ತೆಕ್ಕಟ್ಟೆ: ಈ ಊರಿನಲ್ಲಷ್ಟೇ ಅಲ್ಲ; ಬಹುಗ್ರಾಮಗಳಲ್ಲಿ ಹಿತ್ತಲಲ್ಲೇ ಸಮಸ್ಯೆಗೆ ಮದ್ದಿರುತ್ತದೆ. ನಾವು ನೋಡುವುದಿಲ್ಲವಷ್ಟೇ. ಆಕಸ್ಮಾತ್ ನೋಡಿದರೂ ಗಮನಕೊಡುವುದಿಲ್ಲ. ಹಾಗೆಯೇ ಹಳ್ಳಾಡಿ ಹರ್ಕಾಡಿ ಗ್ರಾಮದಲ್ಲೂ ಈ ಗ್ರಾಮದಲ್ಲಿ ವಿಶೇಷ ಎನ್ನುವಂತೆ ದೊಡ್ಡದೆನಿಸುವ ಕೆರೆ ಇದೆ.
ಆದರೆ ಅದರ ಅಭಿವೃದ್ಧಿಯತ್ತ ಗಮನಹರಿಸಲೇಬೇಕಾದ ಹೊತ್ತಿದು. ಹಳ್ಳಾಡಿ ಹರ್ಕಾಡಿ ಗ್ರಾಮ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕುಗಳ ಸಂಗಮ ಸ್ಥಾನದಲ್ಲಿದೆ. ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ನ ವ್ಯಾಪ್ತಿಯಲ್ಲಿದೆ. ಕುಂದಾಪುರ ಇದಕ್ಕೆ ತಾಲೂಕು ಕೇಂದ್ರ.
ಈ ಗ್ರಾಮದಲ್ಲಿ ಕೃಷಿಕರೇ ಹೆಚ್ಚು. ಕೃಷಿಯ ಜತೆ ತೋಟಗಾರಿಕೆ, ಹೈನುಗಾರಿಕೆ ಇಲ್ಲಿ ಜೀವಂತಿಕೆ ತುಂಬಿರುವ ಚಟುವಟಿಕೆಗಳು. ಪ್ರಾಕೃತಿಕ ವನಸಿರಿಯನ್ನು ಹೊಂದಿದ ಗ್ರಾಮದಲ್ಲಿ ಕಾರಣಿಕ ಕ್ಷೇತ್ರದಲ್ಲಿ ಒಂದಾದ ಹೆಗ್ಡೆಕೆರೆ ಶ್ರೀ ನಂದಿಕೇಶ್ವರ ದೇವಸ್ಥಾನವಿದೆ. ಒಂದೇ ಸೂರಿನಡಿಯಲ್ಲಿ ದೈವ ಮತ್ತು ದೇವರ ಸಾನಿಧ್ಯವಿರುವುದು ಇಲ್ಲಿಯ ವಿಶೇಷ.
ಗ್ರಾಮದ ಜನಸಂಖ್ಯೆ 1,606, ವಿಸ್ತೀರ್ಣ 423.60 ಹೆಕ್ಟೇರ್‌ಗಳು. ಈ ಗ್ರಾಮದ ಪ್ರಮುಖ ರಸ್ತೆಗಳು ಕೊಂಚ ಪರವಾಗಿಲ್ಲ. ಆದರೆ ಬೇಸಗೆಯಲ್ಲಿ ಹಳ್ಳಾಡಿ ಮೇಲೆºಟ್ಟು ಪರಿಸರದಲ್ಲಿ ಅಂತರ್ಜಲಮಟ್ಟ ಕುಸಿತಗೊಂಡು, ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕಿದೆ.
ಈ ನಿಟ್ಟಿನಲ್ಲಿ ಇಲ್ಲಿರುವ ಜಲಮೂಲಗಳಲ್ಲಿ ಒಂದಾದ ಸುಮಾರು 1 ಎಕರೆಗೂ ಅಧಿಕ ವಿಸ್ತೀರ್ಣದ ಪುರಾತನ ಕೊಳ್ಕೆರೆ (ದೇವರ ಕೆರೆ) ಯನ್ನು ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಬೇಕು. ಅದರೊದಿಗೆ ವಾರಾಹಿ ಕಾಲುವೆ ನೀರನ್ನು ಇಲ್ಲಿಗೆ ಹರಿಸಿದರೆ ಬೇಸಗೆಯಲ್ಲಿ ಎದುರಾಗುವ ಶೇ.90ರಷ್ಟು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಇದು ಹಿತ್ತಲ ಮದ್ದು. ಈಗಲಾದರೂ ಬಳಸಿಕೊಳ್ಳಬೇಕು. ಇದರೊಂದಿಗೆ ಪರಿಶಿಷ್ಟ ಜಾತಿ, ಪಂಗಡದ ಕಾಲನಿ ಬಳಿ ಇರುವ ಮದಗವನ್ನೂ ಅಭಿವೃದ್ಧಿಪಡಿಸಬೇಕು.
ಜಲ ಜೀವನ್ ಮಿಷನ್ ಅಡಿಯಲ್ಲಿ ನೀರಾವರಿ ಯೋಜನೆ ಕಾಮಗಾರಿ ಚಾಲ್ತಿಯಲ್ಲಿದೆ. ಗಾವಳಿ ಸರಕಾರಿ ಪ್ರಾಥಮಿಕ ಶಾಲಾ ಸಮೀಪದಲ್ಲಿ ವಾಟರ್ ಟ್ಯಾಂಕ್ ಕೂಡಾ ನಿರ್ಮಾಣವಾಗಿದೆ.
