Advertisement

ಸಂಕೀರ್ಣ ಬದುಕಿನ ರಂಗಕೃತಿ

06:39 PM May 04, 2019 | mahesh |

ಅರ್ಧಮರ್ಧ ಮನುಷ್ಯರು ಎಂಬ ಅರ್ಥವನ್ನು ಸ್ಪುರಿಸುವ ಶೀರ್ಷಿಕೆಯನ್ನು ಹೊಂದಿರುವ ಈ ಕನ್ನಡ ರೂಪಾಂತರಿತ ನಾಟಕ, ವಸ್ತು ಹಾಗೂ ಪ್ರಯೋಗ ನಾವೀನ್ಯದಿಂದಾಗಿ ಕಳೆದ ನಾಲ್ಕು ದಶಕಗಳಿಂದ ರಂಗ ಕಲಾವಿದರಿಗೆ ಸವಾಲನ್ನು ಒಡ್ಡುತ್ತಿರುವ ಅಪರೂಪದ ರಂಗಕೃತಿಯಾಗಿದೆ. 1975ರ ದಶಕದಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಯಶಸ್ವೀ ಅನುವಾದ ಪ್ರಯತ್ನದ ಮೂಲಕ ಇದು ಕನ್ನಡಕ್ಕೆ ಬಂದಾಗ, ಇದರ ಓದು ಹಾಗೂ ಪ್ರಥಮ ಪ್ರಯೋಗ ನವ್ಯ ಸಂವೇದನೆಯಲ್ಲಿ ಮಿಂದೇಳುತ್ತಿದ್ದ ಕನ್ನಡ ಸಾಹಿತ್ಯ ವಲಯದಲ್ಲಿ ದಾಖಲೆಯನ್ನೇ ನಿರ್ಮಿಸಿತೆನ್ನಬಹುದು. ಈ ನಾಟಕ ಪತಿ ಹಾಗೂ ಮಕ್ಕಳ ವ್ಯಕ್ತಿತ್ವದ ಅರೆಕೊರೆಗಳ ಬಗ್ಗೆ ಚಿಂತಿತಳಾಗಿರುವ ಸಂಸಾರಸ್ಥೆಯೊಬ್ಬಳ ತುಡಿತ-ತಳಮಳಗಳನ್ನು ಅರ್ಧಮರ್ಧವೆನ್ನಿಸಬಹುದಾದ ಸಂಭಾಷಣೆಗಳ ಮೂಲಕ, ಒಬ್ಬನೇ ವ್ಯಕ್ತಿಯ ನಾಲ್ಕು ಮುಖಗಳಂತೆ ತೋರಿಬರುವ ನಾಲ್ಕು ಪುರುಷ ಪಾತ್ರಗಳ ಮೂಲಕ ಬಿತ್ತರಿಸುವಲ್ಲಿ ಯಶಸ್ವಿಯಾಗಿರುವ ಪಠ್ಯ ಕೃತಿಯಾಗಿಯೂ ತನ್ನ ಅನನ್ಯತೆಯನ್ನು ಸಾಬೀತುಪಡಿಸಿದೆ. ಈ ನಾಲ್ಕು ಪುರುಷ ಪಾತ್ರಗಳನ್ನು ಒಬ್ಬನೇ ವ್ಯಕ್ತಿ ನಿರ್ವಹಿಸಬೇಕೆಂಬ ವಿನೂತನ ಕಲ್ಪನೆ ಮೋಹನ್‌ ರಾಕೇಶ್‌ ಅವರದಾಗಿತ್ತು; ಈ ನಾಲ್ಕೂ ಪಾತ್ರಗಳು ನಾಲ್ಕು ಬಗೆಯ ಶೈಲಿಗಳಲ್ಲಿ ಸಂಭಾಷಣೆಗಳನ್ನು ಪ್ರಸ್ತುತಪಡಿಸಬೇಕೆಂಬ ದೃಷ್ಟಿಯಿಂದ ನಾಲ್ಕು ಬಗೆಯ ಹಿಂದಿ “ಬೋಲಿ’ಗಳನ್ನು ಅವರು ಮೂಲ ಕೃತಿಯಲ್ಲಿ ಬಳಸಿಕೊಂಡಿದ್ದು ತಾನು ಈ ಕನ್ನಡ ರೂಪಾಂತರದಲ್ಲೂ ಭಿನ್ನ ಭಿನ್ನ ವಾಕ್‌ಶೈಲಿಗಳನ್ನು ಬಳಸಿಕೊಂಡಿದ್ದೇನೆಂದು ಹೇಳಿಕೊಂಡಿರುವ ಅನುವಾದಕರು, ಈ “ಚತುರ್ವಿಧ ಕನ್ನಡ ಪ್ರಯೋಗ’ದ ಪರಿಣಾಮ ವಿವಿಧ ಪ್ರಯೋಗಗಳಲ್ಲಿ ಹೇಗಿತ್ತು ಎನ್ನುವುದನ್ನೂ ಪ್ರಸ್ತಾವನಾ ರೂಪದ ಬರಹದಲ್ಲಿ ನಮ್ಮ ಗಮನಕ್ಕೆ ತರುತ್ತಾರೆ. ಈ ನಾಟಕದ ಒಟ್ಟು ಆಶಯವೇನು? ಅದು “ವ್ಯಕ್ತಿ 4′ ಎಂಬ ಪಾತ್ರದ ಮೂಲಕ ಹೀಗೆ ಹೊರಬಿದ್ದಿದೆ- ಇದು ಈ ವ್ಯಕ್ತಿ, ಈ ನಾಟಕ ನಾಯಕಿಗೆ ಹೇಳುವ ಮಾತು: “”ಮುಖ್ಯಮಾತು ಇಷ್ಟೇ… ಮಹೇಂದ್ರನ ಬದಲು ನಿನ್ನ ಜೀವನದೊಳಗೆ ಬೇರೆ ಯಾರೇ ಬಂದಿದ್ದರೂ, ವರ್ಷ ಎರಡು ವರ್ಷ ಆದ ಕೂಡಲೇ ಒಬ್ಬ ಅಯೋಗ್ಯ ಮನುಷ್ಯನ ಜೊತೆ ಮದುವೆ ಮಾಡಿಕೊಂಡೆ ಅಂತ ನಿನಗೆ ಅನಿಸಿಯೇ ಬಿಡತಿತ್ತು… ಅವನ ಜೀವನದೊಳಗೂ ಮತ್ತೂಬ್ಬ ಯಾವನಾದರೂ ಮಹೇಂದ್ರ, ಯಾವನಾದರೂ ಜುನೇಜಾ, ಯಾವನಾದರೂ ಶಿವಜೀತ, ಇಲ್ಲವೆ ಮತ್ತೂಬ್ಬ ಜಗಮೋಹನ ಬಂದಿರತಿದ್ದ… ಏನೇನೋ ಒಮ್ಮೆಲೇ ಆಗಬೇಕು, ಏನೇನೋ ಒಟ್ಟಿಗೇ ಪಡಕೋಬೇಕು, ಏನೇನೋ ಒಟ್ಟಿಗೇ ಸುತ್ತಿಕೊಂಡು ಬದುಕಬೇಕು ಅನ್ನೋದ ನಿನ್ನ ಅರ್ಥ…” ಪೂರ್ಣತೆಗೆ ಹಾತೊರೆಯುವ ಜೀವವೊಂದರ ತಳಮಳಗಳನ್ನು ಹೀಗೆ ಕಾವ್ಯಾತ್ಮಕವಾಗಿ ದಾಖಲಿಸಿರುವ ಈ ನಾಟಕ, ಕನ್ನಡಕ್ಕೆ ಅನುವಾದಗೊಂಡು ನಾಲ್ಕೂವರೆ ದಶಕಗಳ ಬಳಿಕ ನಮ್ಮ ಸಂಕೀರ್ಣ ಬದುಕಿನ ಭಗ್ನ ಚರಿತ್ರೆ ಹಾಗೂ ಉರಿ ಉರಿ ವರ್ತ”ಮಾನ’ವನ್ನು ಪರಿಣಾಮಕಾರಿಯಾಗಿ ಬಿತ್ತರಿಸುತ್ತಿದೆ. ಈ ನಡುವೆ ಹಲವು ಪ್ರಯೋಗಗಳನ್ನು ಕಂಡಿರುವ ಹೆಗ್ಗಳಿಕೆ ಈ ಕನ್ನಡ ಆವೃತ್ತಿಗಿದೆ.

Advertisement

ಆಧೇ ಅಧೂರೇ (ನಾಟಕ)
ಮೂಲ : ಮೋಹನ ರಾಕೇಶ್‌
ಹಿಂದಿಯಿಂದ ಕನ್ನಡಕ್ಕೆ: ಸಿದ್ಧಲಿಂಗ ಪಟ್ಟಣಶೆಟ್ಟಿ
ಪ್ರ.: ಅನನ್ಯ ಪ್ರಕಾಶನ, ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
ಮೊದಲ ಮುದ್ರಣ: 2018 ಬೆಲೆ: ರೂ. 120

ಜಕಾ

Advertisement

Udayavani is now on Telegram. Click here to join our channel and stay updated with the latest news.

Next