Advertisement
ಚಿಕ್ಕ ವಯಸ್ಸಿನಲ್ಲಿಯೇ ಕೊಳಲಿನ ಆಸಕ್ತಿ ಹೇಗೆ ಬಂತು? 13ರ ವಯಸ್ಸಿನಲ್ಲಿಯೇ ಕಛೇರಿ ಕೊಟ್ಟಿದ್ದರಲ್ಲ?ನನ್ನ ತಂದೆ ಡಾ|ಭಾನು ಮಜುಂದಾರ್ ಹೋಮಿಯೋಪಥಿ ವೈದ್ಯರಾಗಿದ್ದಲ್ಲದೆ ತೈಲವರ್ಣ ಚಿತ್ರಕಾರರಾಗಿದ್ದರು. ಅವರು ಹವ್ಯಾಸಿ ಬಾನ್ಸುರಿ ವಾದಕರು. ಬಾನ್ಸುರಿಯ ದಂತಕಥೆಯಾದ ಕಲಾವಿದ ಪನ್ನಾಲಾಲ್ ಘೋಷ್ ನನ್ನ ತಂದೆಯವರಿಗೆ ಗುರುಗಳಾಗಿದ್ದರು. ನನ್ನ ಅಣ್ಣ ಆಗಷ್ಟೇ ಹುಟ್ಟಿದ್ದ. “ನಿನ್ನ ಮಗನನ್ನು ಕೊಳಲುವಾದಕನನ್ನಾಗಿ ಮಾಡಬೇಕು’ ಎಂದು ತಂದೆಗೆ ಪನ್ನಾಲಾಲ್ ಹೇಳಿದ್ದರು. ಅವರು ಮೃತ ಪಟ್ಟ ಮೂರು ವರ್ಷಗಳ ಬಳಿಕ 1963ರಲ್ಲಿ ನಾನು ಜನಿಸಿದೆ. ನಾಲ್ಕು ವರ್ಷವಾಗಿರುವಾಗಲೇ ತಂದೆ ನನ್ನ ಕೈಗೆ ಕೊಳಲು ಕೊಟ್ಟರು. ಐದೂವರೆ ವರ್ಷದಲ್ಲಿ ಕೊಳಲು ಊದುತ್ತಿದ್ದೆ. 13ನೆಯ ವಯಸ್ಸಿನಲ್ಲಿ ಮುಂಬಯಿ ಉಲ್ಲಾಸನಗರದಲ್ಲಿ ಕಛೇರಿ ಕೊಟ್ಟೆ. ಸಂಗೀತ ಕ್ಷೇತ್ರದ ದಿಗ್ಗಜರಾದ ಪಂ| ಜಸ್‌ರಾಜ್, ಭೀಮಸೇನ್ ಜೋಶಿ ಅವರಂತಹ ಹಿರಿಯ ಕಲಾವಿದರು ಅದರಲ್ಲಿ ಭಾಗವಹಿಸಿದ್ದರು.
ಸ್ವಂತ ಕಛೇರಿ ಕೊಡುವ ಮುನ್ನ ಬಿಸ್ಮಿಲ್ಲಾ ಖಾನ್‌ರಂತಹ ಮೇರು ಕಲಾವಿದರೊಂದಿಗೆ ಪಾಲ್ಗೊಂಡಿದ್ದೆ. ಸ್ವಂತ ಕಛೇರಿ ಕೊಡುವಾಗಲೂ ಕಂಪನವಾಗಲಿಲ್ಲ. ಚಿಕ್ಕಪ್ರಾಯದಲ್ಲಿ ಕಂಪನ ಏನೆಂದು ತಿಳಿಯದು. ದೊಡ್ಡವರಾದ ಅನಂತರವೇ ಅವೆಲ್ಲ ಆಗುವುದು! ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾನ್ಸುರಿಗೆ ಮಹತ್ವದ ಸ್ಥಾನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನವೇನು?
