ಬೆಂಗಳೂರು: ವೀಸಾ ಪರಿಶೀಲನೆ ಸೋಗಿನಲ್ಲಿ ಸಿವಿಲ್ ಕಂಟ್ರ್ಯಾಕ್ಟರ್‌ವೊಬ್ಬರ ಮನೆಗೆ ನುಗ್ಗಿ ಹಲ್ಲೆಗೈದು ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪೇಯಿಂಗ್ ಗೆಸ್ಟ್ ಮಾಲೀಕ ಸೇರಿ ಮೂವರನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್‌ನ ಸ್ವರೂಪ್ (27), ಆತ್ಮಾನಂದ ಜಂಬಗಿ (27) ಹಾಗೂ ಶಾಲಿಂ ರಾಜ (21) ಬಂಧಿತರು. ಮತ್ತೂಬ್ಬ ಆರೋಪಿ ಆದಿಮೂರ್ತಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಂಧಿತರಿಂದ 2.20 ಲಕ್ಷ ರೂ. ನಗದು, 13 ಲಕ್ಷ ರೂ. ಮೌಲ್ಯದ 222 ಗ್ರಾಂ ತೂಕದ ಚಿನ್ನ, ವಜ್ರದ ಆಭರಣಗಳು, 1.50 ಲಕ್ಷ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಏ.10ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಕುಮಾರಸ್ವಾಮಿ ಲೇಔಟ್‌ನ 1ನೇ ಹಂತದ ಟೀಚರ್ ಕಾಲೋನಿ ನಿವಾಸಿ ಸಿವಿಲ್ ಕಾಂಟ್ರ್ಯಾಕ್ಟರ್ ಮುರಳೀಧರ್ ಎಂಬುವರ ಮನೆಗೆ ವೀಸಾ ಪರಿಶೀಲನೆ ನೆಪದಲ್ಲಿ ಹೋಗಿದ್ದರು. ಈ ವೇಳೆ ಆಧಾರ್ ಕಾರ್ಡ್ ತರಲು ಒಳಗೆ ಹೋದ ಮುರಳೀಧರ್‌ರನ್ನು ತಳ್ಳಿ ನೆಲಕ್ಕೆ ಬೀಳಿಸಿ ಕೈ-ಕಾಲು ಕಟ್ಟಿ ಬೀರು ಕೀ ಪಡೆದು ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಬಂಧಿತ ಆರೋಪಿಗಳ ಪೈಕಿ ಸ್ವರೂಪ್ ಬಿಇ ಪದವೀಧರನಾಗಿದ್ದು, ಕುಮಾರಸ್ವಾಮಿ ಲೇಔಟ್ ನಲ್ಲಿ ಪೇಯಿಂಗ್ ಗೆಸ್ಟ್(ಪಿಜಿ) ನಡೆಸುತ್ತಿದ್ದಾನೆ. ಆರೋಪಿ ಆತ್ಮಾನಂದ ಜಂಬಗಿ ಬಿಇ, ಎಲ್‌ಎಲ್‌ಬಿ ಪದವೀಧರನಾಗಿದ್ದು, ಇದೇ ಪಿಜಿಯಲ್ಲಿ ನೆಲೆಸಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಮತ್ತೂಬ್ಬ ಆರೋಪಿ ಶಾಲಿಂ ರಾಜ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದು, ಅದೇ ಪಿಜಿಯಲ್ಲಿ ವಾಸವಾಗಿದ್ದಾನೆ ಎಂದು ಪೊಲೀಸರು ಹೇಳಿದರು.
Related Articles
ಪರಿಚಯಸ್ಥರೇ ಟಾರ್ಗೆಟ್: ಪಿಜಿ ಮಾಲೀಕ ಸ್ವರೂಪ್ ಸಾಲ ಮಾಡಿಕೊಂಡಿದ್ದ. ಈತನ ಪಿಜಿಯಲ್ಲಿ ತಂಗಿದ್ದ ಆತ್ಮಾನಂದ ಜಂಬಗಿ ಮತ್ತು ಶಾಲಿಂ ರಾಜ ಆರ್ಥಿಕ ತೊಂದರೆ ಅನುಭವಿಸುತ್ತಿದ್ದರು. ಹೀಗಾಗಿ ಮೂವರು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಪರಿಚಯಸ್ಥರನ್ನು ಟಾರ್ಗೆಟ್ ಮಾಡಿದ್ದರು. ಆರೋಪಿ ಸ್ವರೂಪ್, ತನಗೆ ಪರಿಚಯವಿರುವ ಮುರಳೀಧರ್‌ರನ್ನು ಸುಲಿಗೆ ಮಾಡಲು