾಗಿ ಹಾವರಿ, ಪಾವರಿ, ನಳಪುರಿ, ಹಾಹರಿ, ಸಿದ್ದನಾಥಕ್ಷೇತ್ರ ಹಾಗೂ ಹಾವೇರಿ ಎಂದು ಉಲ್ಲೇಖೀತಗೊಂಡಿದ್ದು, 400 ಮಹಾಜನರನ್ನೊಳಗೊಂಡಿದ್ದ ಅಗ್ರಹಾರವಾಗಿತ್ತೆಂಬುದು ವಿಶೇಷವಾಗಿದೆ. ಸುಮಾರು 35 ಶಾಸನಗಳು ಹಾವೇರಿಯಲ್ಲಿ ದೊರೆತಿವೆ. ಇಲ್ಲಿ ಪ್ರಸಿದ್ಧ, ಪ್ರಾಚೀನ ಪುರಸಿದ್ದೇಶ್ವರ ದೇವಸ್ಥಾನ(ಸಿದ್ಧನಾಥ ದೇವಸ್ಥಾನ) ಇದೆ. ಇದರ ಗರ್ಭಗುಡಿಯಲ್ಲಿ ದೊಡ್ಡದಾದ ಕುಳಿತ ಮೂರ್ತಿಯೊಂದು ಕಾಣಸಿಗುತ್ತದೆ. ಜಟೆ, ಗಡ್ಡಗಳುಳ್ಳ ಈ ಮೂರ್ತಿ ಕಾಳಮುಖ ಶೈವ ಪಂಥಕ್ಕೆ ಸೇರಿದ ಜ್ಞಾನರಾಶಿ ಎಂಬ ಯತಿಯದ್ದು. ಈ ದೇವಸ್ಥಾನದಲ್ಲಿ ನಾಲ್ಕು ಕಂಬಗಳನ್ನು ಕರುವಸಿಂಗೆಸೆಟ್ಟಿ, ಮೂಕಿಸೆಟ್ಟಿ, ಗಳತಿಗೆಯ ಮಲ್ಲಸೆಟ್ಟಿ ಹಾಗೂ ಮಹಾದೇವಸೆಟ್ಟಿಗಳು ದಾನವಾಗಿ ನೀಡಿದರು. ಸಿದ್ದೇಶ್ವರ ದೇವಸ್ಥಾನ ಕಟ್ಟೆ ಮೇಲೆ ಕುಳಿತುಕೊಂಡು ಪಂಚಾಯಿತಿಗಳು ಪ್ರಾಚೀನ ಕಾಲದಲ್ಲಿ ನಡೆಯುತ್ತಿದ್ದವು. ಇಂತಹ ಪವಿತ್ರವಾದ ಪಂಚಾಯಿತಿಯನ್ನು ಸುತ್ತಮುತ್ತಲಿನ ಜನ ಹಾವೇರಿ ಪಂಚಾಯಿತಿ ಎಂದು
ಕರೆಯುತ್ತಿದ್ದರು. ಅಕ್ಕಮಹಾದೇವಿ ಹೊಂಡ ಬಹಳ ಪುರಾತನವಾಗಿದೆ.

Advertisement

ಮುರಘಿಸ್ವಾಮಿಮಠ, ಹೊಂಡದಮಠ, ಹೊಸಕೇರಿಮಠ, ಹುಕ್ಕೇರಿಮಠ, ಹೊಸಮಠ, ಬಣ್ಣದಮಠ ಹಾಗೂ ರಾಘವೇಂದ್ರ ಸ್ವಾಮಿಗಳ ಮಠಗಳು ಹಾವೇರಿಯಲ್ಲಿಯ ಪ್ರಸಿದ್ಧ ಮಠಗಳಾಗಿವೆ. ಹೊಸಕೇರಿಮಠವು ಹಿಂದೆ ಛಾತ್ರ ನಿಲಯವಾಗಿತ್ತು ಎನ್ನಲು ಇಲ್ಲಿಯ ಶಾಸನ ಸಹಕಾರಿಯಾಗುತ್ತದೆ. ಹೊಂಡದಮಠದಲ್ಲಿ ಬೆಂಗಳೂರ ಮುರಘಿದೇವರು ಶಿವಾವಲ್ಲಭ ಶತಕ ರಚಿಸಿದರು. ಇದರ ತಾಳೆಗರಿ ಪ್ರತಿಯನ್ನು ನಾವು ಹಂಪಿ ವಿಶ್ವವಿದ್ಯಾಲಯದಲ್ಲಿ ನೋಡಬಹುದಾಗಿದೆ.

