Advertisement

ಮುಳ್ಳಿಕಟ್ಟೆ ಸೊಸೈಟಿಯಲ್ಲಿ ಕಳ್ಳತನ ಯತ್ನ ವಿಫಲ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

11:18 PM Jun 22, 2024 | Team Udayavani |

ಕುಂದಾಪುರ: ಭದ್ರತಾ ಸಂಸ್ಥೆಯ ಸಕಾಲಿಕ ಕಾರ್ಯಾ ಚರಣೆಯಿಂದ ಮತ್ತೊಂದು ಕಳ್ಳತನ ಪ್ರಕರಣ ತಪ್ಪಿದೆ.

Advertisement

ಮುಳ್ಳಿಕಟ್ಟೆಯಲ್ಲಿರುವ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಹೊಸಾಡು ಶಾಖೆಗೆ ಶುಕ್ರವಾರ ಮಧ್ಯ ರಾತ್ರಿ 1.45ರ ಸುಮಾರಿಗೆ ಕಳ್ಳನೋರ್ವ ಕಿಟಕಿಯ ಗ್ರಿಲ್‌ ಮುರಿದು ನುಗ್ಗಿದ್ದ. ಈ ದೃಶ್ಯ ಅಲ್ಲಿನ ಸೈನ್‌ ಇನ್‌ ಸೆಕ್ಯುರಿಟೀಸ್‌ ಸಂಸ್ಥೆಯ ಲೈವ್‌ ಮಾನಿಟರಿಂಗ್‌ ಸಿಸಿ ಕೆಮರಾದಲ್ಲಿ ಸೆರೆಯಾಯಿತು. ಇದನ್ನು ಗಮನಿಸಿದ್ದ ಸೈನ್‌ ಇನ್‌ ತಂಡ ತತ್‌ಕ್ಷಣವೇ ಆ ಪ್ರದೇಶಕ್ಕೆ ಸಂಬಂಧಪಟ್ಟ ಗಂಗೊಳ್ಳಿ ಠಾಣೆ ಎಸ್‌ಐ ಬಸವರಾಜು ಅವರಿಗೆ ಕರೆ ಮಾಡಿ ಮಾಹಿತಿ ನೀಡಿತು.

ಗಂಗೊಳ್ಳಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಕಳ್ಳ ಸೊಸೈಟಿ ಯೊಳಗೆ ಸೆರೆ ಸಿಕ್ಕಿದ್ದಾನೆ.

ಪರಿಸರದಲ್ಲೇ ರಾತ್ರಿ ರೌಂಡ್ಸ್‌ನಲ್ಲಿದ್ದ ಬಸವರಾಜು, ಸಿಬಂದಿ ಮೋಹನ್‌, ಶರಣಪ್ಪ ಅವರು 2-3 ನಿಮಿಷದಲ್ಲಿ ಸೊಸೈಟಿಯತ್ತ ದೌಡಾಯಿಸಿದರು. ಬಳಿಕ ಸೊಸೈಟಿಯ ಪ್ರಮುಖರನ್ನು ಕರೆಸಿ ಬಾಗಿಲು ತೆರೆದು ಒಳಗಿದ್ದ ಕಳ್ಳನನ್ನು ಸ್ಥಳದಲ್ಲಿಯೇ ಸೆರೆಹಿಡಿದರು. ಬಂಧಿತನನ್ನು ಕೇರಳದ ಕೊಲ್ಲಂ ಜಿಲ್ಲೆಯ ಕರುನಾಗವಳ್ಳಿ ತಾಲೂಕಿನ ಪ್ರಕಾಶ್‌ ಬಾಬು (46) ಅಲಿಯಾಸ್‌ ನಿಯಾಜ್‌ ಎಂದು ಗುರುತಿಸಲಾಗಿದೆ.ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಸೈನ್‌ ಇನ್‌ ಸೆಕ್ಯೂರಿಟಿ ವ್ಯವಸ್ಥೆ?
ದೇವಸ್ಥಾನ, ಬ್ಯಾಂಕ್‌, ಸೊಸೈಟಿ, ಹಣಕಾಸು ಸಂಸ್ಥೆ, ಜುವೆಲ್ಲರಿ, ವಾಣಿಜ್ಯ ಮಳಿಗೆಗಳ ಸಹಿತ ಎಲ್ಲ ವ್ಯಾಪಾರ-ವಹಿವಾಟು ಸಂಸ್ಥೆಗಳಿಗೆ ಕುಂದಾಪುರದ ಅಂಕದಕಟ್ಟೆಯಲ್ಲಿರುವ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯ ಲೈವ್‌ ಮಾನಿಟರಿಂಗ್‌ ಸಿಸಿ ಕೆಮರಾ ಹಾಕಿಸಲಾಗುತ್ತದೆ. ಈ ಸಂಸ್ಥೆಯು ದಿನದ 24 ಗಂಟೆಯೂ ಸಿಸಿ ಕೆಮರಾದಲ್ಲಿ ದಾಖಲಾಗುವ ದೃಶ್ಯಗಳ ಮೇಲೆ ನಿಗಾ ಇಡುತ್ತಿದ್ದು, ಕಳ್ಳತನ, ಅನುಮಾನಾಸ್ಪದ ವ್ಯಕ್ತಿಗಳ ಓಡಾಟ, ಸಂಶಯಾಸ್ಪದ ಚಟುವಟಿಕೆ ಕಂಡು ಬಂದರೆ ತತ್‌ಕ್ಷಣ ಪೊಲೀಸರ ಗಮನಕ್ಕೆ ತರುತ್ತದೆ. ಕುಂದಾಪುರದ ಹಲವೆಡೆ ಈವರೆಗೆ ಸಾಕಷ್ಟು ಸಂಭಾವ್ಯ ಕಳ್ಳತನ, ಅನಾಹುತಗಳನ್ನು ಪೊಲೀಸರ ಸಹಾಯದಿಂದ ತಪ್ಪಿಸುವಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next