ತೆಕ್ಕಟ್ಟೆ: ಇಲ್ಲಿನ ರಾ.ಹೆ.66 ಕೊಮೆ ರಸ್ತೆ ಸಮೀಪ ಚಲಿಸುತ್ತಿದ್ದ ಇನ್ಸೂಲೇಟರ್ ವಾಹನಕ್ಕೆ ಹಿಂದಿನಿಂದ ಬಂದ ಲಾರಿ ಢಿಕ್ಕಿಯಾಗಿ ಜಖಂಗೊಂಡ ಘಟನೆ ಮಂಗಳವಾರದಂದು ತಡರಾತ್ರಿ ಸಂಭವಿಸಿದೆ.
ಮಂಗಳವಾರ ರಾತ್ರಿ ಗಂಟೆ 1.15ರ ಸುಮಾರಿಗೆ ಮಲ್ಪೆಯಿಂದ ಮೀನು ತುಂಬಿಸಿಕೊಂಡು ಬರುತ್ತಿದ್ದ ಇನ್ಸೂಲೇಟರ್ ವಾಹನ ಮಣೂರು ಫಿಶ್ ಮಿಲ್‌ಗೆ ತೆರಳುವ ನಿಟ್ಟಿನಿಂದ ಚಾಲಕ ಯಾವುದೇ ಸೂಚನೆ ನೀಡಿದೆ ಏಕಾಏಕಿ ವಾಹನವನ್ನು ತೆಕ್ಕಟ್ಟೆ ಕೊಮೆ ಮಾರ್ಗಕ್ಕೆ ತಿರುಗಿಸಿದ ಪರಿಣಾಮ, ಅದೇ ಸಂದರ್ಭದಲ್ಲಿ ಹಿಂದಿನಿಂದ ಅತೀ ವೇಗದಿಂದ ಕೋಕ್ ತುಂಬಿಕೊಂಡು ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಬಂದು ಢಿಕ್ಕಿ ಹೊಡೆದಿದೆ.
ಘಟನೆಯ ತೀವ್ರತೆಗೆ ಇನ್ಸೂಲೇಟರ್ ವಾಹನದಲ್ಲಿ ಸಾಗುತ್ತಿದ್ದ ಮೀನುಗಳು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿ ಯಾಗಿ ಬಿದ್ದಿದೆ. ಇನ್ಸೂಲೇಟರ್ ವಾಹನದ ಹಿಂಭಾಗ ಹಾಗೂ ಲಾರಿಯ ಮುಂಭಾಗಗಳು ಸಂಪೂರ್ಣ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ಘಟನೆ ಸಂಭವಿಸುತ್ತಿದ್ದಂತೆ ಕೋಟ ಪೊಲೀಸ್ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.