Advertisement

ಕೆಲಸಕ್ಕಿದ್ದ ಮನೆಯಲ್ಲೇ 10 ಲಕ್ಷ ಮೌಲ್ಯದ ಚಿನ್ನ ಕದ್ದ

03:00 PM Mar 09, 2023 | Team Udayavani |

ಬೆಂಗಳೂರು: ಕೇರ್‌ ಟೇಕರ್‌ ಕೆಲಸ ಮಾಡಿಕೊಂಡಿದ್ದ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಅರೋಪಿಯನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಉತ್ತರ ಕನ್ನಡ ಜಿಲ್ಲೆ ಕಾರವಾರದ ಮುಂಡಗೋಡ ತಾಲೂಕಿನ ಬಸವರಾಜ ದ್ಯಾಮಣ್ಣ ವಡ್ಡರ ಅಲಿಯಾಸ್‌ ಬಸವರಾಜ(34) ಬಂಧಿತ. ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ 42 ಗ್ರಾಂ ವಜ್ರ ಅಳವಡಿಸಿರುವ 4 ಚಿನ್ನದ ಬಳೆಗಳು, 45 ಗ್ರಾಂ ತೂಕದ ಮುತ್ತಿನ ಡಾಲರ್‌ ಇರುವ ಚಿನ್ನದ ಹಾರ, 20 ತೂಕದ ಚಿನ್ನದ ನಕ್ಲೇಸ್‌, 107 ಗ್ರಾಂ ತೂಕದ ಚಿನ್ನದ ಮತ್ತು ವಜ್ರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹೊಸನೀರಲಗಿ ಪೋಸ್ಟ್‌, ಮನ್ನೂರು ಗ್ರಾಮ ಮೂಲದ ಬಸವರಾಜ, ನಗರದ ಐಡಿಯಲ್‌ ಹೋಮ್‌ ಬಳಿಯ ಅಪಾರ್ಟ್‌ ಮೆಂಟ್‌ನಲ್ಲಿ ಪಿ.ಎನ್‌.ಕುಲಕರ್ಣಿ ಎಂಬುವರ ಮನೆಯಲ್ಲಿ ಕೇರ್‌ ಟೇಕರ್‌ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ದೂರುದಾರರು ವೃದ್ಧರಾಗಿದ್ದರಿಂದ ಅವರ ಗಮನಕ್ಕೆ ಬಾರದೆ ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ವಜ್ರದ ಆಭರಣಗಳನ್ನು ಕಳವು ಮಾಡಿದ್ದಾನೆ. ಅ ನಂತರ ಏಕಾಏಕಿ ಕೆಲಸ ಬಿಟ್ಟಿದ್ದ. ಕೆಲ ದಿನಗಳ ಬಳಿಕ ಬೀರುವಿನಲ್ಲಿರುವ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅನುಮಾನಗೊಂಡು ಠಾಣೆಯಲ್ಲಿ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಕೃತ್ಯ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next