ಬೆಂಗಳೂರು: ಪತ್ನಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ವಜ್ರ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಫುಡ್ ಡೆಲಿವರಿ ಬಾಯ್ ಸೇರಿ ಮೂವರು ಸುಬ್ರಹ್ಮಣ್ಯನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸುಬ್ರಹ್ಮಣ್ಯನಗರ ನಿವಾಸಿ ಸನ್ಯಾಸಿಮಠದ ನಂದೀಶ್ (34), ಆತನ ಸಹಚರರಾದ ವಿಜಯಪುರ ಜಿಲ್ಲೆ ಹಗರಬೊಮ್ಮನಹಳ್ಳಿ ನಿವಾಸಿ ಉಲುವತ್ತಿ ಗ್ರಾಮದ ಎಚ್.ಆರ್. ನಂದೀಶ್ (30), ಪ್ರತಾಪ್ ಕುಮಾರ್ (35) ಎಂಬುವರನ್ನು ಬಂಧಿಸಲಾಗಿದೆ.
ಮನೆಯವರು ಮಂತ್ರಾಲಯಕ್ಕೆ ತೆರಳಿದ್ದಾಗ ಕೃತ್ಯ ಎಸಗಿದ್ದಾರೆ. ಆರೋಪಿಗಳಿಂದ 1.09 ಕೋಟಿ ರೂ. ಮೌಲ್ಯದ 1 ಕೆ.ಜಿ. 802 ಗ್ರಾಂ ತೂಕದ ಚಿನ್ನಾಭರಣಗಳು, ವಜ್ರದ ಆಭರಣ, ಬೆಳ್ಳಿ ವಸ್ತುಗಳು ಹಾಗೂ 8 ವಾಚ್‌ಗಳು ಹಾಗೂ 18 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಹನುಮಂತೇಗೌಡ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಸೆ.21ರಂದು ಮಾರುತಿ ಬಡಾವಣೆ 3ನೇ ಮುಖ್ಯರಸ್ತೆಯಲ್ಲಿರುವ ದೂರುದಾರರ ಮನೆಯಲ್ಲಿ ಚಿನ್ನಾಭರಣ, ನಗದು ದೋಚಿದ್ದರು ಎಂದು ನಗರ ಪೊಲೀಸ್ ಆಯಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರೋಪಿಗಳ ಪೈಕಿ ಸನ್ಯಾಸಿಮಠದ ನಂದೀಶ್ ನಗರದಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈತನ ಪತ್ನಿ ದೂರುದಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇತರೆ ಮೂವರು ಆರೋಪಿಗಳು ಹಗರಿಬೊಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಕೆಲ ದಿನಗಳ ಹಿಂದೆ ನಂದೀಶ್ ಪತ್ನಿ ಬಳಿ ದೂರುದಾರರ ಪತ್ನಿ ಸೆ.21ರ ರಾತ್ರಿ 10 ಗಂಟೆಗೆ ಮಂತ್ರಾಲಯಕ್ಕೆ ಹೋಗುವುದಾಗಿ ಹೇಳಿದ್ದರು. ಅದನ್ನು ಕೇಳಿಸಿಕೊಂಡ ಆರೋಪಿ, ಹಗರಬೊಮ್ಮನಹಳ್ಳಿ ಯಲ್ಲಿರುವ ತನ್ನ ಮೂವರು ಸ್ನೇಹಿತರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾನೆ. ಅದೇ ದಿನ ತಡರಾತ್ರಿ 12 ಗಂಟೆ ಸುಮಾರಿಗೆ ದೂರುದಾರರ ಮನೆಯ 1ನೇ ಮಹಡಿಯ ಕಿಟಕಿಯ ಕಬ್ಬಿಣದ ಗ್ರಿಲ್ ಗಳನ್ನು ಮೀಟಿ ಮನೆಯೊಳಗೆ ನುಗ್ಗಿ ಕಬೋರ್ಡ್ ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ, ಬಳಿಕ ನಾಲ್ವರು ಹಂಚಿಕೊಂಡಿದ್ದರು ಎಂದು ಅವರು ತಿಳಿಸಿದರು.
ಕೃತ್ಯ ಬಳಿಕ ಧರ್ಮಸ್ಥಳಕ್ಕೆ ಹೋಗಿದ್ದ ಆರೋಪಿ: ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ದಾಗ ಆರೋಪಿ ನಂದೀಶ್ ಮತ್ತು ಆತನ ಸಹಚರರ ಕೃತ್ಯ ಬಯಲಾಗಿತ್ತು. ಆಗ ಆರೋಪಿ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಹೋಗಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ಹೀಗಾಗಿ ಸೆ.23ರಂದು ಆರೋಪಿ ಕುಟುಂಬ ಸಮೇತ ಧರ್ಮಸ್ಥಳದಿಂದ ಬೆಂಗಳೂರಿಗೆ ಬರುವಾಗ ಮಾರ್ಗ ಮಧ್ಯೆಯೇ ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.