ತೆಕ್ಕಟ್ಟೆ : ಇಲ್ಲಿನ ರಾ.ಹೆ.66 ಪ್ರಮುಖ ಸರ್ಕಲ್‌ನಲ್ಲಿ ಕಾರಿಗೆ ಟ್ಯಾಂಕರ್ ಲಾರಿ ಢಿಕ್ಕಿಯಾಗಿ ನಾಲ್ವರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಜ.28 ರಂದು ಸಂಜೆ ಗಂಟೆ 4.25ರ ಸುಮಾರಿಗೆ ಸಂಭವಿಸಿದೆ
ಘಟನೆ: ಮಣಿಪಾಲದಲ್ಲಿ ಎಂಜಿನಿಯರ್ ಮುಗಿಸಿದ್ದ ಗುಹಾಹಟಿ ಮೂಲದ ನಾಲ್ವರು ವಿದ್ಯಾರ್ಥಿಗಳ ತಂಡ ಬಾಡಿಗೆ ಟೊಯೊಟಾ ಇಟಿಯಾಸ್ ಕಾರಿನಲ್ಲಿ ಜಿಲ್ಲೆಯ ದೇಗುಲ ದರ್ಶನಕ್ಕಾಗಿ ಆಗಮಿಸಿದ್ದು, ತೆಕ್ಕಟ್ಟೆ ಮಲ್ಯಾಡಿಯ ಗ್ರಾಮೀಣ ಸಂಪರ್ಕ ರಸ್ತೆಯಿಂದ ರಾ.ಹೆ.66 ಪ್ರಮುಖ ಮಾರ್ಗಕ್ಕೆ ಕಾರು ಚಾಲಕ ಯಾವುದೇ ಸೂಚನೆ ನೀಡದೆ ಏಕಾಏಕಿ ರಸ್ತೆಗೆ ಪ್ರವೇಶಿಸಿರುವುದರಿಂದ ಕುಂದಾಪುರದಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಲಾರಿಗೆ ನೇರವಾಗಿ ಬಂದು ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಬಲಭಾಗ ಸಂಪೂರ್ಣ ಜಖಂಗೊಂಡಿದೆ. ನಾಲ್ವರು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಮುರುಡೇಶ್ವರ ದೇಗುಲ ದರ್ಶನಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗಿದೆ.
ನಾಲ್ವರು ವಿದ್ಯಾರ್ಥಿಗಳ ಪ್ರಾಣ ಉಳಿಸಿದ ಟ್ಯಾಂಕರ್ ಲಾರಿ ಚಾಲಕ !
ಕಾರು ಅತೀ ವೇಗದಿಂದ ರಾ.ಹೆ.66 ಪ್ರವೇಶಿಸುತ್ತಿರುವುದನ್ನು ಅರಿತ ಟ್ಯಾಂಕರ್ ಲಾರಿ ಚಾಲಕ ವಾಹನ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು , ಅದೃಷ್ಟವಶಾತ್ ಸಂಭವನೀಯ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಲಾರಿ ಚಾಲಕನ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಅಪಘಾತಕ್ಕೆ ಆಹ್ವಾನಿಸುತ್ತಿದೆ ಅವೈಜ್ಞಾನಿಕ ಸರ್ಕಲ್ !
ಇತ್ತೀಚಿನ ದಿನಗಳಲ್ಲಿ ತೆಕ್ಕಟ್ಟೆ ರಾ.ಹೆ.66 ರ ಪ್ರಮುಖ ಸರ್ಕಲ್ ಅಪಘಾತ ವಲಯವಾಗಿ ಪರಿವರ್ತಿತವಾಗಿದ್ದು , ರಸ್ತೆಯ ಎರಡು ಕಡೆಗಳಲ್ಲಿರುವ ಅವೈಜ್ಞಾನಿಕ ಬಸ್ ತಂಗುದಾಣಗಳು ರಸ್ತೆ ನಿಯಮಗಳಿಗೆ ವಿರುದ್ಧವಾಗಿದ್ದು, ಬಸ್ ತಂಗುದಾಣಗಳಲ್ಲಿ ಬಸ್ ಚಾಲಕರು ರಸ್ತೆಯ ಮೇಲೆಯೇ ನಿಲ್ಲಿಸಿ, ಪ್ರಯಾಣಿಕರನ್ನು ಕರೆದೊಯ್ಯುವುದು ಒಂದೆಡೆಯಾದರೆ ಮತ್ತೊಂದೆಡೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ರಾ.ಹೆ.66 ನ್ನು ಆವರಿಸಿರುವ ಖಾಸಗಿ ಜಾಹೀರಾತು ನಾಮಫಲಕಗಳ ದರ್ಬಾರ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪರಿಣಾಮ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಗೊಂದಲ ಏರ್ಪಟ್ಟು ಇಂತಹ ಅವಘಡಗಳಿಗೆ ಕಾರಣವಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.