Advertisement

ಗಾಯಗೊಂಡಿದ್ದ ಯೋಧ ಸಾವು

11:10 AM May 19, 2019 | Team Udayavani |

ಬೀಳಗಿ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತಾಲೂಕಿನ ಅರಕೇರಿ ಗ್ರಾಮದ ಯೋಧ ವೆಂಕಟೇಶ ಅಪ್ಪಶಿ ಬೆನಕಟ್ಟಿ (31) ಶನಿವಾರ ನಿಧನರಾದರು.

Advertisement

ಸಿಐಎಸ್‌ಎಫ್‌ನಲ್ಲಿ ಸೇವೆಗೆ ಸೇರಿದ್ದ ಯೋಧ ವೆಂಕಟೇಶ, ಪ್ರಸ್ತುತ ಜಾರ್ಖಂಡ ರಾಜ್ಯದ ಸಿಂಗ್ರೋಣಿಯ ಎಸ್‌ಸಿಸಿಎಲ್ ಯುನಿಟ್ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ನಾಲ್ಕು ತಿಂಗಳು ಜೀವನ್ಮರಣದ ಜತೆಗೆ ಹೋರಾಟ: ಕಳೆದ 10 ವರ್ಷಗಳಿಂದ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ, ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆಂದು 2018 ಡಿಸೆಂಬರ್‌ 24ರಂದು ರಜೆಯ ಮೇಲೆ ಸ್ವ-ಗ್ರಾಮಕ್ಕೆ ಬಂದಿದ್ದರು. ಪತ್ನಿಯ ಸೀಮಂತ ಕಾರ್ಯಕ್ರದಲ್ಲಿ ಭಾಗವಹಿಸಿ ಕುಟುಂಬ ಸದಸ್ಯರೊಂದಿಗೆ ಸಂಭ್ರಮಿಸಿದ್ದರು. ಸೀಮಂತ ಕಾರ್ಯಕ್ರಮದ ಬಳಿಕ ಹಲಗಲಿಗೆ ಹೋಗಿ ಬರುವ ಸಂದರ್ಭದಲ್ಲಿ ಹಲಗಲಿ ಮತ್ತು ಅರಕೇರಿ ರಸ್ತೆ ಮಧ್ಯದಲ್ಲಿ ಜರುಗಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಬಾಗಲಕೋಟೆಯಲ್ಲಿ ಕೆಲದಿನ ಚಿಕಿತ್ಸೆ ಕೊಡಿಸಿದರು. ಅಲ್ಲಿ ಗುಣಮುಖರಾಗದೇ ಇರುವುದರಿಂದ ಮಹಾರಾಷ್ಟ್ರ ರಾಜ್ಯದ ಸೋಲಾಪುರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿ ನಾಲ್ಕು ತಿಂಗಳು ಜೀವನ್ಮರಣದ ಜೊತೆಗೆ ಹೋರಾಟ ನಡೆಸಿದ್ದ ಅವರು ಗುಣಮುಖರಾಗಿ ಮನೆಗೆ ಬಂದಿದ್ದರು.

ದಿಢೀರ್‌ ಅಸ್ವಸ್ಥರಾದ ಯೋಧ: ಕುಟುಂಬ ಸದಸ್ಯರೊಂದಿಗೆ ಖುಷಿಯಾಗಿದ್ದ ಯೋಧ ವೆಂಕಟೇಶ, ಶುಕ್ರವಾರ ದಿಢೀರ್‌ ಅಸ್ವಸ್ಥರಾಗಿದ್ದರು. ಮತ್ತೆ ಸೊಲಾಪುರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವೆಂಕಟೇಶ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು. ಮೃತ ಯೋಧ ವೆಂಕಟೇಶಪತ್ನಿ, ಮೂರು ತಿಂಗಳ ಪುತ್ರ, ತಾಯಿ, ತಂದೆ, ಸಹೋದರ, ಸಹೋದರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಸಂಬಂಧಿಕರ ಆಕ್ರಂದನ: ಮೃತ ಯೋಧನ ಪಾರ್ಥಿವ ಶರೀರ ಶನಿವಾರ 12 ಗಂಟೆಗೆ ಸ್ವ- ಗ್ರಾಮಕ್ಕೆ ಆಗಮಿಸಿತು. ಯೋಧನ ಪತ್ನಿ ಶ್ವೇತಾ, ತಾಯಿ ಸುವರ್ಣಾ ಸೇರಿದಂತೆ ಕುಟುಂಬದ ಸದಸ್ಯರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಹಸ್ರಾರು ಜನರ ಅಶ್ರುತರ್ಪಣದ ನಡುವೆ ಗ್ರಾಮದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಜರುಗಿತು.

Advertisement

ಶ್ರದ್ಧಾಂಜಲಿ ಸಭೆ: ಮಾರುತೇಶ್ವರ ದೇವಾಲಯದ ಮುಂದೆ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ, ಹನುಮಂತ ನಿರಾಣಿ ಮಾತನಾಡಿ, ಯೋಧರು ಭಾರತಾಂಬೆಯ ಸೇವೆಯಲ್ಲಿರುವುದರಿಂದ ದೇಶ ಸುರಕ್ಷಿತವಾಗಿದೆ. ಆದ್ದರಿಂದ ಯೋಧರನ್ನು ಮತ್ತು ಅವರ ಕುಟುಂಬ ವರ್ಗವನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು. ಅಗಲಿದ ಯೋಧನ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಕುಟುಂಬದ ಸದಸ್ಯರಿಗೆ ಅಗಲಿಕೆಯ ನೋವು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸಿದರು.

ಮುರನಾಳದ ಮಳೆರಾಜೇಂದ್ರ ಶ್ರೀ, ಗ್ರಾಪಂ ಅಧ್ಯಕ್ಷೆ ಶಾಂತಾ ಕಾಜಗಾರ, ತಾಪಂ ಸದಸ್ಯ ದ್ಯಾವನಗೌಡ ಪಾಟೀಲ, ತಹಶೀಲ್ದಾರ್‌ ಅಮರೇಶ ಬಿರಾದಾರ, ಸಿಪಿಐ ರವಿಚಂದ್ರ ಡಿ.ಬಿ., ಕೃಷ್ಣಗೌಡ ಪಾಟೀಲ, ಸಿದ್ದಣ್ಣ ದೇಸಾಯಿ, ಕಂದಾಯ ನಿರೀಕ್ಷಕ ಎಂ.ಕೆ. ಹಿರೇಮಠ, ಗ್ರಾಮಲೆಕ್ಕಾಧಿಕಾರಿ ಎಂ.ಎ. ಧರಿಗೊಂಡ, ಪಿಡಿಒ ಶಿವಾನಂದ ಕೋಟೆನ್ನವರ ಸೇರಿ‌ದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಕೂಡಗಿ ಎನ್‌ಟಿಪಿಸಿ ಘಟಕದ ಸಿಐಎಸ್‌ಎಫ್‌ನ ಇನ್ಸ್‌ಫೆಕ್ಟರ್‌ ಜಿ.ಡಿ.ರಾವ್‌, ಹವಾಲ್ದಾರ ಶಿವಪುತ್ರ ಅಂತಿಮ ನಮನ ಸಲ್ಲಿಸಿದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಕೂಡಗಿಯ ಸಿಐಎಸ್‌ಎಫ್‌ನ ಯೋಧರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ನಂತರ, ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next