Advertisement

ರಂಗಭೂಮಿ ಸ್ಥಾನ ಗಟ್ಟಿ: ನವಲಕಲ್‌

10:50 AM Mar 28, 2019 | pallavi |
ಕಲಬುರಗಿ: ಹೊಸ ಮಾಧ್ಯಮಗಳ ಭರಾಟೆ ನಡುವೆಯೂ ರಂಗಭೂಮಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ರಂಗಭೂಮಿ ಕೇವಲ ಮನರಂಜನೆ ಪ್ರಕಾರವಲ್ಲ. ಅದು ಸಮಾಜದ ಪರಿವರ್ತನೆಯ ಸಾಂಸ್ಕೃತಿಕ ಮಾಧ್ಯಮವಾಗಿದೆ ಎಂದು ನಾಟಕಕಾರ ಮಹಾಂತೇಶ ನವಲಕಲ್‌ ಹೇಳಿದರು.
ನಗರದ ಕನ್ನಡ ಸಾಹಿತ್ಯ ಸಂಘದ ಸಭಾಂಗಣದಲ್ಲಿ ರಂಗಸಂಗಮ ಕಲಾ ವೇದಿಕೆ, ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನಾದ್ಯಂತ ಹಲವು ಮಾಧ್ಯಮಗಳು ವೈಭವದ ಮೆರಗಿನೊಂದಿಗೆ ಭರಪೂರ ಮನರಂಜನೆ ನೀಡುತ್ತಿವೆ. ಆದರೆ,
ರಂಗಭೂಮಿ ಸಮಾಜ ಮುಖೀಯಾಗಿ, ಸಮಾಜದ ಕನ್ನಡಿಯಾಗಿ ಹೊಸ ಪ್ರಯೋಗಗಳ ಮೂಲಕ ಇನ್ನಷ್ಟು ಪ್ರಖರವಾಗಿ ಬೆಳೆಯುತ್ತಿದೆ ಎಂದರು.
ರಂಗಸಂಗಮದ ಕಾರ್ಯದರ್ಶಿ ಸುಜಾತಾ ಜಂಗಮಶೆಟ್ಟಿ ಮಾತನಾಡಿ, ರಂಗಭೂಮಿ ಕಲಾವಿದನಾದವನಿಗೆ ವೈಯಕ್ತಿಕವಾಗಿ ಪ್ರಯೋಜನಗಳನ್ನು ಒದಗಿಸುತ್ತದೆ. ಸಮಾಜವನ್ನು ಅರಿಯುವುದು ಹಾಗೂ ಸಮಾಜದ ಹಲವು ಮುಖಗಳನ್ನು ಪರಿಚಯಿಸುವುದರಲ್ಲಿ ರಂಗಭೂಮಿಯ ಪಾಲು ದೊಡ್ಡದಿದೆ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದ ನಿರ್ದೇಶಕ ಡಾ| ಎಚ್‌.ಟಿ. ಪೋತೆ, ಜಾಗತೀಕರಣ, ನಾಗರೀಕರಣ, ಉಳ್ಳವರ ದೌರ್ಜನ್ಯ… ಹೀಗೆ ಸಮಾಜದ ಎಲ್ಲ ಮುಖಗಳನ್ನು ಜನರಿಗೆ ಪರಿಚಯಿಸುತ್ತದೆ. ಒಬ್ಬ ರಾಜಕಾರಣಿ ಮಾತನಾಡಿದರೆ, ಉದ್ಯಮಿ ಮಾತನಾಡಿದರೆ ಅದು ನಾಟಕ ಅನ್ನಿಸಬಹುದು. ಆದರೆ, ನಾಟಕ ಮಾಡಿದಾಗ ನೋಡುವವರು ಅಲ್ಲಿ ವಾಸ್ತವ ಕಾಣುತ್ತಾರೆ. ರಂಗಭೂಮಿ ವ್ಯಕ್ತಿತ್ವ ವಿಕಸನ ಮತ್ತು ಸಮಾಜದ ವಿವಿಧ ಆಯಾಮಗಳ ಪರಿಚಯಕ್ಕೆ ಪೂರಕವಾಗಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಡಾ| ಶಿವರಾಮ ಅಸುಂಡಿ, ರಂಗಕರ್ಮಿ ವಿಶ್ವರಾಜ ಪಾಟೀಲ, ಸಾಹಿತಿ ಸಿದ್ಧರಾಮ ಹೊನ್ಕಲ್‌, ರಾಜಕುಮಾರ ಎಸ್‌.ಕೆ., ಮಲ್ಲಿಕಾರ್ಜುನ ದೊಡ್ಡಮನಿ,
ಅಂಬಿಕಾ, ಲಿಂಗಪ್ಪ ಕಟ್ಟಿಮನಿ ಹಾಜರಿದ್ದರು.  
Advertisement

Udayavani is now on Telegram. Click here to join our channel and stay updated with the latest news.

Next