ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಕಳವು ಮಾಡುತ್ತಿದ್ದ ಆರೋಪಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾರಾಯಿಪಾಳ್ಯ ನಿವಾಸಿ ಮೊಹಮ್ಮದ್ ಖಾನ್(47) ಬಂಧಿತ. ಆರೋಪಿಯಿಂದ 40 ಲಕ್ಷ ರೂ. ಮೌಲ್ಯದ 556 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ. 200 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಜುಲೈ 20ರಂದು ಹೆಣ್ಣೂರು ಸಮೀಪದ ಚಳ್ಳಕೆರೆಯಲ್ಲಿ ಮನೆಯೊಂದರ ಬೀಗ ಮುರಿದು ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ವೇಳೆ ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಡಿ.8ರಂದು ಎಚ್‌ಬಿಆರ್ ಲೇಔಟ್‌ನ 4ನೇ ಬ್ಲಾಕ್ ಬಳಿ ಮೊಹಮ್ಮದ್ ಖಾನ್‌ನನ್ನು ವಶಕ್ಕೆ ಪಡೆದು ಆತನ ಬ್ಯಾಗ್ ಪರಿಶೀಲಿಸಿದಾಗ ಕಟ್ಟಿಂಗ್ ಪ್ಲೇಯರ್ ಪತ್ತೆಯಾಗಿದೆ. ಬಳಿಕ ಆತನನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ತಾನೇ ಮನೆಗಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಕದ್ದ ಚಿನ್ನಾಭರಣಗಳು ಹಾಗೂ ಬೆಳ್ಳಿ ವಸ್ತುಗಳನ್ನು ಕುಣಿ ಗಲ್‌ನ ಸ್ನೇಹಿತನಿಗೆ ನೀಡಿರುವುದಾಗಿ ಹೇಳಿದ್ದಾನೆ.
20 ವರ್ಷದಿಂದ ಕಳ್ಳತನ, 11 ಕೇಸ್ ದಾಖಲು:
ಆರೋಪಿ ಮೊಹಮ್ಮದ್ ಖಾನ್ ವೃತ್ತಿಪರ ಕಳ್ಳ ನಾಗಿದ್ದಾನೆ. ಸುಮಾರು 2 ದಶಕಗಳಿಂದ ಅಪ ರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಆರೋಪಿ ಜಾಮೀನು ಪಡೆದು ಹೊರ ಬಂದ ಬಳಿಕವೂ ತನ್ನ ಕಳವು ಕೃತ್ಯ ಮುಂದುವರಿಸಿದ್ದ. ಈತನ ಬಂಧನದಿಂದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 11 ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.