Advertisement
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಧು ಪಾಲೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿ ಎದುರೇ ಇರುವ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ಶಾಮಿಯಾನಾ ಹಾಕಿ ಪಕೋಡ ಕರಿಯಲು ಹಸಿಮೆಣಸಿಕಾಯಿ, ಕಡಲೆಹಿಟ್ಟು, ಬಾಣಲಿ, ಸ್ಟೌವ್ ಸಿದ್ಧಪಡಿಸಿಕೊಳ್ಳಲಾಗಿತ್ತು. ಕಾಂಗ್ರೆಸ್ ಕಚೇರಿ ಮುಂದೆ ನಿಂತು ಇದನ್ನು ಗಮನಿಸಿದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಹಸನ್ ತಾಹೀರ್, ಶೌಕತ್, ರಫಿ, ರೆಹಮಾನ್ ಅವರು ಏಕಾಏಕಿ ಮಧು ಪಾಲೇಗೌಡ ವಿರುದ್ಧ ತಿರುಗಿ ಬಿದ್ದರು.
ಜಟಾಪಟಿ ನಡೆಯಿತು. ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಯಿತು. ಕೆಲವರು ಪಕೋಡಕ್ಕೆ ತಂದಿದ್ದ ಹಸಿಮೆಣಸಿನಕಾಯಿಯನ್ನು ತೂರಾಡಿದರು. ಸದ್ಯ ಬಾಣಲಿಯಲ್ಲಿ ಎಣ್ಣೆ ಕಾದಿರಲಿಲ್ಲ. ಹಾಗಾಗಿ ದೊಡ್ಡ ಅನಾಹುತ ತಪ್ಪಿತು. ಯುವ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸುತ್ತಿರುವುದನ್ನು ನೋಡಿದ ಕೆಲವರು ಉಭಯ ಗುಂಪಿನವರನ್ನು ಸಮಾಧಾನಪಡಿಸಲು ಯತ್ನಿಸಿದರು. ನಗರ ಠಾಣೆ ಇನ್ಸ್‌ಪೆಕ್ಟರ್ ಒಡೆಯರ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಹಸನ್ ತಾಹೀರ್, ಎಲ್ಲ ಕಾರ್ಯಕ್ರಮಗಳಲ್ಲೂ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಏನೇ ಪ್ರತಿಭಟನೆ ಮಾಡಿದರೂ ಎಲ್ಲರೂ ಸೇರಿ ಮಾಡೋಣ ಎಂದು ನಾಲ್ಕೈದು ಬಾರಿ ಹೇಳಿದ್ದರೂ ಮಧು ಪಾಲೇಗೌಡ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅಮಿತ್ ಶಾ ಮತ್ತು ಮೋದಿ ವಿರುದ್ಧ ಹಮ್ಮಿಕೊಂಡಿರುವ ಪಕೋಡಾ ಪ್ರತಿಭಟನೆ ನಮಗೆ ಗೊತ್ತೇ ಇಲ್ಲ. ಈ ವಿಚಾರವನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
Related Articles
ಉಭಯ ಬಣದವರು ಸೇರಿಕೊಂಡು ಪ್ರತಿಭಟನೆ ನಡೆಸಿದ್ದು ಅಚ್ಚರಿ ಮೂಡಿಸಿತು.
Advertisement