Advertisement

ವಿದ್ಯುತ್‌ ಕಂಬಗಳಲ್ಲಿ ಕಬ್ಬಿಣ ರಾಡು ಕಳ್ಳತನ

03:20 PM Dec 03, 2022 | Team Udayavani |

ಚನ್ನಪಟ್ಟಣ: ವಿದ್ಯುತ್‌ ಕಂಬಗಳಲ್ಲಿನ ಕಬ್ಬಿಣದ ರಾಡುಗಳ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ವಿಪರ್ಯಾಸವೆಂದರೆ ಈ ಬಗ್ಗೆ ಬೆಸ್ಕಾಂ ಉನ್ನತ ಅಧಿಕಾರಿಗೆ ಮಾಹಿತಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.

Advertisement

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಅಳವಡಿಸಿರುವ ವಿದ್ಯುತ್‌ ಕಂಬಗಳಲ್ಲಿ ಕಳ್ಳತನವಾಗುತ್ತಿದ್ದು, ಕಬ್ಬಿಣದ ರಾಡನ್ನು ಕಳ್ಳರು ಬಿಚ್ಚಿಕೊಂಡು ಹೋಗಿರುವುದರಿಂದ ಯಾವಾಗ ಬೇಕಾದರೂ ವಿದ್ಯುತ್‌ ಕಂಬಗಳು ಬೀಳಬಹುದು. ಕಣ್ಣಿದ್ದು ಕುರುಡರಾಗಿರುವ ಸಂಬಂಧಪಟ್ಟ ಅಧಿಕಾರಿಗಳು ಹಾರಿಕೆ ಉತ್ತರ ಕೊಡುವ ಮೂಲಕ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಕಬ್ಬಿಣ ರಾಡು ಬಿಚ್ಚುತ್ತಿರುವ ಕಳ್ಳರು: ನಾಲ್ಕು ಪಥದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಗೊಂಡು ದಶ ಪಥದ ಹೆದ್ದಾರಿಯನ್ನಾಗಿ ಮಾಡಲಾಗುತ್ತಿದೆ. ರಸ್ತೆಯ ಅಗಲೀಕರಣಗೊಂಡ ಹಿನ್ನಲೆಯಲ್ಲಿ ಹೆದ್ದಾರಿ ಅಕ್ಕಪಕ್ಕ ಗ್ರಾಮಗಳಿಗೆ ವಿದ್ಯುತ್‌ ಸಂಚಾರ ಮಾಡಲು ಬೃಹತ್‌ ಕಬ್ಬಿಣದ ವಿದ್ಯುತ್‌ ಕಂಬಗಳನ್ನ ಹೆದ್ದಾರಿಯ ಪಕ್ಕದಲ್ಲಿ ಹಾಕಲಾಯಿತು. ದೊಡ್ಡ ದೊಡ್ಡ ವಾಹನಗಳ ಈ ಹೆದ್ದಾರಿಯಲ್ಲಿ ಸಂಚಾರ ಮಾಡುವುದರಿಂದ ಎತ್ತರದ ಉದ್ದೇಶದಿಂದ ಬೃಹತ್‌ ಗಾತ್ರದ ಕಬ್ಬಿಣದ ವಿದ್ಯುತ್‌ ಕಂಬಗಳ ಅಳವಡಿಸಲಾಗಿದೆ. ಇದರ ಜೊತೆಗೆ ಕಂಬಗಳು ಯಾವುದೇ ಮಳೆ- ಗಾಳಿಗೆ ಬೀಳದಂತೆ ನಟ್ಟು ಬೋಲ್ಟ್ ಹಾಕಿ, ಕೆಳ ಭಾಗದಿಂದ ಕಂಬದ ತುದಿಯ ದವರೆಗೂ ರಾಡುಗಳನ್ನ ಹಾಕಿ ಭದ್ರತೆ ಮಾಡಲಾಗಿತ್ತು.

ಎಲ್ಲೆಲ್ಲಿ ಕಳವು?: ತಾಲೂಕಿನ ಬೈರಾಪಟ್ಟಣ, ಮತ್ತೀಕೆರೆ ಶೆಟ್ಟಿಹಳ್ಳಿ, ಕೋಲೂರು ಗೇಟ್‌ ವರೆಗೂ ಕಬ್ಬಿಣದ ವಿದ್ಯುತ್‌ ಕಂಬ ಅಳವಡಿಸಿದ್ದು, ಈ ಕಂಬಗಳಲ್ಲಿ ಕಬ್ಬಿಣದ ರಾಡುಗಳನ್ನ ಕಳ್ಳರು ರಾತ್ರೋರಾತ್ರಿ ಕಳ್ಳತನ ಮಾಡುತ್ತಿದ್ದಾರೆ. ಒಂದು ಕಬ್ಬಿಣದ ರಾಡು ಸುಮಾರು ಒಂದೂವರೆಯಿಂದ ಎರಡು ಕೆ.ಜಿ ತೂಕ ಬರಲಿದ್ದು, ಕಳ್ಳರು ಈ ವಿದ್ಯುತ್‌ ಕಂಬದಲ್ಲಿ ಅಳವಡಿಸಿದ್ದ ರಾಡನ್ನ ಬಿಚ್ಚಿಕೊಂಡು ಹೋಗುತ್ತಿದ್ದಾರೆ.

