Advertisement

ಬಸ್ರೂರು : ದೇವಸ್ಥಾನದಿಂದ ಕಳವು

07:55 AM Jul 31, 2018 | Team Udayavani |

ಕುಂದಾಪುರ/ಬಸ್ರೂರು: ಇತಿಹಾಸ ಪ್ರಸಿದ್ಧ ಬಸ್ರೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಿಂದ ರವಿವಾರ ತಡರಾತ್ರಿ ಸುಮಾರು 2 ಲ. ರೂ. ಮೌಲ್ಯದ ಬೆಳ್ಳಿಯ 2 ಮುಖವಾಡಗಳನ್ನು ಕಳವು ಮಾಡಲಾಗಿದೆ.

Advertisement

ಘಟನೆ ವಿವರ
ಸುಮಾರು 1.30ರಿಂದ 1.45ರೊಳಗೆ ಹಿಂಬಾಗಿಲಿನಿಂದ  ಬಂದ ಕಳ್ಳರು ಆವರಣದಲ್ಲಿದ್ದ ಎರಡು ಗುಡಿಗಳ  ಹಾಗೂ ಗರ್ಭಗುಡಿಯ ಬೀಗವನ್ನು ಒಡೆದು ಒಳನುಗ್ಗಿದ್ದಾರೆ. ಶ್ರೀ ದುರ್ಗಾಪರಮೇಶ್ವರಿ ದೇವಿ ಹಾಗೂ ಶ್ರೀ ಮಹಾಗಣಪತಿ ಗುಡಿಗಳ ವಿಗ್ರಹದಲ್ಲಿದ್ದ ತಲಾ 2 ಕೆ.ಜಿ.ಯ ಸುಮಾರು 2 ಲ. ರೂ. ಮೌಲ್ಯದ 2 ಬೆಳ್ಳಿಯ ಮುಖವಾಡಗಳನ್ನು ಕದ್ದೊಯ್ದಿದ್ದಾರೆ. ಗಣಪತಿ ವಿಗ್ರಹದಲ್ಲಿದ್ದ ಪ್ರಭಾವಳಿಯನ್ನು ಮಾತ್ರ ಬಿಟ್ಟು ಹೋಗಿದ್ದಾರೆ. ಅದು ಭಾರವಿದ್ದು, ಒಯ್ಯಲು ಕಷ್ಟವಾದ್ದರಿಂದ ಬಿಟ್ಟು ಹೋಗಿರಬಹುದು ಎನ್ನಲಾಗಿದೆ. ಸುಮಾರು 12 ಗಂಟೆಗೆ ಗ್ರಾಮಾಂತರ ಪೊಲೀಸರು ಗಸ್ತು ಬಂದಿದ್ದು, ಆ ಬಳಿಕ  ಕಳವು ನಡೆದಿದೆ.


ಚಿನ್ನಾಭರಣ ಸುರಕ್ಷಿತ

ಗರ್ಭಗುಡಿ ಪ್ರವೇಶಿಸುವಾಗ ಸೈರನ್‌ ಮೊಳಗಿದ್ದು,  ಕೂಡಲೇ ಕಳ್ಳರು ಪರಾರಿಯಾಗಿದ್ದಾರೆ. ಗರ್ಭಗುಡಿಯಲ್ಲಿದ್ದ ಇತರ ಚಿನ್ನಾಭರಣವನ್ನು ಸ್ಟ್ರಾಂಗ್‌ ರೂಂನಲ್ಲಿಟ್ಟಿದ್ದ ಕಾರಣ ಅವು ಸುರಕ್ಷಿತವಾಗಿವೆ. ಇದು ನುರಿತ ಕಳ್ಳರು ಮತ್ತು ದೇವಸ್ಥಾನದ ಬಗ್ಗೆ ತಿಳಿದುಕೊಂಡವರ ಕೆಲಸವಾಗಿರಬೇಕು ಎಂದು ಶಂಕಿಸಲಾಗಿದೆ.

