ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ವಿದ್ಯಾರ್ಥಿಯ ಗುರುತಿನ ಚೀಟಿ ಬಳಸಿಕೊಂಡು ನಿರಂತರವಾಗಿ ಕಳವು ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಸಂಸ್ಥೆಯ ಭದ್ರತಾ ಸಿಬ್ಬಂದಿ ಸಹಾಯದಿಂದ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಜಿಯಾವುಲ್ಲಾ ಮಲ್ಲಿಕ್ (34) ಬಂಧಿತ. ಆರೋಪಿ ಯಶವಂತಪುರದಲ್ಲಿ ವಾಸವಾಗಿದ್ದು, ಕೆಲ ತಿಂಗಳ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆ ಸಮೀಪ ಸಿಕ್ಕ ವಿದ್ಯಾರ್ಥಿಯೊಬ್ಬನ ಗುರುತಿನ ಚೀಟಿ ಬಳಸಿಕೊಂಡು ಕ್ಯಾಂಪಸ್‌ಗೆ ಹೋಗುತ್ತಿದ್ದ. ಬಳಿಕ ಬಾಲಕರ ವಸತಿ ನಿಲಯದಲ್ಲಿ ಸುಮಾರು ಒಂದೂವರೆ ತಿಂಗಳಿಂದ 2 ಕ್ಯಾಮೆರಾಗಳು, ಲ್ಯಾಪ್‌ಟಾಪ್, ಮೊಬೈಲ್, 200 ವಿದೇಶಿ ಕರೆನ್ಸಿ, ನಗದು ಕಳವು ಮಾಡಲಾಗಿತ್ತು. ಈ ಸಂಬಂಧ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಆದರೆ, ಆರೋಪಿ ಪತ್ತೆಯಾಗಿರಲಿಲ್ಲ. ಈ ಮಧ್ಯೆ ಕೆಲ ದಿನಗಳ ಹಿಂದೆ ಭದ್ರತಾ ಸಿಬ್ಬಂದಿ ಅನುಮಾನದ ಮೇರೆಗೆ ಆರೋಪಿಯ ಗುರುತಿನ ಚೀಟಿ ಪಡೆದುಕೊಂಡು ಪರಿಶೀಲಿಸಿದಾಗ ಆರೋಪಿಯ ಕಳ್ಳಾಟ ಬಯಲಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.