ಮಲ್ಪೆ: ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಬೀಗ ಮುರಿದು ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ 2.5 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 10 ಸಾವಿರ ರೂ. ನಗದನ್ನು ಕಳವು ಮಾಡಿದ ಘಟನೆ ಜೂ. 17ರ ರಾತ್ರಿ ಮಲ್ಪೆ ನಾರಾಯಣಗುರು ಮಂದಿರದ ಸಮೀಪದ ಸತೀಶ್ ಪೈ ಅವರ ಮನೆಯಲ್ಲಿ ನಡೆದಿದೆ.
ಕಳ್ಳರು ಮುಖ್ಯದ್ವಾರದ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಕಪಾಟಿನ ಲಾಕರ್‌ನಲ್ಲಿದ್ದ ನಗ, ನಗದನ್ನು ಕದ್ದೊಯ್ದಿದ್ದಾರೆ. ಮನೆ ಸೋರುತ್ತಿದೆ ಎಂದು ರಿಪೇರಿ ಕೆಲಸ ಮಾಡುತ್ತಿದ್ದು ಇದರ ಹಿನ್ನೆಲೆಯಲ್ಲಿ ರಾತ್ರಿ ಸಮೀಪದ ಸಂಬಂಧಿಕರ ಮನೆಗೆ ಮಲಗಲು ಹೋಗುತ್ತಿದ್ದರು. ಜೂ. 18ರ ಬೆಳಗ್ಗೆ ವಿಷಯ ಬೆಳಕಿಗೆ ಬಂದಿದೆ.
36ಗ್ರಾಂನ ತುಳಸಿ ಹಾರ, 12ಗ್ರಾಂನ ನವರತ್ನದ ಉಂಗುರ, 8 ಗ್ರಾಂ ಚಿನ್ನದ ಉಂಗುರು, 5 ಗ್ರಾಂನ ಕಿವಿಯೋಲೆ, ಒಂದು ಮೂಗುತಿ, 8 ಗ್ರಾಂ ಚಿನ್ನದ ಮುತ್ತಿನ ಸರ ಸೇರಿ ಒಟ್ಟು 69.500 ಗ್ರಾಂ ಚಿನ್ನ ಹಾಗೂ 10 ಸಾವಿರ ನಗದನ್ನು ಎಗರಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.