ಕಾಸರಗೋಡು: ರಂಗ ಚೇತನ ಕಾಸರಗೋಡು ನೇತೃತ್ವದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮತ್ತು ಬಿ.ಪಿ.ಪಿ.ಎ.ಎಲ್.ಪಿ.ಶಾಲೆ ಪೆರ್ಮುದೆ ಇದರ ಸಹಭಾಗಿತ್ವದೊಂದಿಗೆ ಪೆರ್ಮುದೆಯಲ್ಲಿ ಆಯೋಜಿಸಲಾದ ತ್ರಿದಿನ ರಂಗ ತರಬೇತಿ ಶಿಬಿರ ರಂಗೋಲಿ 2019 ಹಲವಾರು ವಿಶೇಷತೆಗಳೊಂದಿಗೆ ಸಂಪನ್ನಗೊಂಡಿತು.
60 ಶಿಬಿರಾರ್ಥಿಗಳು ಮೂರು ದಿನಗಳ ಕಾಲ ರಂಗಾಟ, ರಂಗ ಗೀತೆಗಳ ಗಾಯನ, ರಂಗ ಸಂಗೀತ, ಮೈಮ್ ಶೋ, ಪ್ರಕೃತಿ ವೀಕ್ಷಣೆ, ಪಕ್ಷಿ ವೀಕ್ಷಣೆ, ಗಾಳಿಪಟ ಉತ್ಸವ, ಕ್ಯಾಂಪ್ ಫೈರ್ ಮುಂತಾದ ಹತ್ತಾರು ಮಾಹಿತಿ ಪೂರ್ಣ, ಮನರಂಜನೀಯ ಕಾರ್ಯಕ್ರಮಗಳನ್ನು ಮನದಣಿಯೆ ಆಸ್ವಾದಿಸಿ ತಮ್ಮ ಅನುಭವದ ಬುತ್ತಿಯನ್ನು ತುಂಬಿಕೊಂಡರು. ಅನುಭವೀ ಕಲಾವಿದರು, ರಂಗಕರ್ಮಿಗಳು, ನಿರ್ದೇಶಕರು ಶಿಬಿರಾರ್ಥಿಗಳಿಗೆ ಹೊಸ ಹೊಸ ವಿಷಯಗಳನ್ನು ಸರಳವಾಗಿ, ಸಾಂದರ್ಭಿಕವಾಗಿ ವಿವರಿಸಿದರು.
ಶಿಬಿರದಲ್ಲಿ ಮೂರು ಮಕ್ಕಳ ನಾಟಕಗಳು ಪ್ರದರ್ಶನಗೊಂಡವು. ಕೆಲವೇ ಗಂಟೆಗಳಲ್ಲಿ ಶಿಬಿರಾರ್ಥಿಗಳಿಗೆ ನುರಿತ ರಂಗಕರ್ಮಿಗಳಾದ ಉದಯ ಸಾರಂಗ್ ಅವರು ದೇವರು, ವಸಂತ ಮಾಸ್ಟರ್ ಮೂಡಂಬೈಲು ಜೀವಜಲ, ಹಾಗೂ ಸದಾಶಿವ ಮಾಸ್ಟರ್ ಪೊಯ್ಯೆ ಎಲ್ಲೂ ಹಾರದ ಪಕ್ಷಿಗಳು ನಾಟಕಗಳನ್ನು ಪ್ರದರ್ಶಿಸಲಾಯಿತು. ಉತೃಷ್ಟವಾದ ಕಥಾವಸ್ತುಗಳನ್ನು ಆಯ್ದುಕೊಂಡು ಮಕ್ಕಳ ಕಲಾಸಕ್ತಿ, ಅಭಿನಯ ಚತುರತೆಯನ್ನು ತೆರೆದಿಡುವಲ್ಲಿ ಈ ಶಿಬಿರವು ಸಾರ್ಥಕತೆಯನ್ನು ಪಡೆಯಿತು.
ಗಡಿನಾಡಿನಲ್ಲಿ ಇಷ್ಟೊಂದು ಸಂಪನ್ನವಾದ, ವಸ್ತುನಿಷ್ಠವಾದ ಶಿಬಿರವನ್ನು ಆಯೋಜಿಸುವ ಮೂಲಕ ಮಹತ್ತರವಾದ ಹೆಜ್ಜೆಯನ್ನಿಟ್ಟಿರುವ ರಂಗ ಚೇತನ ಕಾಸರಗೋಡು ರಂಗ ಭೂಮಿಯಲ್ಲಿ ಈ ಮಕ್ಕಳ ಮೂಲಕ ಹೊಸ ಅಧ್ಯಾಯವನ್ನು ಸೃಷ್ಟಿಸಲಿದೆ
ಶಿವಗಿರಿ ಕಲ್ಲಡ್ಕ.
ನಾಟಕದ ಬಗ್ಗೆ ಸಾಮಾನ್ಯ ಜ್ಞಾನವಷ್ಟೇ ನನಗಿತ್ತು. ಆದರೆ ಈ ಶಿಬಿರವು ನಾಟಕ ಎಂದರೆ ಏನು ಎಂಬ ಸ್ಪಷ್ಟ ಮಾಹಿತಿಯನ್ನು ನೀಡಿದೆ. ನೋಡಿ, ಮಾಡಿ ಕಲಿಯುವ ಅವಕಾಶ ನಮಗೆ ದೊರೆತಿದೆ.
ಅನುಪ್ ರಮಣ್ ಶರ್ಮ.
ಮಾಹಿತಿ: ವಿದ್ಯಾಗಣೇಶ್ ಅಣಂಗೂರು