ವಿದೇಶಗಳಲ್ಲಿ ಪ್ರಸ್ತುತ ಸಿತಾರ್‌ಗೆ ಸಂಗೀತೋಪಕರಣಗಳಲ್ಲಿ ಅಗ್ರ ಸ್ಥಾನವಿದೆ. ಕೊಳಲನ್ನೂ ಜನಪ್ರಿಯಗೊಳಿಸುವ ಇರಾದೆಯಿಂದ “ರೋಣು ಮಜುಂದಾರ್ ಫ್ಲೂಟ್ಸ್ ಫೌಂಡೇಶನ್’ ಸ್ಥಾಪಿಸಿ ಕಾರ್ಯ ನಿರತನಾಗಿದ್ದೇನೆ. ಇದು ಸಿತಾರ್ ಜತೆ ಸ್ಪರ್ಧೆಯಲ್ಲ. ಅತೀ ಮುಂದುವರಿದ ದೇಶವಾದ ಅಮೆರಿಕದ ಶಿಕಾಗೋದಲ್ಲಿ ನೆಲೆಸಿ ಹಾಲಿವುಡ್ ಚಲನಚಿತ್ರದಲ್ಲಿಯೂ ಕೊಳಲಿಗೆ ಸ್ಥಾನ ಕೊಡಿಸಿದ್ದೇನೆ. ಹಾಲಿವುಡ್‌ನ ಮೈಕ್‌ನಿಕಲ್ಸ್ ಬಾನ್ಸುರಿಗೆ ಅವಕಾಶ ಕೊಟ್ಟರು. ವಿದೇಶಗಳಲ್ಲಿ ಇಂಡಿಯನ್ ಫೂÉಟ್ ಎನ್ನುತ್ತಿದ್ದರು. ನಾನು ಬಾನ್ಸುರಿ ಎಂಬ ಹೆಸರನ್ನೇ ಚಾಲ್ತಿಗೆ ತರುತ್ತಿದ್ದೇನೆ. ಶಿಕಾಗೋದ ಸಾಧನಾ ಸಂಗೀತ ಶಾಲೆ ವಿ.ವಿ. ಮಟ್ಟದಲ್ಲಿ ಬೆಳೆದಿದೆ.
Related Articles
ನಾಶಿಕ್‌ನಲ್ಲಿ ಕುಂಭಮೇಳ ಜರಗಿದಾಗ 2017ರಲ್ಲಿ ಗಿನ್ನೆಸ್ ಸಾಧನೆಯನ್ನು ಮಾಡಿದೆ. ಹವ್ಯಾಸಿಗಳೂ, ಕಲಿಕೆ ಹಂತದವರೂ ಸಹಿತ 5,378 ಕಲಾವಿದರು ಪಾಲ್ಗೊಂಡಿದ್ದರು. ಮುಂದೆ ಫ್ಲೂಟ್ಸ್ ಇನ್ ಸಿಂಫನಿ ಸಹಯೋಗದಲ್ಲಿ ವೇದಿಕೆಯಲ್ಲಿ ಲೈವ್ ಕಾರ್ಯಕ್ರಮ ನೀಡಬೇಕೆಂದಿದ್ದೇನೆ.
Advertisement
ನಿಮ್ಮ ಬಾನ್ಸುರಿಗೆ ಶಂಖ ಬಾನ್ಸುರಿ ಎಂದು ಹೆಸರೇಕೆ ನೀಡಿದಿರಿ?ನಾನು ಚಾಲ್ತಿಗೆ ತಂದದ್ದು ಮೂರೂವರೆ ಅಡಿ ಉದ್ದದ ಬಾನ್ಸುರಿ. ಇದು ಮಂದ್ರ ಸ್ಥಾಯೀ (ಕೆಳಸ್ತರದ ಧ್ವನಿ) ವಾದನಕ್ಕೆ ಹೆಚ್ಚು ಅನುಕೂಲ. (ಧ್ವನಿ ಹೊರಡಿಸಿ) ನೋಡಿ ಇದರ ಧ್ವನಿ ಶಂಖದ ಧ್ವನಿಯಂತಿಲ್ಲವೆ? ಆದ್ದರಿಂದ ಈ ಹೆಸರು. ಈಗ ಇದನ್ನು ಕರ್ನಾಟಕ ಸಂಗೀತದವರೂ ಅನುಸರಿಸುತ್ತಿದ್ದಾರೆ. ಕರ್ನಾಟಕ, ಕರಾವಳಿಯ ಕಲಾವಿದರ ಜತೆ ನೀವು ಕಛೇರಿ ಕೊಟ್ಟಿದ್ದೀರಿ? ಈ ಪ್ರದೇಶದ ಬಗ್ಗೆ ಏನನಿಸುತ್ತಿದೆ?
ಇದೊಂದು ಸಂಗೀತ ವಲಯ (ಮ್ಯೂಸಿಕಲ್ ಬೆಲ್ಟ್). ಇಲ್ಲಿ ಕರ್ನಾಟಕ ಮತ್ತು ಹಿಂದೂಸ್ಥಾನೀ ಸಂಗೀತದ ಸಂಗಮ, ಸಮತೋಲನವಿದೆ. ನಾನು ಉಡುಪಿಯಲ್ಲಿ ಎರಡನೆಯ ಬಾರಿಗೆ ಕಾರ್ಯಕ್ರಮ ನೀಡಿದ್ದೇನೆ. ಹಿರಿಯರಾದ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ರಾಜಶೇಖರ ಮನ್ಸೂರ್ ಮೊದಲಾದ ಹಿಂದೂಸ್ಥಾನೀ ಕಲಾವಿದರು ಈ ರಾಜ್ಯದವರು. ಕದ್ರಿ ಗೋಪಾಲನಾಥ್‌ರಂತಹ ಕಲಾವಿದರ ಜತೆ ಜುಗಲ್‌ಬಂದಿ ನಡೆಸಿದ್ದೇನೆ. ಕದ್ರಿಯಣ್ಣ ಈಗಿಲ್ಲ. ಕರ್ನಾಟಕದ ಬಾಲಮುರಳಿಕೃಷ್ಣ, ಮೈಸೂರು ಮಂಜುನಾಥ್, ನಾಗರಾಜ್, ಕುಮರೇಶ್, ಗಣೇಶ್ ಜತೆ ಜುಗಲ್‌ಬಂದಿ ನಡೆಸಿದ್ದೇನೆ. ಪಂ. ಭೀಮಸೇನ್ ಜೋಶಿ ಅವರ ಹುಟ್ಟೂರು ಗದಗದಲ್ಲಿಯೂ ಕಾರ್ಯಕ್ರಮ ನೀಡಿದ್ದೇನೆ. ನನ್ನ ಶಿಷ್ಯ ಕಲಬುರಗಿ ಮೂಲದ ಶಿವಲಿಂಗ ರಾಜಾಪುರ ಒಬ್ಬ ಶ್ರೇಷ್ಠ ಬಾನ್ಸುರಿವಾದಕನಾಗಿ ಮೂಡಿಬಂದಿರುವುದು ನನಗೆ ಸಂತಸ ತರುತ್ತಿದೆ. ಅಪ್ಪ-ಮಗ ಜತೆಗೂಡಿದ ಕಾರ್ಯಕ್ರಮವನ್ನು ಕರಾವಳಿಯವರು ನಿರೀಕ್ಷಿಸಬಹುದೇ?
ನನ್ನ ಎರಡನೆಯ ಮಗ ಹೃಷಿಕೇಶ ಕೊಳಲು ನುಡಿಸುತ್ತಾನೆ. ಈಗ ಮುಂಬಯಿಯಲ್ಲಿದ್ದು ಪದವಿ ತರಗತಿ ಓದುತ್ತಿದ್ದಾನೆ. ಮುಂದಿನ ದಿನಗಳಲ್ಲಿ ನಾನೂ, ಆತನೂ ಜತೆಗೂಡಿ ಕಾರ್ಯಕ್ರಮ ನೀಡಬೇಕೆಂಬ ಹಂಬಲವಿದೆ. – ಮಟಪಾಡಿ ಕುಮಾರಸ್ವಾಮಿ