ಬೆಳಗಾವಿ: ಸರಕಾರ ಉರುಳಿಸುವ ಆತುರ ನನಗಿಲ್ಲ. ಆದರೆ ನೆರೆ ಸಂತ್ರಸ್ತರ ಮತ್ತು ರಾಜ್ಯದ ಜನತೆ ಹಿತೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರವನ್ನು ಉಳಿಸಿಕೊಳ್ಳುವುದು ಮತ್ತು ಬಿಡುವುದು ನನ್ನ ಕೈಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳುವ ಮೂಲಕ ಮತ್ತೆ ಬಿಜೆಪಿ ಹಾಗೂ ಜೆಡಿ ಎಸ್ ಸಮ್ಮಿಶ್ರ ಸರ್ಕಾರದ ಸುಳಿವು ನೀಡಿದರು.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸರ್ಕಾರ ಅಧಿಕಾರದಿಂದ ಕೆಳಗಿಳಿಸಿ ಚುನಾವಣೆಗೆ ಸಜ್ಜಾದರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುವವರು ಯಾರು? ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆಗೆ ಹೋಗುವುದು ಸರಿಯಲ್ಲ. ಹಾಗಾಗಿ ಸದ್ಯ ಆಡಳಿತ ನಡೆಸುತ್ತಿರುವ ಯಡಿಯೂರಪ್ಪ ಸರ್ಕಾರ ಪೂರ್ಣಾವಧಿ ಆಡಳಿತ ನಡೆಸಬೇಕು ಎಂಬುದು ಜನತೆ ಪರವಾಗಿ ನಾನು ಆಶಿಸುತ್ತೇನೆ ಎಂದರು. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೊಸದಾಗಿ ಚುನಾವಣೆ ನಡೆಯುವ ಕನಸು ಕಾಣುತ್ತಿದ್ದಾರೆ. ಅದು ಕೇವಲ ಹಗಲು ಗನಸಾಗಲಿದೆ ಎಂದು ತಿರುಗೇಟು ನೀಡಿದರು.
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಚುನಾವಣೆ ನಡೆಸಲು ಸರ್ಕಾರವು ಚುನಾವಣೆ ಆಯೋಗಕ್ಕೆ 15 ಕೋಟಿ ರೂ. ನೀಡಬೇಕು. ಇನ್ನೂ 224 ಕ್ಷೇತ್ರಗಳಿಗೆ ಚುನಾವಣೆ ನಡೆಸಬೇಕಾದರೆ 240 ಕೋಟಿ ರೂ. ನೀಡಬೇಕು. ಇಂತಹ ನೆರೆ ಪರಿಸ್ಥಿತಿಯಲ್ಲಿ ಚುನಾವಣೆಗಳನ್ನು ನಡೆಸುವುದು ಅವಶ್ಯಕತೆ ಇಲ್ಲ. ಹಾಗಾಗಿ ಸರ್ಕಾರ ಉಳಿಸಿಕೊಳ್ಳುವುದು ಅಥವಾ ಬಿಡುವುದು ನನ್ನ ಕೈಯಲ್ಲಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.
ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿನ ಚುನಾವಣೆ ಫಲಿತಾಂಶ ಮತ್ತು ರಾಜ್ಯದಲ್ಲಿ ಪರಿಸ್ಥಿತಿಗಳನ್ನು ಅವಲೋಕಿಸಿದರೆ ಉಪ ಚುನಾವಣೆ ಮುಂದೂಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಉಪ ಚುನಾವಣೆ ನಡೆದರೆ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದು ಕುಮಾರಸ್ವಾಮಿ ಹೇಳಿದರು. ಯಡಿಯೂರಪ್ಪ ಸರ್ಕಾರಕ್ಕೆ ಬೆಂಬಲ ನೀಡಬೇಕು ಅಥವಾ ಬಿಡಬೇಕು ಎಂಬುದರ ಕುರಿತು ಉಪ ಚುನಾವಣೆ ಫಲಿತಾಂಶದ ಬಳಿಕ ನಿರ್ಧಾರ ಪ್ರಕಟಿಸಲಾಗುವುದು ಎಂದರು
ಕಾಂಗ್ರೆಸ ಪಕ್ಷದ ಮುಖಂಡರು ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹಗಲು ಗನಸು ಕಾಣುತ್ತಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರದ ಆಸೆಗಾಗಿ ಪಾದಯಾತ್ರೆ ನಡೆಸಲು ಸಜ್ಜಾಗುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ 5 ವರ್ಷದ ಅಧಿಕಾರದ ಅವಧಿಯಲ್ಲಿ ನೀರಾವರಿ ಇಲಾಖೆಗೆ ಏಕಾಏಕಿ 1.2 ಲಕ್ಷ ಕೋಟಿ ರೂ. ಕಾಮಗಾರಿಗೆ ಅನುಮತಿ ನೀಡಿದ್ದಾರೆ. ವಸತಿ ನಿಗಮಕ್ಕೆ 29 ಸಾವಿರ ಕೋಟಿ ರೂ. ನೀಡುವುದು ಬಾಕಿ ಉಳಿದಿದೆ. ಪುಕ್ಕಟೆ ಅಕ್ಕಿ ಯೋಜನೆಯ 800 ಕೋಟಿ ರೂ. ಬಾಕಿ ಹಣ ಕುಮಾರಸ್ವಾಮಿ ಭರಿಸಬೇಕಾಯಿತು. 22 ಸಾವಿರ ಕೋಟಿ ರೂ. ಲೋಕೋಪಯೋಗಿ ಇಲಾಖೆ ಕಾಮಗಾರಿಗೆ ಅನುಮೋದನೆ ನೀಡಿದ್ದು ಇವರ ಸಾಧನೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಕಬ್ಬಿನ ಬಿಲ್ ನೀಡದವರು ಸಾಹುಕಾರರೇ?
ಕಬ್ಬಿನ ಬಾಕಿ ಬಿಲ್ ನೀಡದವರು, ಜನರ ಸಮಸ್ಯೆಗಳಿಗೆ ಸ್ಪಂದಿಸದವರನ್ನು ಬೆಳಗಾವಿ ಜಿಲ್ಲೆಯ ಸಾಹುಕಾರರು ಎಂದು ಕೆಲ ಅಮಾಯಕರು ಹೇಳುತ್ತಿದ್ದಾರೆ. ಅವರೆಲ್ಲಾ ಯಾವ ರೀತಿ ಸಾಹುಕಾರ, ಹೇಗೆ ಸಾಹುಕಾರ ಆದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಹರಿಹಾಯ್ದರು. ಕ್ಷೇತ್ರದಲ್ಲಿ ಸಾಧನೆ ಮಾಡದವರು ಬೆಟ್ಟದಲ್ಲಿ ಕಲ್ಲು ಹೊಡೆಯುವ ಸಾಹಸಕ್ಕೆ ಕೈ ಹಾಕಿದ್ದಾರೆ. ಹಾಗಾಗಿ ಗೋಕಾಕ ಕ್ಷೇತ್ರದ ಜನತೆ ಇದೀಗ ಒಳ್ಳೆಯ ಅವಕಾಶ ಬಂದಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಎರಡು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆಯಿಂದ ಮುಕ್ತಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.