Advertisement

ಆಗ ಆಟೋಟಗಳಿಂದ ದೂರ ಈಗ ಸೇನಾ  ವ್ಯಾಯಾಮದಲ್ಲಿ ನಿರತ

01:00 AM Feb 14, 2019 | Harsha Rao |

ಉಡುಪಿ: ಶಾಲಾ ದಿನಗಳಲ್ಲಿ ಓರಗೆಯವರು ವ್ಯಾಯಾಮ, ಆಟೋಟಗಳಲ್ಲಿ ನಿರತರಾಗಿರುತ್ತಿದ್ದರೆ ಇವರು ಅದರಿಂದ ಮಾರು ದೂರ. ಆದರೆ ಬದುಕು ಯಾರ ಕೈಹಿಡಿದು ಎಲ್ಲಿಗೆ ಒಯ್ಯುವುದೋ! ಆಗ ಮೈಕೈ ನುಗ್ಗು ಮಾಡಿಕೊಳ್ಳುವುದರಿಂದ ದೂರ ಉಳಿದಿದ್ದ ಸುಬ್ರಹ್ಮಣ್ಯ ಉಪಾಧ್ಯಾಯರು ಈಗ ಭಾರತೀಯ ಸೇನೆಯಲ್ಲಿ ಯೋಧ. ದೈಹಿಕ ಶ್ರಮವೇ ಸೇನೆಯ ಬದುಕು ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲವಲ್ಲ!

Advertisement

ಸುಬ್ರಹ್ಮಣ್ಯ ಉಪಾಧ್ಯಾಯ ಮೂಲತಃ ಉಡುಪಿ ದೊಡ್ಡಣಗುಡ್ಡೆಯವರು. ಇವರ ಅಜ್ಜ ಸುಬ್ಬ ರಾವ್‌ ಹುಬ್ಬಳ್ಳಿ ಸಮೀಪದ ನರಗುಂದದಲ್ಲಿ ಹೊಟೇಲ್‌ ಆರಂಭಿಸಿದಾಗ ಮಗ ಗೋಪಾಲ ರಾವ್‌ ಉಪಾಧ್ಯಾಯ ಕೂಡ ನರಗುಂದಕ್ಕೆ ಹೋದರು. ಸುಬ್ರಹ್ಮಣ್ಯ ಉಪಾಧ್ಯಾಯರು ಅಲ್ಲಿಯೇ ಓದಿದರು. ಬಳಿಕ ಹುಬ್ಬಳ್ಳಿಯಲ್ಲಿ ಬಿಎ ಪದವಿ ಮುಗಿಸಿದರು. ಟಿವಿಯಲ್ಲಿ ಸೇನೆಯ ಕಾರ್ಯಾಚರಣೆ ಬರುತ್ತಿದ್ದಾಗ ಸುಬ್ರಹ್ಮಣ್ಯರಿಗೆ ಆಸಕ್ತಿ ಕುದುರಿತ್ತು. ಅವರ ಎತ್ತರ, ದೈಹಿಕ ಸಾಮರ್ಥ್ಯವನ್ನು ನೋಡಿ ಬೆಂಗಳೂರಿನಲ್ಲಿದ್ದ ಚಿಕ್ಕಮ್ಮ, “ನೀನು ಸೇನೆಗೆ ಏಕೆ ಸೇರಬಾರದು, ಪ್ರಯತ್ನ ಮಾಡು’ ಎಂದದ್ದು ಪ್ರೇರಣೆಯಾಯಿತು. 

ಮೊದಲ ಬಾರಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆನ್ನುವಾಗ ಜ್ವರ ಬಂತು. ಮತ್ತೂಮ್ಮೆ ಪ್ರಯತ್ನ ಮಾಡಲು ಸಲಹೆ ಬಂತು. ಎರಡನೆಯ ಬಾರಿ ಸುಬ್ರಹ್ಮಣ್ಯ ಆಯ್ಕೆಯಾದರು. ಆಗ 2002, ಅವರ ನೇಮಕಾತಿ ಆದದ್ದು ಕ್ಲರ್ಕ್‌ ಹುದ್ದೆಗೆ. ಅವರ ಮುಖ್ಯ ಜವಾಬ್ದಾರಿ ಸೇನೆಯಲ್ಲಿ ಮುಂಚೂಣಿ ಪಾತ್ರ ವಹಿಸುವವರಿಗೆ ವಾಹನ, ಮಾನವ ಸಂಪನ್ಮೂಲಗಳಂತಹ ಅಗತ್ಯಗಳನ್ನು ಪೂರೈಸುವುದು.