ವಿದ್ಯುತ್‌ ಕಂಬದಿಂದ ಅಪಾಯ: ಸುಮಾರು 50ರಿಂದ 60 ಅಡಿ ಎತ್ತರದ ಕಬ್ಬಿಣದ ವಿದ್ಯುತ್‌ ಕಂಬಗಳಲ್ಲಿ ಈಗಾಗಲೇ ಕಂಬದಲ್ಲಿನ ನಟ್ಟು ಬೋಲ್ಟ್ ಬಿಚ್ಚಿಕೊಂಡು ವಿದ್ಯುತ್‌ ಕಂಬದ ರಾಡನ್ನ ಕದಿಯುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ವಿಷಯ ತಿಳಿದಿದ್ದರೂ, ಜಾಣ ಕರುಡು ಪ್ರದರ್ಶನ ಮಾಡುತ್ತಿದ್ದಾರೆ. ಈಗ ಹತ್ತು ಅಡಿ ಎತ್ತರದ ವರೆಗಿನ ರಾಡನ್ನ ಕಳ್ಳರು ಬಿಚ್ಚಿಕೊಂಡು ಹೋಗುತ್ತಿದ್ದಾರೆ. ಇದೇ ರೀತಿಯಲ್ಲಿ ಕಂಬದ ಎಲ್ಲಾ ರಾಡುಗಳನ್ನ ಬಚ್ಚಿಕೊಂಡರೆ ಮುಂದೆ ಜೋರು ಗಾಳಿ- ಮಳೆ ಬಂದರೆ ಕಂಬವೇ ಧರೆಗೆ ಬೀಳಲಿದೆ.

Advertisement

ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳನ್ನ ಕೇಳಿದರೆ, ಈ ಬಗ್ಗೆ ನಮಗೆ ವಿಷಯವೇ ಗೊತ್ತಿಲ್ಲ. ಹೆದ್ದಾರಿ ಪಕ್ಕದಲ್ಲಿ ಹಾಕಿರುವ ಕಂಬಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಚನ್ನಪಟ್ಟಣ ಎಇಇ ಚಂದನಾ ಹೇಳುತ್ತಾರೆ. ಅದೇನೇ ಇರಲಿ, ಇದು ನಮಗೆ ಬರಲ್ಲ ಅದು ನಮಗೆ ಬರಲ್ಲ ಎಂದು ಹೇಳುವ ಅಧಿಕಾರಿಗಳು ವಿಷಯ ತಿಳಿದಿದ್ದರೂ ಕೂಡ, ಸಂಬಂಧ ಪಟ್ಟ ಅಧಿಕಾರಿಗಳು ವಿಷಯ ಮುಟ್ಟಿಸಬಹುದಾಗಿತ್ತು. ಆದರೆ, ಇದುವರೆಗೂ ಕೂಡ ಯಾವ ಅಧಿಕಾರಿಗಳು ಕೂಡ ಗಮನ ಹರಿಸುತ್ತಿಲ್ಲ. ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ, ಮುಂದೆ ಆಗುವ ಭಾರಿ ಅನಾಹುತವನ್ನು ಈ ತಪ್ಪಿಸಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

ಬೈರಾಪಟ್ಟಣ, ಮತ್ತೀಕೆರೆ ಶೆಟ್ಟಿಹಳ್ಳಿ, ಕೋಲೂರು ಗೇಟ್‌ವರೆಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಬ್ಬಿಣದ ವಿದ್ಯುತ್‌ ಕಂಬ ಅಳವಡಿಸಿದ್ದು, ಈ ಕಂಬಗಳಲ್ಲಿ ಕಬ್ಬಿಣದ ರಾಡುಗಳನ್ನ ಕಳ್ಳರು ರಾತ್ರೋರಾತ್ರಿ ಕಳ್ಳತನ ಮಾಡುತ್ತಿದ್ದಾರೆ. ಇದರಿಂದ ವಿದ್ಯುತ್‌ ಪೂರೈಕೆಗೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಿ, ಅನಾಹುತ ತಪ್ಪಿಸಬೇಕಾಗಿದೆ. – ಗಣೇಶ್‌, ಬೈರಾಪಟ್ಟಣ ಗ್ರಾಮಸ್ಥ

ಹೆದ್ದಾರಿಯಲ್ಲಿ ಅಳವಡಿಸಿರುವ ವಿದ್ಯುತ್‌ ಕಂಬಗಳಿಗೂ ನಮಗೂ ಯಾವುದೇ ಸಂಬಂದವಿಲ್ಲ. ಇದು ನಮ್ಮ ಇಲಾಖೆಗೆ ಒಳಪಡುವುದಿಲ್ಲ. ಇದು ಕೆಪಿಟಿಸಿಎಲ್‌ ವ್ಯಾಪ್ತಿಗೆ ಬರುತ್ತದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು. – ಚಂದನಾ, ಚನ್ನಪಟ್ಟಣ ಎಇಇ

-ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next