Advertisement

ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿದ ಯುವತಿ

12:11 PM Dec 20, 2017 | Team Udayavani |

ಬೆಂಗಳೂರು: ಪ್ರಿಯಕರನ ಜತೆ ವಿವಾಹ ಮಾಡಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಲು ಬಂದಿದ್ದ ಯುವತಿ, ಆಯುಕ್ತರ ಕಚೇರಿ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

Advertisement

ತುಮಕೂರು ಮೂಲದ ರೂಪಾ (24) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ನ್ಯಾಯ ಕೊಡಿಸುವಂತೆ ಠಾಣೆಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸಂಜೆ 6 ಗಂಟೆ ಸುಮಾರಿಗೆ ಆಯುಕ್ತರ ಕಚೇರಿಗೆ ಆಗಮಿಸಿದ ರೂಪಾಗೆ ಆಯುಕ್ತರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿಯೂ ನನಗೆ ನ್ಯಾಯ ಸಿಗುವುದಿಲ್ಲ ಎಂದು ಆಕ್ರೋಶಗೊಂಡು ತನ್ನೊಂದಿಗೆ ತಂದಿದ್ದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ. ತುಮಕೂರು ಮೂಲದ ರೂಪಾ, ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಮತ್ತಿಕೆರೆಯ ಎಚ್‌ಎಂಟಿ ಲೇಔಟ್‌ನಲ್ಲಿ ವಾಸವಿದ್ದಾರೆ.

ಎಂಎಸ್ಸಿ ಮುಗಿಸಿರುವ ಯುವತಿ, ವೈಟ್‌ಫೀಲ್ಡ್‌ನಲ್ಲಿರುವ ಐಟಿ ಪಾರ್ಕ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಈ ಮಧ್ಯೆ ಬೆಳಗಾವಿ ಮೂಲದ ಲಕ್ಷ್ಮಣ್‌ ದೂಬ್ಲೆ ಎಂಬಾತನ ಪರಿಚಯವಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಆದರೆ, ಕಳೆದ 6 ತಿಂಗಳಿಂದ ಆಕೆಯ ಸಂಪರ್ಕ ಕಡಿತಗೊಳಿಸಿಕೊಂಡಿದ್ದ ಲಕ್ಷ್ಮಣ್‌ ವಿವಾಹವಾಗಲು ನಿರಾಕರಿಸಿದ್ದ. ಬೇರೊಂದು ಯುವತಿ ಜತೆ ವಿವಾಹ ನಿಶ್ಚಯ ಮಾಡಿಕೊಂಡಿದ್ದ.

ರಾಜಿ ಪಂಚಾಯಿತಿ: ಯುವತಿ ಪರವಾಗಿ ಕೆಲ ಸಂಘಟನೆ ಮುಖಂಡರು ರಾಜಿ ಪಂಚಾಯಿತಿ ಮಾಡಲು ಯತ್ನಿಸಿದ್ದಾರೆ. ಆಗಲೂ ಲಕ್ಷ್ಮಣ್‌ ಮದುವೆಗೆ ಒಪ್ಪಿಲ್ಲ. ಇದರಿಂದ ಬೇಸತ್ತ ಯುವತಿ, ಎಸಿಪಿ ಮತ್ತು ಡಿಸಿಪಿಗೆ ದೂರು ನೀಡಿದ್ದರು. ಈ ಸಂಬಂಧ ಮತ್ತೂಮ್ಮೆ ಲಕ್ಷ್ಮಣ್‌ ಮತ್ತು ರೂಪಾರನ್ನು ಕರೆಸಿ ವಿಚಾರಣೆ ನಡೆಸಿದಾಗಲೂ ಆತ ಮದುವೆಗೆ ನಿರಾಕರಿಸಿದ್ದ.

Advertisement

ಆಪ್ತ ಸಮಾಲೋಚಕರ ಮೂಲಕ ಲಕ್ಷ್ಮಣ್‌ಗೆ ಕೌನ್ಸಿಲಿಂಗ್‌ ಮಾಡಿಸಿದರೂ ಆತ ರೂಪಾಳನ್ನು ವಿವಾಹವಾಗಲು ಒಲ್ಲಿರಲಿಲ್ಲ. ಅಲ್ಲದೆ, ಆಕೆ ನನ್ನ ವಿರುದ್ಧ ದೌರ್ಜನ್ಯದ ಆರೋಪದಲ್ಲಿ ದೂರು ನೀಡಿದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ, ನಾನು ಜೈಲಿಗೆ ಹೋಗಲು ಸಿದ್ಧನಾಗಿದ್ದೇನೆ. ಮದುವೆ ಮಾತ್ರ ಆಗುವುದಿಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ಹೇಳಿಕೆ ದಾಖಲಿಸಿದ್ದ ಎಂದು ಗಂಗಮ್ಮನಗುಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾನೇ ತಾಳಿ ಕಟ್ಟಿಕೊಂಡಳು!: ಈ ಮಧ್ಯೆ ಒಂಟಿಯಾಗಿ ವಿದ್ಯಾರಣ್ಯಪುರದ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಹೋಗಿದ್ದ ರೂಪಾ, ತನಗೆ ತಾನೇ ತಾಳಿ ಕಟ್ಟಿಕೊಂಡು, “ಲಕ್ಷ್ಮಣ್‌ ಜತೆ ವಿವಾಹವಾಗಿದೆ. ಆತ ನನ್ನ ಜತೆ ಸಂಸಾರ ಮಾಡುತ್ತಿಲ್ಲ’ ಎಂದು ಗಂಗಮ್ಮನಗುಡಿ ಠಾಣೆಗೆ ದೂರು ನೀಡಿದ್ದಳು. ಆದರೆ, “ನಾನು ಪ್ರೀತಿಸಿದ್ದು ನಿಜ. ಆದರೆ, ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿಲ್ಲ. ಮದುವೆಯಂತೂ ಮೊದಲೇ ಆಗಿಲ್ಲ ಎಂದು ಲಕ್ಷ್ಮಣ್‌ ತಿಳಿಸಿದ್ದಾನೆ.

ಅಲ್ಲದೆ, ಆಕೆ ಸಣ್ಣ-ಸಣ್ಣ ವಿಷಯಕ್ಕೂ ಆತ್ಮಹತ್ಯೆಗೆ ಯತ್ನಿಸುತ್ತಾಳೆ. ತಡವಾಗಿ ಬಂದಿದ್ದಕ್ಕೆ, ಫೋನ್‌ ರಿಸೀವ್‌ ಮಾಡದಕ್ಕೆ ಬೇಸರಗೊಂಡು ಈ ಹಿಂದೆಯೂ ಎರಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ರೀತಿಯ ಮಾನಸಿಕ ಖನ್ನತೆಗೆ ಒಳಗಾದ ರೂಪಾ ಜತೆ ಬದುಕಲು ಸಾಧ್ಯವಿಲ್ಲ’ ಎಂದು ಹೇಳಿದ್ದ. ಹೀಗಾಗಿ, ಪೊಲೀಸರು ಗಂಭೀರ ಆರೋಪವಲ್ಲದ ಪ್ರಕರಣ (ಎನ್‌ಸಿಐರ್‌) ದಾಖಲಿಸಿದ್ದರು ಎಂದು ಹೇಳಲಾಗಿದೆ. ಹೀಗಾಗಿ, ರೂಪಾ ಆಯುಕ್ತರ ಕಚೇರಿಗೆ ನ್ಯಾಯಕ್ಕಾಗಿ ಬಂದಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next