ಅಸ್ಸಾಂ ಶಾಂತಿಗೆ ಸೇನೆಯೇ ಕಾರಣ
ಉಗ್ರರ ದಾಳಿ, ನಕ್ಸಲ್‌ ಕಲಹಗಳಿಂದ ಧಗಧಗಿಸುತ್ತಿದ್ದ ಅಸ್ಸಾಂನಲ್ಲಿ ಈಗ ಶಾಂತಿ ನೆಲೆಸಿದ್ದರೆ ಅದಕ್ಕೆ ಸೇನೆಯೇ ಕಾರಣ ಎಂಬುದನ್ನು ಸುಬ್ರಹ್ಮಣ್ಯ ಬಹು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ಸೇನಾ ನೆಲೆಗಳ ಮೇಲೆ ಆಗಾಗ ವಿವಿಧ ಉಗ್ರ ಸಂಘಟನೆಗಳು ದಾಳಿ ಮಾಡುತ್ತಲೇ ಇರುತ್ತವೆ. ಅಸ್ಸಾಂನಲ್ಲಿ ಹಿಂದೆ ಇದ್ದಂತಹ ಸ್ಥಿತಿ ಈಗಿಲ್ಲ. ರಾಜ್ಯದೊಳಗೆ ಉಗ್ರ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿಟ್ಟರೂ ನೆರೆ ಹೊರೆಯ ಗಡಿಗಳಿಂದ ಉಪಟಳ ಮಾಡುತ್ತಲೇ ಇರುತ್ತಾರೆ

Advertisement

– ಸುಬ್ರಹ್ಮಣ್ಯ ಹೇಳುತ್ತಾರೆ.

ಪಠಾಣ್‌ಕೋಟ್‌, ಸಾಂಬಾ ಘಟನೆ ಮರೆಯಲಾಗದು
ಸುಮಾರು 3 ವರ್ಷಗಳ ಹಿಂದೆ ಪಠಾಣ್‌ಕೋಟ್‌ ಮತ್ತು ಸಾಂಬಾದಲ್ಲಿ ಉಗ್ರರ ದಾಳಿ ನಡೆದಾಗ ಸುಬ್ರಹ್ಮಣ್ಯ ಅಲ್ಲಿನ ಸೇನಾ ಶಿಬಿರದಲ್ಲೇ ಇದ್ದರು. “ಅಂಥ ಘಟನೆಗಳು ಅಚಾನಕ್ಕಾಗಿ ಸಂಭವಿಸುತ್ತವೆ, ಎಂದೆಂದಿಗೂ ಮರೆಯಲಾಗದು’ ಎನ್ನುತ್ತಾರೆ ಸುಬ್ರಹ್ಮಣ್ಯ.

ಪಠಾಣ್‌ಕೋಟ್‌ ವಾಯು ನೆಲೆಯ ಮೇಲೆ ಉಗ್ರರು ದಾಳಿ ನಡೆಸಿದಾಗ ಹಿರಿಯ ಅಧಿಕಾರಿಗಳಿಂದ ಸೂಚನೆ ಬಂತು. ಸೇನೆಗೆ ಬೇಕಾದ ವಾಹನ, ಮಾನವ ಸಂಪನ್ಮೂಲ ಪೂರೈಸುವಲ್ಲಿ ಸುಬ್ರಹ್ಮಣ್ಯ ಮುಖ್ಯ ಪಾತ್ರ ವಹಿಸಿದರು. “ಇಂತಹ ಸಂದರ್ಭಗಳಲ್ಲಿ ಸಮಯ ಬಹಳ ಅಮೂಲ್ಯ. ಸಾಂಬಾದಲ್ಲಿ ಬೆಳಗ್ಗೆ ಉಗ್ರರು  ಒಮ್ಮಿಂದೊಮ್ಮೆಲೆ ದಾಳಿ ನಡೆಸಿದಾಗಲೂ ಸೇನೆ ಎದುರಿಸಿತು. ಸೇನೆಯ ಕ್ವಿಕ್‌ ರಿಯಾಕ್ಷನ್‌ ಟೀಮ್‌ ಉಗ್ರರನ್ನು ಹಿಮ್ಮೆಟ್ಟಿಸಿತು’ -ಸುಬ್ರಹ್ಮಣ್ಯ ನೆನಪಿಸಿಕೊಳ್ಳುತ್ತಾರೆ. 

ಕಾಲೇಜು ಓದಿದ ಬಳಿಕ ನಿರುದ್ಯೋಗಿಯಾಗಿದ್ದ, ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ. ನಾವು ಮತ್ತು ಸ್ನೇಹಿತರು ಸೇನೆ ಸೇರಲು ಪ್ರೋತ್ಸಾಹಿಸಿದೆವು. ಅವನಿಗೂ ಆಸೆ ಇತ್ತು. ನಮ್ಮ ಕುಟುಂಬದಲ್ಲಿ ಯಾರೂ ದೇಶ ರಕ್ಷಣೆಗೆ ಹೋಗಿರಲಿಲ್ಲ. ಈಗ ಮಗ ಇದ್ದಾನೆ, ಹೆಮ್ಮೆ ಅನಿಸುತ್ತದೆ. 
– ಗೋಪಾಲ ರಾವ್‌ ಉಪಾಧ್ಯಾಯ, ಸುಬ್ರಹ್ಮಣ್ಯ ಅವರ ತಂದೆ. 

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next