ಗಂಗಾವತಿ: ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯ ವೇಷದಲ್ಲಿ ಬಂದು ಗರ್ಭಿಣಿ ಹೆಂಗಸಿನ ಚಿನ್ನಾಭರಣ ದೋಚಿದ್ದ ಮಹಿಳೆಯನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸಿಂಧನೂರು ತಾಲ್ಲೂಕಿನ ಹಂಚಿನಾಳ ಗ್ರಾಮದ ಗಂಗಮ್ಮ ಬಂಧಿತ ಆರೋಪಿ.
ನವಲಿ ಗ್ರಾಮದ ರೇಣುಕಮ್ಮ ಎಂಬ ಗರ್ಭಿಣಿ ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಆಗಮಿಸಿದ್ದರು. ನಿರೀಕ್ಷಣಾ ಕೌಂಟರ್ ಬಳಿ ನಿಂತಿದ್ದ ಸಂದರ್ಭ ಗಂಗಮ್ಮ ಸಹಾಯ ಮಾಡುವ ನೆಪದಲ್ಲಿ ಗರ್ಭಿಣಿ ರೇಣುಕಮ್ಮ ಅವರ ಹತ್ತಿರ ಹೋಗಿ ವೈದ್ಯರು ಸ್ಕ್ಯಾನಿಂಗ್ ಮಾಡಬೇಕಾಗಿದ್ದು ಧರಿಸಿರುವ ಚಿನ್ನಾಭರಣಗಳನ್ನು ನನ್ನ ಕೈಗೆ ಕೊಡು ಎಂದು ನಂಬಿಸಿ ಕೊರಳಲ್ಲಿದ್ದ ಅರುವತ್ತು ಸಾವಿರ ರೂ. ಮೌಲ್ಯದ ಚಿನ್ನದ ಸರವನ್ನು ಪಡೆದು ಪರಾರಿಯಾಗಿದ್ದಾಳೆ.
ರೇಣುಕಮ್ಮ ಅವರಿಗೆ ಮಹಿಳೆ ವಂಚಿಸಿದ್ದಾಳೆಂದು ತಿಳಿದ ಕೂಡಲೇ, ವೈದ್ಯರು ಮತ್ತು ಅಲ್ಲಿಯ ಸಿಬ್ಬಂದಿ ತಿಳಿಸಿದ್ದಾರೆ. ತಕ್ಷಣ ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.
Related Articles
ನಗರ ಠಾಣಾ ಪಿಐ ಟಿ. ವೆಂಕಟಸ್ವಾಮಿ ಹಾಗೂ ಪೊಲೀಸ್ ತಂಡ ಸರಕಾರಿ ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದ, ಗಂಗಮ್ಮ ಅವರ ಫೋಟೋವನ್ನು ಗಮನಿಸಿ ಅದನ್ನು ನಗರದ ಎಲ್ಲಾ ಚಿನ್ನದಂಗಡಿಗೆ ರವಾನೆ ಮಾಡಿದ್ದಾರೆ. ತಕ್ಷಣ ನಗರದ ಗಣೇಶ ಸರ್ಕಲ್ ಬಂಗಾರದ ಅಂಗಡಿಯೊಂದರಲ್ಲಿ ಚಿನ್ನವನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಗಂಗಮ್ಮ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ.
ಕೇವಲ 4ತಾಸಿನಲ್ಲಿ ಚಿನ್ನಾಭರಣ ದೋಚಿದ ಕಳ್ಳಿಯನ್ನು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಬಂಧಿಸಿರುವುದಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಗಂಗಮ್ಮ ಈ ಹಿಂದೆ ಬೆಂಗಳೂರಿನ ಗಂಗಾಧರೇಶ್ವರ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಳು. ಅಲ್ಲಿಯ ಆಸ್ಪತ್ರೆ ಸಿಬ್ಬಂದಿಗಳು ಗಂಗಮ್ಮಳನ್ನು ಇತ್ತೀಚೆಗೆ ಕೆಲಸದಿಂದ ತೆಗೆದು ಹಾಕಿದ್ದರು.
ಇದನ್ನೂ ಓದಿ: ಭ್ರಷ್ಟಾಚಾರದ ವಿಚಾರವಾಗಿ ಬಿಜೆಪಿ ಸುಮ್ಮನಿರುವುದು ಅಪರಾಧ: ಎಂ. ಬಿ.ಪಾಟೀಲ್
ಎಚ್ಚರಿಕೆ ವಹಿಸಲು ಮನವಿ
ಸರಕಾರಿ ಆಸ್ಪತ್ರೆಯಲ್ಲಿ ಎಲ್ಲ ಕೋಣೆಗಳಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಆಸ್ಪತ್ರೆಗೆ ಬರುವ ಗರ್ಭಿಣಿಯರು, ರೋಗಿಗಳು ಇಂತಹ ಕಳ್ಳರಿಂದ ಎಚ್ಚರವಹಿಸಬೇಕು. ಯಾವುದೇ ಕಾರಣಕ್ಕೂ ಕುಟುಂಬದವರು ಅಥವಾ ಆಸ್ಪತ್ರೆಯ ಅಧಿಕೃತ ಸಿಬ್ಬಂದಿ ಅಥವಾ ಆಶಾ ಕಾರ್ಯಕರ್ತರಿಗೆ ಮಾತ್ರ ತಮ್ಮ ಅಮೂಲ್ಯವಾದ ವಸ್ತುವನ್ನು ಕೊಡಬೇಕೇ ಹೊರತು ಅನ್ಯರಿಗೆ ಕೊಡಬಾರದು ಎಂದು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಈಶ್ವರ್ ಸವಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ .