ಬೆಂಗಳೂರು: ಕೆಲ ದಿನಗಳ ಹಿಂದೆ ಶ್ರೀರಾಮಪುರದಲ್ಲಿ ನಡೆದ ಅಣ್ಣಮ್ಮ ದೇವಿ ಉತ್ಸವದ ಮೆರವಣಿಗೆ ವೇಳೆ ನೃತ್ಯ ಮಾಡುವ ವಿಚಾರಕ್ಕೆ ನಡೆದ ಜಗಳದ ದ್ವೇಷದಿಂದ ದುಷ್ಕರ್ಮಿಗಳ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದ ಗುರುವಾರ ರಾತ್ರಿ ನಡೆದಿದೆ.
ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಚಂದ್ರಶೇಖರ್ (28) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕರಣ ಸಂಬಂಧ ಸುದೀಪ್, ಸತೀಶ್, ವಿಜಯ್, ಕುಮಾರ್ ಎಂಬುವವರನ್ನು ಬಂಧಿಸಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಶೇಖರ್ ಶ್ರೀರಾಮಪುರ ಮುಖ್ಯರಸ್ತೆ ಸಮೀಪ ಫೋಟೋ ಸ್ಟುಡಿಯೋ ಹೊಂದಿದ್ದಾನೆ. ಗುರುವಾರ ರಾತ್ರಿ 11.30ರ ಸುಮಾರಿಗೆ ಸ್ಟುಡಿಯೋ ಬಾಗಿಲು ಹಾಕಿಕೊಂಡು ಸಹೋದರ ಪೆರುಮಾಳ್ ಶರ್ಮಾ ಜತೆ ಬೈಕ್‌ನಲ್ಲಿ ಮನೆ ಕಡೆ ಹೋಗುವಾಗ ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಭಯಗೊಂಡ ಪೆರುಮಾಳ್, ತಪ್ಪಿಸಿಕೊಂಡಿದ್ದಾನೆ. ಈತನ ಕೂಗಾಟ ಕೇಳಿದ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಂದ್ರಶೇಖರ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಂದ್ರಶೇಖರ್ ಕಳೆದ ವಾರ ಅಣ್ಣಮ್ಮ ದೇವಿ ಉತ್ಸವದಲ್ಲಿ ನೃತ್ಯ ಮಾಡುತ್ತಿದ್ದಾಗ ಆರೋಪಿಗಳ ಜತೆ ಜಗಳವಾಡಿದ್ದ.
ಹೀಗಾಗಿ ಚಂದ್ರಶೇಖರ್ ಕೊಲೆ ಮಾಡಲು ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಸತೀಶ್, ಗುರುವಾರ ರಾತ್ರಿ ತನ್ನ ಸಹಚರರ ಜತೆ ಚಂದ್ರಶೇಖರ್ ಮೇಲೆ ದಾಳಿ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.