ಯೋಜನೆ ರೂಪಿಸಿದ್ದ. ಅದರಂತೆ ಏ.10ರಂದು ಆರೋಪಿಗಳು ವೀಸಾ ಪರಿಶೀಲನೆ ಸೋಗಿನಲ್ಲಿ ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇದೇ ರೀತಿ ಮತ್ತೂಂದು ಪ್ರಕರಣದಲ್ಲಿ ವ್ಯವಹಾರ ವಿಷಯ ಮಾತನಾಡಬೇಕಿದೆ ಎಂದು ಪರಿಚಯಸ್ಥನನ್ನು ಕರೆಸಿಕೊಂಡು ದರೋಡೆ ಮಾಡಿದ್ದರು. ಬಳಿಕ ವೀಸಾ ಪರಿಶೀಲನೆ ಪ್ರಕರಣ ತನಿಖೆ ವೇಳೆ ಸಾಕ್ಷ್ಯ ಸಂಗ್ರಹಿಸಿದ ಆರೋಪಿಗಳ ಸುಳಿವು ಸಿಕ್ಕಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ದ್ವಾರಿಕಾ ನಾಯಕ್, ಠಾಣಾಧಿಕಾರಿ ಬಿ. ಎಂ.ಕೋಟ್ರೇಶಿ, ಪಿಎಸ್‌ಐ ಬಿರಾಣಿ, ಸತ್ಯಮೂರ್ತಿ, ಶ್ರೀಕಂಠಯ್ಯ, ನಾಗರಾಜ್, ಎಎಸ್‌ಐ ರವಿಕುಮಾರ್, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಲಕ್ವಾ ಹೊಡೆಯುವ ಇಂಜೆಕ್ಷನ್ ತೋರಿಸಿ ಬೆದರಿಕೆ!: ಮೊದಲ ಪ್ರಯತ್ನದಲ್ಲಿ ಯಶಸ್ಸು ಕಂಡ ಆರೋಪಿಗಳು ಮತ್ತೂಂದು ಪ್ರಕರಣದಲ್ಲಿ ಪರಿಚಿತರನ್ನೇ ಸುಲಿಗೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಪ್ರಮುಖ ಆರೋಪಿ ಸ್ವರೂಪ್‌ಗೆ ಚೆನ್ನಾಗಿ ಗೊತ್ತಿದ್ದ ಕುಮಾರಸ್ವಾಮಿ ಲೇಔಟ್‌ನ ಪಿಜಿ ಮಾಲೀಕ ಅನಿಲ್ ಶೆಟ್ಟಿಯನ್ನು ಸುಲಿಗೆ ಮಾಡಲು ಟಾರ್ಗೆಟ್ ಮಾಡಿದ್ದರು. ಏ.26ರಂದು ಅಪರಿಚಿತರ ಸೋಗಿನಲ್ಲಿ ಅನಿಲ್ ಶೆಟ್ಟಿಗೆ ಕರೆ ಮಾಡಿ, ನಾವು ಪಿಜಿ ನಡೆಸುತ್ತಿದ್ದು, ನಷ್ಟವಾಗುತ್ತಿದೆ. ನೀವು ಪಿಜಿ ನಡೆಸುವುದಾದರೆ ವ್ಯವಹಾರದ ಬಗ್ಗೆ ಮಾತನಾಡೋಣ ಎಂದು ಸುಬ್ರಮಣ್ಯಪುರ ಗುಬ್ಬಲಾದ ನಿರ್ಮಾಣ ಹಂತದ ಕಟ್ಟಡವೊಂದರ ಬಳಿ ಕರೆಸಿಕೊಂಡಿದ್ದಾರೆ. ಬಳಿಕ ಅನಿಲ್ ಶೆಟ್ಟಿಯನ್ನು ಬಿಗಿಯಾಗಿ ಹಿಡಿದು, ಇಂಜೆಕ್ಷನ್ ತೋರಿಸಿ, ಇದನ್ನು ಚುಚ್ಚಿದರೆ ನಿನಗೆ ಲಕ್ವಾ ಹೊಡೆಯುತ್ತದೆ ಎಂದು ಹೆದರಿಸಿದ್ದಾರೆ. ಬಳಿಕ ಅನಿಲ್ ಶೆಟ್ಟಿ ಮೈಮೇಲಿದ್ದ ಒಡವೆಗಳು ಹಾಗೂ ನಗದು ಕಿತ್ತುಕೊಂಡಿದ್ದಾರೆ. ಬಳಿಕ ಜೇಬಿನಲ್ಲಿದ್ದ ಮನೆಯ ಕೀ ತೆಗೆದುಕೊಂಡು ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮತ್ತೂಬ್ಬ ಅನಿಲ್ ಶೆಟ್ಟಿ ಕಣ್ಣಿಗೆ ಟೇಪ್ ಸುತ್ತಿದ್ದಾನೆ. ಕೆಲ ಹೊತ್ತಿನ ಬಳಿಕ ಅನಿಲ್ ಶೆಟ್ಟಿಗೆ ಕರೆ ಮಾಡಿರುವ ಆರೋಪಿಗಳು ಮನೆಯಲ್ಲಿ ಎಲ್ಲಿ ಚಿನ್ನಾಭರಣ ಇರಿಸಲಾಗಿದೆ ಎಂಬುದನ್ನು ತಿಳಿದುಕೊಂಡು ದೋಚಿದ್ದಾರೆ. ಕೆಲ ಸಮಯದ ಬಳಿಕ ಅನಿಲ್ ಶೆಟ್ಟಿಯನ್ನು ಆ ಕಟ್ಟಡದಲ್ಲೇ ಬಿಟ್ಟು ಪರಾರಿಯಾಗಿದ್ದರು.