ಬೆಂಗಳೂರು: ಒಂದೂವರೆ ವರ್ಷಗಳ ಹಿಂದೆ ಅತ್ತೆ ಮಗಳನ್ನು ಪ್ರೀತಿಸಿ ಆಕೆಯೊಂದಿಗೆ ಓಡಿ ಹೋದ ಅಳಿಯನೇ ಅತ್ತೆ ಮನೆಗೆ ಕನ್ನ ಹಾಕಿ ಇದೀಗ ಹಲಸೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹಲಸೂರಿನ ಎಂವಿ ಗಾರ್ಡನ್ ನಿವಾಸಿ ಪ್ರದೀಪ್ ಕುಮಾರ್(23) ಬಂಧಿತ. ಆರೋಪಿಯಿಂದ 2.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ರೆಜಿನಾ ಎಂಬುವರ ಚಿಕ್ಕ ಮಗಳನ್ನು ಪ್ರದೀಪ್ ಒಂದೂವರೆ ವರ್ಷಗಳ ಹಿಂದೆ ಪ್ರೀತಿಸಿ ಆಕೆಯೊಂದಿಗೆ ಓಡಿ ಹೋಗಿದ್ದ. ಇತ್ತೀಚೆಗೆ ರೆಜಿನಾ ಕನ್ಯಾಕುಮಾರಿಗೆ ಹೋಗಿದ್ದಾಗ ಅಳಿಯ ಪ್ರದೀಪ್ ಇವರ ಮನೆ ಬಳಿ ಬಂದು ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ ಮಾಡಿಕೊಂಡು ಹೋಗಿದ್ದ. ನೆರೆಮನೆ ನಿವಾಸಿಗಳು ಗಮನಿಸಿ ಆತನನ್ನು ಈ ಬಗ್ಗೆ ಕೇಳಿದಾಗ ನಾನು ಅವರ ಸಂಬಂಧಿಕನಾಗಿದ್ದು, ಹೀಗಾಗಿ ಇಲ್ಲಿಗೆ ಬಂದಿರುವುದಾಗಿ ಗೊಂದಲದ ಹೇಳಿಕೆ ಕೊಟ್ಟಿದ್ದ. ಅನುಮಾನಗೊಂಡ ರೆಜಿನಾ ನೆರೆಮನೆ ನಿವಾಸಿಯೊಬ್ಬರು ಆತನ ಫೋಟೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಕೂಡಲೇ ರೆಜಿನಾಗೆ ಕರೆ ಮಾಡಿ ವಿಷಯ ತಿಳಿಸಲು ಪ್ರಯತ್ನಿಸಿದ್ದರು. ಆದರೆ ಅವರು ಮೊಬೈಲ್ ಕರೆಗೆ ಸಿಕ್ಕಿರಲಿಲ್ಲ. ನಂತರ ರೆಜಿನಾ ಕನ್ಯಾಕುಮಾರಿಯಿಂದ ಮನೆಗೆ ವಾಪಸ್ಸಾದಾಗ ಮನೆಯ ಬಾಗಿಲು ಒಡೆದಿರುವುದು ಗಮನಿಸಿ ಒಳಗೆ ಹೋಗಿ ನೋಡಿದಾಗ ಆಭರಣ ಕಳ್ಳತನವಾಗಿರುವುದು ಪತ್ತೆಯಾಗಿದೆ.
ಈ ಬಗ್ಗೆ ನೆರೆಹೊರೆಯವರನ್ನು ವಿಚಾರಿಸಿದಾಗ ಮೊಬೈಲ್‌ನಲ್ಲಿ ಅವರು ಸೆರೆಹಿಡಿದಿದ್ದ ಪ್ರದೀಪ್ ಫೋಟೋ ತೋರಿಸಿದ್ದರು. ಆಗ ಇದು ತನ್ನ ಅಳಿಯ ಪ್ರದೀಪ್‌ನ ಕೃತ್ಯ ಎಂಬುದು ರೆಜಿನಾ ಗಮನಕ್ಕೆ ಬಂದಿತ್ತು. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಗೆ ರೆಜಿನಾ ದೂರು ನೀಡಿದ್ದರು.