ವರ್ಷಾಂತ್ಯ ಹತ್ತಿರವಾಗುತ್ತಿದ್ದಂತೆ ಗಾಂಧಿನಗರದಲ್ಲಿ ಸಿನಿಮಾ ಚಟುವಟಿಕೆಗಳು ಇನ್ನಷ್ಟು ಗರಿಗೆದರಿದೆ. ಬಿಗ್ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿವೆ, ಬಿಗ್ ಸ್ಟಾರ್ ಚಿತ್ರಗಳು ಬರುತ್ತಿವೆ, ಥಿಯೇಟರ್ ಪ್ರಾಬ್ಲಿಂ ಅಂತ ಕಳೆದ ಕೆಲ ತಿಂಗಳಿನಿಂದ ಬಿಡುಗಡೆಯನ್ನು ಮುಂದೂಡುತ್ತಾ ಬಂದಿರುವ ಅನೇಕ ಚಿತ್ರಗಳು, ಅದರಲ್ಲೂ ಬಹುತೇಕ ಹೊಸಬರ ಚಿತ್ರಗಳು ಇನ್ನು ನಾಲ್ಕೈದು ವಾರದೊಳಗೆ ತೆರೆಗೆ ಬರಲೇ ಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿವೆ.
ಚಿತ್ರರಂಗದ ಅಂಕಿ-ಅಂಶಗಳ ಪ್ರಕಾರ ಇಲ್ಲಿಯವರೆಗೆ ಕನ್ನಡದಲ್ಲಿ ಸುಮಾರು 170 ಚಿತ್ರಗಳು (ಡಬ್ಬಿಂಗ್ ಕನ್ನಡ ಚಿತ್ರಗಳನ್ನು ಹೊರತುಪಡಿಸಿ), ಕನ್ನಡ ಚಿತ್ರರಂಗಕ್ಕೆ ಹೊಂದಿಕೊಂಡಿರುವ ತುಳು, ಕೊಂಕಣಿ, ಕೊಡವ ಮತ್ತಿತರ ಭಾಷೆಗಳ 20ಕ್ಕೂ ಹೆಚ್ಚು ಚಿತ್ರಗಳು ಸೇರಿದಂತೆ ಸುಮಾರು 190ಕ್ಕೂ ಹೆಚ್ಚು ಚಿತ್ರಗಳು ಕಳೆದ ಜನವರಿಯಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ತೆರೆಕಂಡಿವೆ.
ಈಗಾಗಲೇ ನವೆಂಬರ್ ಕೊನೆಯಿಂದ ಡಿಸೆಂಬರ್ ಕೊನೆಯವರೆಗೆ ಸುಮಾರು 25ಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬರುವುದಾಗಿ ಘೋಷಿಸಿಕೊಂಡಿವೆ. ಈ ಎಲ್ಲಾ ಚಿತ್ರಗಳು ಇದೇ ವರ್ಷಾಂತ್ಯಕ್ಕೆ ತೆರೆಗೆ ಬಂದರೆ ಈ ವರ್ಷ ಕೂಡ ತೆರೆಗೆ ಬಂದ ಚಿತ್ರಗಳ ಸಂಖ್ಯೆ ಸುಮಾರು 220ರ ಗಡಿ ದಾಟುವುದರಲ್ಲಿ ಅನುಮಾನವಿಲ್ಲ.
ಇನ್ನು ಇಲ್ಲಿಯವರೆಗೆ ಸುಮಾರು 70ಕ್ಕೂ ಹೆಚ್ಚು ಚಿತ್ರಗಳು ಸೆನ್ಸಾರ್ ಅನುಮತಿ ಪಡೆದುಕೊಂಡರೂ, ಸಮಯ ಹೊಂದಾಣಿಕೆಯಾಗದ ಕಾರಣ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿವೆ. ಕೆಲವು ಚಿತ್ರಗಳು ತಮ್ಮ ಬಿಡುಗಡೆಯನ್ನು ಮುಂದಿನ ವರ್ಷದ ಆರಂಭಕ್ಕೆ ಮುಂದೂಡಿಕೊಂಡರೆ, ಇನ್ನು ಕೆಲವು ಚಿತ್ರಗಳು ಕೊನೆ ಕ್ಷಣದಲ್ಲಿ ಏನಾದರೂ ಬಿಡುಗಡೆಗೆ ಅವಕಾಶ ಸಿಗಬಹುದಾ ಎಂಬ ನಿರೀಕ್ಷೆಯಲ್ಲಿವೆ.
ಬಿಡುಗಡೆಯಲ್ಲಿ ಇಳಿಕೆಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕನ್ನಡ ಸಿನಿಮಾಗಳ ಬಿಡುಗಡೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಕೇವಲ ಕನ್ನಡದಿಂದಲೇ 230 ಪ್ಲಸ್ ಚಿತ್ರಗಳು ಬಿಡುಗಡೆಯಾಗಿದ್ದವು.
ಆದರೆ, ಈ ವರ್ಷದ ಇಲ್ಲಿವರೆಗಿನ ಲೆಕ್ಕಾಚಾರ ನೋಡಿದರೆ ಕನ್ನಡದಿಂದ 200 ಪ್ಲಸ್ ಚಿತ್ರಗಳಷ್ಟೇ ಬಿಡುಗಡೆಯಾಗಬಹುದು. ನವೆಂಬರ್ ಕೊನೆಯ ಎರಡು ವಾರಗಳಲ್ಲಿ ತಲಾ ಐದೈದು ಹಾಗೂ ಡಿಸೆಂಬರ್ ನಾಲ್ಕು ವಾರಗಳಲ್ಲಿ ಐದೈದು ಚಿತ್ರಗಳು ಬಿಡುಗಡೆಯಾದರೂ 200 ಪ್ಲಸ್ ಚಿತ್ರಗಳಷ್ಟೇ ಬಿಡುಗಡೆಯಾದಂತಾಗುತ್ತದೆ. ಇನ್ನು ಇತರ ಪ್ರಾದೇಶಿಕ ಭಾಷೆಗಳನ್ನು ಸೇರಿಸಿದರೆ 220 ಪ್ಲಸ್ ಚಿತ್ರಗಳು ಒಟ್ಟು ಬಿಡುಗಡೆಯಾದಂತಾಗುತ್ತದೆ.
*ವರ್ಷಾಂತ್ಯಕ್ಕೆ 200 ಪ್ಲಸ್ ಕನ್ನಡ ಚಿತ್ರಗಳ ಬಿಡುಗಡೆ ಸಾಧ್ಯತೆ
* ಪ್ರಾದೇಶಿಕ ಭಾಷಾ ಚಿತ್ರಗಳು ಸೇರಿ 220 ಪ್ಲಸ್ ನಿರೀಕ್ಷೆ
* ಕಳೆದ ವರ್ಷಕ್ಕೆ ಹೋಲಿಸಿದರೆ ಬಿಡುಗಡೆಯಲ್ಲಿ ಇಳಿಕೆ ಸಂಭವ?