Advertisement

IAF: 2016ರಲ್ಲಿ ನಾಪತ್ತೆಯಾದ ಐಎಎಫ್ ವಿಮಾನದ ಅವಶೇಷ ಈಗ ಪತ್ತೆ

10:36 PM Jan 12, 2024 | Pranav MS |

ನವದೆಹಲಿ: ಏಳೂವರೆ ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ 29 ಸಿಬ್ಬಂದಿ ಸಮೇತವಾಗಿ ನಾಪತ್ತೆಯಾಗಿದ್ದ ಸಾರಿಗೆ ವಿಮಾನದ ಅವಶೇಷವೂ ಇದೀಗ ಬಂಗಾಳಕೊಲ್ಲಿ ಸಮುದ್ರದ 3.4ಕಿ.ಮೀ. ಆಳದಲ್ಲಿ ಪತ್ತೆಯಾಗಿದೆ.

Advertisement

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಓಶಿಯನ್‌ ಟೆಕ್ನಾಲಜಿ ಸಂಸ್ಥೆಯು ಸಮುದ್ರದ ಆಳದಲ್ಲಿ ನಿಯೋಜಿಸಿರುವ ಅಟಾನಾಮಸ್‌ (ಸ್ವಾಯತ್ತ) ಅಂಡರ್‌ ವಾಟರ್‌ ವೆಹಿಕಲ್‌ (ಎಯುವಿ) ವಿಮಾನದ ಅವಶೇಷಗಳ ಚಿತ್ರವನ್ನು ಸೆರೆ ಹಿಡಿದಿದೆ. ಅದನ್ನು ಪರಿಶೀಲಿಸಿದಾಗ ಚೆನ್ನೈ ಕರಾವಳಿಯಿಂದ 310 ಕಿ.ಮೀ.ದೂರದಲ್ಲಿ ಪತ್ತೆಯಾಗಿರುವ ಅವಶೇಷ ಏಳೂವರೆ ವರ್ಷದ ಹಿಂದೆ ಕಾಣೆಯಾದ ಎಎನ್‌-32 ವಿಮಾನದ್ದು ಎಂಬುದು ದೃಢಪಟ್ಟಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

2016ರ ಜುಲೈ 22ರಂದು ಕೆ-2743 ನೋಂದಣಿ ಹೊಂದಿರುವ ಎಎನ್‌-32 ವಿಮಾನವು ಬಂಗಾಳಕೊಲ್ಲಿ ಕಾರ್ಯಾಚರಣೆ ಸಂದರ್ಭದಲ್ಲಿ 29 ಸಿಬ್ಬಂದಿಯೊಂದಿಗೆ ನಾಪತ್ತೆಯಾಗಿತ್ತು. ಆ ಬಳಿಕ ಸಿಬ್ಬಂದಿಯನ್ನಾಗಲಿ, ವಿಮಾನದ ಅವಶೇಷವನ್ನಾಗಲಿ ಹುಡುಕಲು ಸಾಧ್ಯವಾಗಿರಲಿಲ್ಲ. ಇದೀಗ ಅದೇ ಪ್ರದೇಶದಲ್ಲಿ ಅವಶೇಷ ಪತ್ತೆಯಾಗಿದ್ದು, ಬೇರೆ ಯಾವುದೇ ವಿಮಾನಗಳು ಈ ಪ್ರದೇಶದಲ್ಲಿ ಪತನಗೊಂಡಿರುವುದು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಓಶಿಯನ್‌ ಟೆಕ್ನಾಲಜಿ ಕಾರ್ಯನಿರ್ವಹಿಸಿದ್ದು, ಮಲ್ಟಿಬೀಮ್‌ ಸೊನಾರ್‌, ಸಿಂಥೆಟಿಕ್‌ ಅಪೆಂಚರ್‌ ಸೊನಾರ್‌ನಂಥ ವಿವಿಧ ಪೆಲೋಡ್‌ಗಳನ್ನು ಬಳಸಿ ಆಳ ಸಮುದ್ರದ ಶೋಧ ನಡೆಸಿ ಅವಶೇಷ ಪತ್ತೆ ಹಚ್ಚಿದೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next