ಆರೋಗ್ಯ ಕೇಂದ್ರ
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಸುಮಾರು 5 ಕಿ.ಮೀ. ದೂರದ ಬಿದ್ಕಲ್‌ಕಟ್ಟೆಗೆ ಕ್ರಮಿಸಬೇಕಾಗಿದೆ ಇಲ್ಲಿನ ಗ್ರಾಮಸ್ಥರು. ಇದಕ್ಕೆ ಒಂದು ಪರಿಹಾರ ಒದಗಿಸಬೇಕು. ಇದರೊಂದಿಗೆ ಸ್ಮಶಾನ ಸೌಕರ್ಯವೂ ಒದಗಬೇಕಿದೆ. ಪಶು ಚಿಕಿತ್ಸಾ ಕೇಂದ್ರದ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿದರೆ ಮಾತ್ರ ಈ ಗ್ರಾಮ ಅಭಿವೃದ್ಧಿಯಾಗಲಿದೆ ಎಂಬುದು ಜನರ ಅಭಿಪ್ರಾಯ.
ಈ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಗಳಿಗಿಂತಲೂ ನೆಟ್ ವರ್ಕ್ ಸಮಸ್ಯೆ ದೊಡ್ಡದು. ನಗರ ಪ್ರದೇಶದಲ್ಲಿ ಖಾಸಗಿ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುವ ಅದೆಷ್ಟೋ ಮಂದಿ ಕೋವಿಡ್ ನಂತರದ ದಿನಗಳಲ್ಲಿ ವರ್ಕ್ ಫ್ರಾರ್ಮ್ ಹೋಂ ಗೆಂದು ಊರಿಗೆ ಬಂದಿದ್ದಾರೆ. ನೆಟ್ ವರ್ಕ್ ಸಮಸ್ಯೆಯೇ ಅವರೆಲ್ಲರ ಕಾರ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ.
ಕಿರಿದಾದ ಹೆದ್ದಾರಿ
ಬಾರಕೂರು- ಜನ್ನಾಡಿ- ಹಾಲಾಡಿ ರಾಜ್ಯ ಹೆದ್ದಾರಿ ಈ ಗ್ರಾಮದ ಮಧ್ಯೆ ಹಾದು ಹೋಗುತ್ತಿದೆ. ರಸ್ತೆ ಇಕ್ಕೆಲಗಳಲ್ಲಿಯೇ ಅಂಗಡಿ ಮುಂಗಟ್ಟು ಹಾಗೂ ಈ ಮಾರ್ಗದಲ್ಲಿ ಘನವಾಹನಗಳ ಸಂಚಾರ ಅಧಿಕವಾಗಿದೆ. ಕೆಲವೊಮ್ಮೆ ಟ್ರಾಫಿಕ್ ಜಾಮ್ ಆಗುವುದೂ ಉಂಟು. ಈ ಕಿರಿದಾದ ಮಾರ್ಗ ರಸ್ತೆ ವಿಸ್ತರಣೆಗೊಂಡರೆ ಅನುಕೂಲವಾಗಲಿದೆ.
ಹಂತ ಹಂತವಾಗಿ ಅಭಿವೃದ್ಧಿ: ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಕ್ರಮ ಕ್ರಮ ಕೈಗೊಳ್ಳಲಾಗಿದೆ. ಶ್ಮಶಾನ , ಎಸ್ ಎಲ್‌ಆರ್‌ಎಮ್ ಘಟಕ ಹಾಗೂ ಪ್ರಾಥಮಿಕ ಆರೊಗ್ಯ ಕೇಂದ್ರ ನಿರ್ಮಾಣಕ್ಕೆ ಜಾಗ ಕಾದಿರಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. –
ಚಿಟ್ಟೆಬೈಲು ಜಗನ್ನಾಥ ಶೆಟ್ಟಿ ಅಧ್ಯಕ್ಷರು, ಗ್ರಾ.ಪಂ. ಹಾರ್ದಳ್ಳಿ ಮಂಡಳ್ಳಿ
ಹಂತ ಹಂತವಾಗಿ ಅಭಿವೃದ್ಧಿ: ಹಳ್ಳಾಡಿ ಗ್ರಾಮದ ಮೇಲ್ಬಟ್ಟು ಪರಿಸರಲ್ಲಿ ಬೇಸಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ಅಂತರ್ಜಲ ವೃದ್ದಿಗಾಗಿ ಪುರಾತನ ಕೊಳ್ಕೆರೆಗೆ ವಾರಾಹಿ ನೀರು ಹರಿಸಿದರೆ ಅನುಕೂಲವಾಗಲಿದೆ. ಗ್ರಾಮದಲ್ಲಿ ಶ್ಮಶಾನಗಳಿಲ್ಲದೇ ಖಾಸಗಿ ಜಾಗವನ್ನು ಅವಲಂಬಿಸಬೇಕಾದ ಸ್ಥಿತಿಯಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. –
ಸುರೇಶ್ ಮೊಗವೀರ ಹಳ್ಳಾಡಿ , ಸ್ಥಳೀಯರು
– ಟಿ.ಲೋಕೇಶ್ ಆಚಾರ್ಯ ತೆಕ್ಕಟೆ