ತೆಕ್ಕಟ್ಟೆ : ಇಲ್ಲಿನ ಕುಂಭಾಶಿ ರಾ.ಹೆ.66 ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲದ ಸಮೀಪ ಮಾರುತಿ ಸ್ವಿಫ್ಟ್ ಕಾರು ಹಾಗೂ ಲಾರಿಗಳ ನಡುವೆ ಸರಣಿ ಅಪಘಾತ ಸಂಭವಿಸಿ ಕಾರು ಸಂಪೂರ್ಣ ನುಜ್ಜುಗುಜ್ಜಾದ ಘಟನೆ ಜ.12ರಂದು ರಾತ್ರಿ ಗಂಟೆ 7ರ ಸುಮಾರಿಗೆ ಸಂಭವಿಸಿದೆ.
ಹೆಮ್ಮಾಡಿಯ ಬ್ಯಾಂಕ್ ಉದ್ಯೋಗಿ ರಾಮಚಂದ್ರ ಗಾಣಿಗ ಅವರು ತನ್ನ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕುಂದಾಪುರದಿಂದ ಕೋಟದ ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದನವೊಂದು ಕಾರಿಗೆ ಅಡ್ಡ ಓಡಿ ಬಂದ ಪರಿಣಾಮ ವಾಹನ ನಿಯಂತ್ರಿಸಿದ ಪರಿಣಾಮ ಹಿಂದಿನಿಂದ ಬಂದ ಲಾರಿ ಏಕಾಏಕಿ ಬಂದು ಕಾರಿನ ಹಿಂಭಾಗಕ್ಕೆ ಬಂದು ಢಿಕ್ಕಿ ಹೊಡೆದಿದೆ. ಅದೇ ಸಂದರ್ಭದಲ್ಲಿ ಕಾರಿನ ಎಡಭಾಗದಲ್ಲಿ ಸಂಚರಿಸುತ್ತಿದ್ದ ಮತ್ತೂಂದು ಲಾರಿಗೂ ಕೂಡಾ ಢಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಮಾರುತಿ ಸ್ವಿಫ್ಟ್ ಕಾರು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ.
ಕತ್ತಲ ಹೆದ್ದಾರಿ : ರಾ.ಹೆ.66ರ ಗೋಪಾಡಿ, ಕುಂಭಾಶಿ, ಕನ್ನುಕೆರೆ , ಮಣೂರು ಸೇರಿದಂತೆ ಗ್ರಾಮಮಿತಿ ಇರುವ ಪ್ರದೇಶದಲ್ಲಿ ಸಮರ್ಪಕವಾದ ಪ್ರಖರ ದಾರಿದೀಪದ ಕೊರತೆ ಇರುವ ಪರಿಣಾಮ ರಾತ್ರಿ ವೇಳೆಯಲ್ಲಿ ಪಾದಚಾರಿಗಳು ಹಾಗೂ ಜಾನುವಾರು ರಸ್ತೆಯ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗುವಾಗ ರಾ.ಹೆ.66 ರಲ್ಲಿ ಸಂಚರಿಸುವ ವಾಹನ ಸವಾರರಿಗೆ ಗೋಚರವಾಗದೇ ಸಂಭವನೀಯ ಅವಘಡಗಳಿಗೆ ಕಾರಣವಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಿಐಎಸ್ ಗುರುತಿಲ್ಲದ 18,600 ಆಟಿಕೆ ವಶಪಡಿಸಿಕೊಂಡ ಕೇಂದ್ರ