ಪೇಶ್ವೆಯವರ ಯತ್ನದಿಂದ ಕ್ರಿ.ಶ. 18ನೇ ಶತಮಾನದಲ್ಲಿ ಹಾವೇರಿ ವ್ಯಾಪಾರ ಕೇಂದ್ರವಾಯಿತು. ಇವರ ಕಾಲಕ್ಕೆ ಸೇರಿದ ಅಪ್ರಕಟಿತ ಶಾಸನವೊಂದನ್ನು ಬಸವೇಶ್ವರ ನಗರದಲ್ಲಿರುವ ಸರ್‌.ಎಂ. ವಿಶ್ವೇಶ್ವರಯ್ಯ ಶಾಲೆಯ ಹತ್ತಿರ ನೋಡಬಹುದಾಗಿದೆ. ಸಿದ್ದೇಶ್ವರ ದೇವಸ್ಥಾನ ಪಕ್ಕದಲ್ಲಿಯ ಬಾವಿಯೊಂದರ ನೀರಿನಿಂದ ಯಾಲಕ್ಕಿಯನ್ನು ತೊಳೆಯುತ್ತಿದ್ದರು. ಆಗ ಅವುಗಳು ಉಬ್ಬಿಕೊಂಡು ಬಿಳಿಯಾಗುತ್ತಿದ್ದವು. ಈ ಯಾಲಕ್ಕಿಗಳಿಗೆ ಮೈಸೂರು, ದುಂಡಶಿ ಹಾಗೂ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿದ್ದವು.

ಇಂತಹ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರವನ್ನು ಆಡಳಿತ್ಮಾಕವಾಗಿ 1997 ಆಗಸ್ಟ್‌ 24ರಂದು ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಿ ಧಾರವಾಡ ಜಿಲ್ಲೆಯಿಂದ ವಿಭಜಿಸಿ ಪುನರ್ವಿಂಗಡಣೆ ಮಾಡಿ ಹಾವೇರಿ, ಹಾನಗಲ್ಲ, ಹಿರೇಕೆರೂರು, ರಾಣೆಬೆನ್ನೂರು, ಬ್ಯಾಡಗಿ, ಶಿಗ್ಗಾವಿ, ಮತ್ತು ಸವಣೂರು ತಾಲೂಕುಗಳನ್ನು ಇದಕ್ಕೆ ಸೇರಿಸಿ ಇದರ ಸೌಂದರ್ಯ ಹೆಚ್ಚಿಸಿದರು. ಇಂತಹ ಮತ್ತೂಂದು ಹಾವೇರಿಯೆಂಬ ನಾಮಾಂಕಿತ ಪ್ರದೇಶ ಸಂಯುಕ್ತ ರಾಷ್ಟ್ರಗಳಲ್ಲಿರುವ, ಜಗತ್ತಿನಲ್ಲಿಯೇ ಶಾಂತಿಯುತ ಹಾಗೂ ಉತ್ತಮ ಶಿಕ್ಷಣ ಪದ್ಧªತಿಯನ್ನು ಹೊಂದಿದ ಫಿನ್‌ಲ್ಯಾಂಡ್‌ನ‌ಲ್ಲಿರುವುದೇ ವಿಶೇಷವಾಗಿದೆ ಎಂದು ಇತಿಹಾಸ ಬರಹಗಾರ, ಉಪನ್ಯಾಸಕ ಪ್ರಮೋದ ನಲವಾಗಲ ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next