ಬೆಂಗಳೂರು: ಕೆಲಸ ಮಾಡುತ್ತಿದ್ದ ಮಾಲೀಕರ ಮನೆ ಯಲ್ಲೇ ಚಿನ್ನಾಭರಣ ದೋಚಿದ್ದ ಕೆಲಸದಾಕೆಯನ್ನು ಒಂದು ವರ್ಷದ ಬಳಿಕ ಕೆಂಗೇರಿ ಠಾಣೆ ಪೊಲೀಸರು, ಆರೋಪಿತೆಗೆ ಬ್ರೈನ್ ಮ್ಯಾಪಿಂಗ್ ಮಾಡಿಸುವ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಡಿಪಾಳ್ಯ ನಿವಾಸಿ ಶಾರದಮ್ಮ(67) ಬಂಧಿತೆ. ಆಕೆಯಿಂದ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಕೋಡಿಪಾಳ್ಯ ವಿನಾಯಕ ಲೇಔಟ್‌ನ ರಿಯಲ್ ಎಸ್ಟೇಟ್ ಏಜೆಂಟ್ ಶಶಿಕಾಂತ್ ಎಂಬುವರ ಮನೆಯಲ್ಲಿ 2023ರ ಜುಲೈನಲ್ಲಿ ಶಾರದಮ್ಮ ಚಿನ್ನಾಭರಣ ಕಳವು ಮಾಡಿದ್ದರು ಎಂದು ಪೊಲೀಸರು ಹೇಳಿದರು.
ವಿನಾಯಕ ಲೇಔಟ್‌ನಲ್ಲಿ ನೆಲೆಸಿದ್ದ ಶಶಿಕಾಂತ್‌ರ ಪತ್ನಿ ಚಂದ್ರಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುಶೂಷಕಿಯಾಗಿದ್ದು ಅವರ ಮನೆಯಲ್ಲಿ ಶಾರದಮ್ಮ 2023ರಲ್ಲಿ ಮನೆ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ದಂಪತಿ ಕೆಲಸಕ್ಕೆ ಹೋದಾಗ, ಅವರು ಕೀ ಇಡುತ್ತಿದ್ದ ಸ್ಥಳವನ್ನು ಗಮನಿಸಿ, 583 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು. ಈ ಬಗ್ಗೆ ಮಾಲೀಕರು ಪ್ರಶ್ನಿಸಿದಾಗ, ಆಕೆ ಹಾರಿಕೆ ಉತ್ತರ ನೀಡಿದ್ದಳು. ಅಲ್ಲದೆ, ಕೆಲಸದಿಂದ ತೆಗೆದು ಹಾಕಿದ್ದರು. ಕೊನೆಗೆ ಕೆಂಗೇರಿ ಪೊಲೀಸ್ ಠಾಣೆಗೆ ಶಶಿಕಾಂತ್ ದೂರು ನೀಡಿದರು.
ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ಶಾರದಮ್ಮ ವಿಚಾರಣೆ ನಡೆಸಿದಾಗಲೂ ಆಕೆ ಬಾಯಿ ಬಿಟ್ಟಿರಲಿಲ್ಲ. ಆದರೆ ಘಟನಾ ಸ್ಥಳದ ಸಿಸಿ ಕ್ಯಾಮೆರಾ ಹಾಗೂ ಸ್ಥಳೀಯರ ಮಾಹಿತಿ ಪ್ರಕಾರ ಶಾರದಮ್ಮಳೇ ಕಳ್ಳತನ ಮಾಡಿದ್ದಾಳೆ ಎಂಬುದು ಪತ್ತೆಯಾಗಿತ್ತು. ಆದರೆ ಆಕೆ ಮಾತ್ರ ತಾನೂ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಳು. ಹೀಗಾಗಿ ಆಕೆಗೆ ಬ್ರೈನ್ ಮ್ಯಾಪಿಂಗ್ ಮಾಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, 2024 ಫೆಬ್ರವರಿಯಲ್ಲಿ ನ್ಯಾಯಾಲಯದಿಂದ ಅನುಮತಿ ಪಡೆದುಕೊಳ್ಳಲಾಯಿತು. ಬಳಿಕ ಆಕೆಗೆ ತಾನೂ ತಪ್ಪು ಮಾಡಿಲ್ಲವೆಂದಾದರೆ ತಾವೂ ನೀಡುವ ಪರೀಕ್ಷೆಗೆ ಒಳಪಡಬೇಕು ಎಂದಾಗ, ಆಕೆ ಕೂಡ ಒಪ್ಪಿಗೆ ನೀಡಿದ್ದು, ಫೆಬ್ರವರಿಯಲ್ಲಿ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ಎಸ್‌ಎಲ್) ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಶಾರದಮ್ಮ ಸತ್ಯ ಬಾಯ್ಬಿಟ್ಟಿದ್ದಾಳೆ. ಈ ಆಧಾರದ ಮೇಲೆ ಆಕೆಯನ್ನು ಬಂಧಿಸಲಾಗಿದೆ. ಬಳಿಕ ಆಕೆಯ ಮನೆ ಹಾಗೂ ಇತರೆಡೆ ಇಟ್ಟಿದ್ದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.