ತೆಕ್ಕಟ್ಟೆ: ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಅರೆಬೈಲು ಸತೀಶ ದೇವಾಡಿಗ ಅವರ ಮನೆಯ ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಲು ಯತ್ನಿಸಿದ ಘಟನೆ ಮಾ.8 ರಂದು ರಾತ್ರಿ ಸಂಭವಿಸಿದ ಹಿನ್ನೆಲೆಯಲ್ಲಿ ಘಟನಾ ಸ್ಥಳದ ಸಮೀಪದ ಮಾವಿನ ತೋಪಿನ ನಡುವೆ ಇಲಾಖೆ ಬೋನ್ ಇರಿಸಿ, ಆಪರೇಷನ್ ಚೀತಾ ಕಾರ್ಯಾಚರಣೆಗೆ ಮುಂದಾಗಿದ್ದು, ನಿರಂತರ ಕಾರ್ಯಾಚರಣೆಯ ಬಳಿಕ ಗಂಡು ಚಿರತೆಯೊಂದು ಮಾ.10 ರಂದು ಸೆರೆಯಾಗಿದೆ.
ನಿರಂತರ ಕಾರ್ಯಾಚರಣೆ: ಈ ಹಿಂದೆ ಆ.4 ,2018 , ಅ.6, 2019, ಡಿ.12, 2019, ಡಿ.24,2019 ಹಾಗೂ ಎ.28,2022 , ಅ.2,2022 ಹಾಗೂ ಮಾ.10, 2023 ಸೇರಿದಂತೆ ಇದೇ ಸ್ಥಳದಲ್ಲಿ ಇರಿಸಿದ ಬೋನ್‌ಗೆ 7ನೇ ಚಿರತೆಯೊಂದು ಸೆರೆಯಾದಂತಾಗಿದೆ.
ಕಪ್ಪು ಚಿರತೆ ಸಂಚಾರ ?: ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಪರಿಸರದಲ್ಲಿ ಕಪ್ಪು ಚಿರತೆ ಸಂಚಾರ ಪ್ರತ್ಯಕ್ಷವಾಗಿದ್ದು, ಈ ಬಗ್ಗೆ ಕೂಡಾ ಇಲಾಖೆ ಕ್ರಮವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Related Articles
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಉಪ ವಲಯ ಅರಣ್ಯಾಧಿಕಾರಿ ಉದಯ, ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷೆ ಮಮತಾ ದೇವಾಡಿಗ, ಗ್ರಾ.ಪಂ. ಸದಸ್ಯ ಸುರೇಶ್ ಶೆಟ್ಟಿ ಮಾಲಾಡಿ, ಸುರೇಶ್ ದೇವಾಡಿಗ, ಮಾಲಾಡಿ ಅರೆಬೆ„ಲು ಸತೀಶ ದೇವಾಡಿಗ ಮತ್ತಿತರರು ಹಾಜರಿದ್ದರು.
– ವರದಿ: ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