ಪುಂಜಾಲಕಟ್ಟೆ: ಮನೆ ಮಂದಿ ಮನೆಯಲ್ಲಿಲ್ಲದ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದ ಘಟನೆ ಬೆಳ್ತಂಗಡಿ ತಾಲೂಕಿನ ಕುಕ್ಕಳ ಗ್ರಾಮದ ಪುಳಿಮಜಲು ಎಂಬಲ್ಲಿ ಸಂಭವಿಸಿದೆ.
ಇಲ್ಲಿನ ಪುರುಷೋತ್ತಮ ಗೌಡ ಅವರ ಮನೆಯಲ್ಲಿ ಬುಧವಾರ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕೊಂಡೊಯ್ದಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುರುಷೋತ್ತಮ ಗೌಡ ಅವರು ಬೆಳಗ್ಗೆ ಮನೆ ಮಂದಿ ಸಹಿತ ಪಾರೆಂಕಿ ಗ್ರಾಮದ ರಕ್ತೇಶ್ವರಿಪದವು ಎಂಬಲ್ಲಿಯ ತಮ್ಮ ಕೃಷಿ ಜಮೀನಿನ ಅಡಿಕೆ ತೋಟಕ್ಕೆ ಮದ್ದು ಬಿಡಲು ತೆರಳಿದ್ದು, ಮಧ್ಯಾಹ್ನ ಮನೆಗೆ ಬಂದು ಬಾಗಿಲ ಬೀಗ ತೆರೆಯಲು ಮನೆಯ ಮುಂಭಾಗದಲ್ಲಿದ್ದ ಚಪ್ಪಲ್ ಸ್ಟ್ಯಾಂಡ್‌ನಲ್ಲಿ ಶೂ ವೊಂದರಲ್ಲಿ ಇಟ್ಟಿದ್ದ ಕೀ ಇಟ್ಟ ಜಾಗದಲ್ಲಿರದೆ ಅಲ್ಲೆ ಪಕ್ಕದಲ್ಲಿ ಗೇರು ಬೀಜವನ್ನು ಹಾಕಿಟ್ಟಿದ್ದ ಡಬ್ಬದಲ್ಲಿ ಇಡಲಾಗಿತ್ತು. ಇದರಿಂದ ಅನುಮಾನಗೊಂಡ ಅವರು ಮನೆ ಬಾಗಿಲನ್ನು ತೆಗೆದು ನೋಡಿದಾಗ ಕಳ್ಳರು ಮಲಗುವ ಕೋಣೆಯಲ್ಲಿದ್ದ ದೊಡ್ಡ ಕಪಾಟಿನ ಬಾಗಿಲು ತೆರದು ಒಂದು ವ್ಯಾನಿಟಿ ಬ್ಯಾಗ್‌ನೊಳಗೆ ಇಟ್ಟಿದ್ದ ಒಟ್ಟು ಸುಮಾರು 60 ಗ್ರಾಂ ತೂಕದ ಚಿನ್ನಾಭರಣಗಳು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ.
ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ಒಂದು ಲಕ್ಷದ ಎಂಬತ್ತು ಸಾವಿರ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಪುಂಜಾಲಕಟ್ಟೆ ಠಾಣಾಧಿಕಾರಿ ಸೌಮ್ಯಾ ಜೆ. ಮತ್ತು ಸಿಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.