ಶ್ವಾನದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ
ತಡರಾತ್ರಿ ಮಾಹಿತಿ ಸಿಕ್ಕ ಕೂಡಲೇ ಕುಂದಾಪುರ ಗ್ರಾಮಾಂತರ ಠಾಣೆ ಎಸ್‌.ಐ. ಶ್ರೀಧರ್‌ ನಾಯ್ಕ ಹಾಗೂ ಸಿಬಂದಿ ಭೇಟಿ ನೀಡಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಕೂಡ ಆಗಮಿಸಿದ್ದಾರೆ. ಶ್ವಾನವು ದೇವಸ್ಥಾನದ ಹಿಂಬಾಗಿಲಿನ ಮೂಲಕ ಆನಗಳ್ಳಿ ಕಡೆಗೆ ತೆರಳುವ ಮಾರ್ಗದವರೆಗೆ ತೆರಳಿದೆ.

ಹೆಚ್ಚುವರಿ ಎಸ್ಪಿ ಭೇಟಿ, ಪರಿಶೀಲನೆ


ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಡಿವೈಎಸ್ಪಿ ಬಿ. ದಿನೇಶ್‌ ಕುಮಾರ್‌, ಸರ್ಕಲ್‌ ಇನ್‌ ಸ್ಪೆಕ್ಟರ್‌ ಮಂಜಪ್ಪ ಡಿ.ಆರ್‌. ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹೊರಗಿನಿಂದ ಚಿಲಕ ಹಾಕಿ ಕೂಡಿ ಹಾಕಿದರು!
ದೇವಸ್ಥಾನದ ಪಕ್ಕದಲ್ಲೇ ಅರ್ಚಕ ಮನೆಯಿದೆ. ಆದರೆ ದೇವಸ್ಥಾನಕ್ಕೆ ನುಗ್ಗುವ ಮೊದಲು ಕಳ್ಳರು ಅರ್ಚಕರ ಮನೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ, ಅವರು ಹೊರಬರದಂತೆ ಎಚ್ಚರ ವಹಿಸಿದ್ದಾರೆ. ದೇವಸ್ಥಾನದ ಕಚೇರಿಯಲ್ಲಿಯೂ ಸಿಬಂದಿ ಮಲಗಿದ್ದು, ಅದಕ್ಕೂ ಕಳ್ಳರು ಬಾಗಿಲು ತೆರೆಯದಂತೆ ಹೊರಗಿನಿಂದ ಲಾಕ್‌ ಹಾಕಿದ್ದಾರೆ. ಗರ್ಭಗುಡಿಯೊಳಗೆ ಪ್ರವೇಶಿಸಿದಾಗ ಸೈರನ್‌ ಮೊಳಗಿದ್ದು, ಆಗ ಅರ್ಚಕರಿಗೆ ಎಚ್ಚರವಾಗಿ ಹೊರಬರಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. 

ತನಿಖೆಗೆ ಎರಡು ತಂಡ ರಚನೆ
ಕಳ್ಳರ ಪತ್ತೆಗಾಗಿ ಕಂಡ್ಲೂರು ಎಸ್‌.ಐ. ಹಾಗೂ ಡಿ.ವೈ.ಎಸ್‌.ಪಿ. ನೇತೃತ್ವದ ಎರಡು ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಕೆಲವು ಸುಳಿವುಗಳನ್ನು ಕಲೆ ಹಾಕಿದ್ದು, ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ದೇವಸ್ಥಾನದ ಸಿಸಿಕೆಮರಾ, ಅಕ್ಕಪಕ್ಕದ ಅಂಗಡಿಗಳು, ಬ್ಯಾಂಕ್‌ ಮತ್ತಿತರ ಮಳಿಗೆಯ ಸಿಸಿಟಿವಿಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ.
– ದಿನೇಶ್‌ ಕುಮಾರ್‌, ಡಿವೈಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next