ಉಡುಪಿ: ವಕೀಲರ ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಗೆ ನಗರದ ಪ್ರಧಾನ ಹಿರಿಯ ಸಿ.ಜೆ. ಮತ್ತು ಸಿ.ಜೆ.ಎಂ. ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.
ಕಳೆದ ಫೆ. 23ರಂದು ಫಿಲಿಪ್ ಪಿ. ಥೋಮಸ್ ಎಂಬಾತ ಅಪರಾಹ್ನ 2 ಗಂಟೆಗೆ ಯುಬಿಎಂಸಿ ಜುಬಿಲಿ ಚರ್ಚ್ ಹತ್ತಿರ ಇರುವ ವಕೀಲ ನೊವೆಲ್ ಪ್ರಶಾಂತ್ ಕರ್ಕಡ ಅವರ ಮನೆಗೆ ನುಗ್ಗಿ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಕಳವು ಮಾಡಿದ್ದ. ನಗರ ಠಾಣೆ ಉಪನಿರೀಕ್ಷಕರು ಪ್ರಕರಣ ದಾಖಲಿಸಿ, ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಹಿರಿಯ ಸಿ.ಜೆ. ಮತ್ತು ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶೆ ಶಕುಂತಲಾ ಎಸ್. ಅವರು ಆರೋಪಿ ಫಿಲಿಪ್ ಪಿ. ಥೋಮಸ್‌ನಿಗೆ 8 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ. ಕೆ. ವಾದ ಮಂಡಿಸಿದ್ದರು.